ದಯವಿಟ್ಟು ನನ್ನ ಬೆಳೆ ಖರೀದಿಸಿ ನಾಳೆ ನನ್ನ ಮಗಳ ಮದುವೆ ಇದೆ : ಮಾರುಕಟ್ಟೆಯಲ್ಲಿ ಕಣ್ಣೀರಿಟ್ಟು ಬೇಡಿಕೊಂಡ ರೈತ

Published : Mar 12, 2026, 08:06 AM IST
Madhya Pradesh Farmer Breaks Down As Crop Sale Stalls

ಸಾರಾಂಶ

 ಮಗಳ ಮದುವೆಯ ಖರ್ಚಿಗಾಗಿ ತನ್ನ ಬೆಳೆಯನ್ನು ಮಾರಲು ಮಾರುಕಟ್ಟೆಗೆ ಬಂದ ರೈತನೊಬ್ಬ ಅಧಿಕಾರಿಯ ಗಲಾಟೆಯಿಂದ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಅಲ್ಲಿ ಉಂಟಾದ ಗಲಾಟೆಯಿಂದ ಮಾರುಕಟ್ಟೆ ಸ್ಥಗಿತಗೊಂಡು, ರೈತ ತನ್ನ ಬೆಳೆಯನ್ನು ಖರೀದಿಸುವಂತೆ ಕಣ್ಣೀರಿಡುತ್ತಾ ಬೇಡಿಕೊಂಡ ಘಟನೆ ವರದಿಯಾಗಿದೆ.

ಪಾನಮತ್ತ ಅಧಿಕಾರಿಯಿಂದಾಗಿ ಬಿಡ್ಡಿಂಗ್ ರದ್ದು ಮಾಡಿದ ಅಧಿಕಾರಿಗಳು

ಸರ್ಕಾರ ರೈತರ ಏಳಿಗೆಗೆ ಎಷ್ಟೊಂದು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸದಾ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಂದು ಕಡೆ ತಾವು ಬೆಳೆದ ಬೆಳೆಯನ್ನು ರೈತರೊಬ್ಬರು ಮಾರುಕಟ್ಟೆಗೆ ತಂದರೂ ಸರಿಯಾದ ಬೆಲೆ ನೀಡದೇ, ಅದನ್ನು ಖರೀದಿಸದೇ ಹೋಗಿದ್ದರಿಂದ ರೈತರೊಬ್ಬರು ಮಾರುಕಟ್ಟೆಯಲ್ಲೇ ಕಣ್ಣೀರಿಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಈ ಘಟನೆಗೆ ಈಗ ತೀವ್ರ ಆಕ್ರೋಶವಾಗಿದೆ.

ನಾಳೆ ಮಗಳ ಮದುವೆ ಇದೆ, ನನ್ನ ಬೆಳೆ ಖರೀದಿ ಮಾಡಿ ಎಂದು ಗೋಳಾಡಿದ ರೈತ

ರೈತರೊಬ್ಬರ ಪುತ್ರಿಯ ಮದುವೆ ಮರುದಿನವೇ ಇತ್ತು. ಮದುವೆಗೆ ದಿನ ಮೊದಲು ಅವರು ಮದುವೆಯ ಖರ್ಚಿಗಾಗಿ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಹೋಗಿದ್ದರಿಂದ ಆ ರೈತ ಕಣ್ಣೀರಿಟ್ಟಿದ್ದಾರೆ. ಮಧ್ಯಪ್ರದೇಶದ ಗುಣ ಜಿಲ್ಲೆಯ ನಾನಾಖೇಡಿ ಕೃಷಿ ಉಪಜ್ ಮಂಡಿಯಲ್ಲಿ ಈ ಘಟನೆ ನಡೆದಿದೆ. ಮಂಡಿಯ ಮಧ್ಯದಲ್ಲಿ ತಾವು ಹೊಸದಾಗಿ ಕೊಯ್ಲು ಮಾಡಿದ ಕೊತ್ತಂಬರಿ ಮತ್ತು ಸಾಸಿವೆ ಚೀಲಗಳನ್ನು ಇರಿಸಿಕೊಂಡು ಸುಡುವ ಬಿಸಿಲಿನಲ್ಲಿ ರೈತರೊಬ್ಬರು ಕೈಗಳನ್ನು ಕಟ್ಟಿಕೊಂಡು ಕಣ್ಣೀರು ಸುರಿಸುತ್ತಾ ನಿಂತಿದ್ದರು. ದಯವಿಟ್ಟು ನನ್ನ ಬೆಳೆಗಳನ್ನು ಖರೀದಿಸಿ ನನ್ನ ಮಗಳ ಮದುವೆ ನಾಳೆ ಎಂದು ಅವರು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರವೂ ಹುಟ್ಟಿದ ಕಂದ: ಇದು ಸರ್ಕಾರದ ಆಸ್ತಿ ಪರಿಹಾರ ಬೇಕು ಎಂದು ದಂಪತಿ ಪ್ರತಿಭಟನೆ

ಮಾರುಕಟ್ಟೆಯ ಅಧಿಕಾರಿಯೊಂದಿಗೆ ನಡೆದ ವಿವಾದದ ನಂತರ ಅಲ್ಲಿನ ಮಾರುಕಟ್ಟೆಯಲ್ಲಿ ಮಂಡಿ ಹರಾಜು ಪ್ರಕ್ರಿಯೆಯು ಸ್ಥಗಿತಗೊಂಡ ಬಳಿಕ ಈ ಮನಕಲುಕುವ ಘಟನೆ ನಡೆದಿದೆ. ವರದಿಯ ಪ್ರಕಾರ, ಹರಾಜು ಪ್ರಕ್ರಿಯೆಯ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಶರ್ಮಾ ವಿಪರೀತ ಮದ್ಯ ಸೇವಿಸಿದ್ದರು ಮತ್ತು ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿದರು ಎಂದು ರೈತರು ಆರೋಪಿಸಿದ್ದಾರೆ. ರೈತನೊಬ್ಬನ ಕೊತ್ತಂಬರಿ ಪ್ರತಿ ಕ್ವಿಂಟಲ್‌ಗೆ 5,700 ರೂ.ಗಳ ಅತ್ಯಧಿಕ ಬಿಡ್ ಪಡೆದಿದ್ದು, ಆದರೆ ಇನ್ಸ್‌ಪೆಕ್ಟರ್ ಚೀಟಿಯಲ್ಲಿ 5,400 ರೂ. ಎಂದು ಬರೆದಿದ್ದರಿಂದ ವಿವಾದ ಪ್ರಾರಂಭವಾಗಿದೆ. 300 ರೂಪಾಯಿಗಳ ವ್ಯತ್ಯಾಸವನ್ನು ಪ್ರಶ್ನಿಸಿದ ರೈತ ಪ್ರತಿಭಟಿಸಿದಾಗ ಅಲ್ಲಿ ಗಲಾಟೆ ಆರಂಭವಾಗಿದೆ.

ಮಾರುಕಟ್ಟೆ ಅಧಿಕಾರಿ ಕಂಠಪೂರ್ತಿ ಕುಡಿದು ಅವಾಚ್ಯವಾಗಿ ನಿಂದಿಸುತ್ತಾ ಗಲಾಟೆ ಮಾಡಿದರು. ಇದು ವ್ಯಾಪಾರಿಗಳ ಕೋಪಕ್ಕೂ ಕಾರಣವಾಯಿತು ಇದರಿಂದ ವ್ಯಾಪಾರಿಗಳು ಬಿಡ್ಡಿಂಗ್ ಅನ್ನು ಸಂಪೂರ್ಣವಾಗಿ ನಿಲ್ಲಿಸಿದರು ಮತ್ತು ಮಂಡಿಯಲ್ಲಿ ಖರೀದಿಗಳನ್ನು ಸ್ಥಗಿತಗೊಳಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದರಿಂದ ಬೆಳಗ್ಗೆ 7 ಗಂಟೆಯ ಮೊದಲೇ ತಮ್ಮ ಬೆಳೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದ ಅನೇಕ ರೈತರಿಗೆ ಇದು ಕೇವಲ ವಿಳಂಬ ಮಾತ್ರ ಆಗಿರಲಿಲ್ಲ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಅಮೆರಿಕಾದಲ್ಲಿ ಭಾರಿ ಹೂಡಿಕೆ : ಇದು US ಇತಿಹಾಸದಲ್ಲೇ ಅತಿದೊಡ್ಡ ಒಪ್ಪಂದ ಎಂದ ಟ್ರಂಪ್

ಹೀಗೆ ಮಂಡಿಗೆ ಬೆಳೆ ಮಾರಾಟ ಮಾಡಲು ಬಂದ ರೈತರಲ್ಲಿ ಶ್ರೀಪುರ್ಚಕ್ ಗ್ರಾಮದ ಒಬ್ಬ ರೈತನೂ ಇದ್ದರು. ಅವರು ತನ್ನ ಮಗಳ ಮದುವೆಗೆ ಹಣ ಹೊಂದಿಸುವ ಆಶಯದೊಂದಿಗೆ ಕೊತ್ತಂಬರಿ ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ ಅಧಿಕಾರಿಯ ಗಲಾಟೆಯಿಂದಾಗಿ ಈ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಅವರು ಮಂಡಿ ಅಂಗಳದಲ್ಲಿ ನಿಂತು ಕೈಮುಗಿದು ಅಧಿಕಾರಿಗಳು ಮತ್ತು ವ್ಯಾಪಾರಿಗಳೊಂದಿಗೆ ತಮ್ಮ ಬೆಳೆಯನ್ನು ಖರೀದಿಸುವಂತೆ ಬೇಡಿಕೊಂಡರು.

ನನ್ನ ಮಗಳ ಮದುವೆ ನಾಳೆ 'ಟಿಕಾ' ಸಮಾರಂಭಕ್ಕೆ ಹಣ ಬೇಕು. ನನ್ನ ಬೆಳೆ ಇವತ್ತು ಮಾರಾಟ ಮಾಡದಿದ್ದರೆ, ಮದುವೆ ಹಾಳಾಗುತ್ತದೆ ಎಂದು ಅವರು ಅಳುತ್ತಿದ್ದರು. ಆದರೆ ಅವರ ಕಣ್ಣೀರು ಒರೆಸಲು ಯಾರೂ ಮುಂದೆ ಬರಲಿಲ್ಲ. ಮಂಡಿ ಗಂಟೆಗಟ್ಟಲೆ ಮುಚ್ಚಿತ್ತು. ಈ ಪರಿಸ್ಥಿತಿಯಿಂದ ಕೋಪಗೊಂಡ ರೈತರು ಕೊನೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅವರಲ್ಲಿ ಡಜನ್ಗಟ್ಟಲೆ ಜನರು ಎಬಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸಂಚಾರ ಸ್ಥಗಿತಗೊಳಿಸಿದರು. ನಂತರ ಕಂಟೋನ್ಮೆಂಟ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ರೈತರನ್ನು ರಸ್ತೆ ತೆರವುಗೊಳಿಸುವಂತೆ ಮನವೊಲಿಸಿದ್ದರು. ಇದಕ್ಕೂ ಮೊದಲು ರೈತರ ಪ್ರತಿಭಟನೆಯಿಂದ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳು ಉದ್ದನೆ ಕ್ಯೂ ನಿಂತಿತ್ತು.

ಮಂಡಿಯ ಮುಚ್ಚುವಿಕೆಯಿಂದ ನಮಗೆ ನಷ್ಟವಾಗಿದೆ. ಈ ಅವ್ಯವಸ್ಥೆಯಿಂದಾಗಿ ಟ್ರ್ಯಾಕ್ಟರ್‌ನಲ್ಲಿ ಬೆಳೆಗಳ ಸಾಗಣೆಗೆ ಎರಡು ಬಾರಿ ನಾವು ಹಣ ಖರ್ಚು ಮಾಡಬೇಕಾಯಿತು ಎಂದು ರೈತ ಗಿರಿರಾಜ್ ಯಾದವ್ ಹೇಳಿದರು. ನಾನು ಬೆಳಗ್ಗೆ ಏಳು ಗಂಟೆಗೆ ಇಲ್ಲಿಗೆ ಬಂದೆ. ಬಿಡ್ 5,700 ರೂ. ಆಗಿತ್ತು, ಆದರೆ ಅದನ್ನು 300 ರೂ. ಕಡಿಮೆ ಮಾಡಲಾಗಿದೆ. ಯಾವುದೇ ಆಡಳಿತ ಇಲ್ಲಿ ಏನನ್ನೂ ಮಾಡುತ್ತಿಲ್ಲ. ಎಲ್ಲವೂ ಅನಿಯಂತ್ರಿತವಾಗಿದೆ. ರೈತರಿಗೆ ಅಸ್ತಿತ್ವವಿಲ್ಲವೇ? ಅವರು ಪ್ರಶ್ನಿಸಿದರು. ಅನೇಕ ರೈತರಿಗೆ ಮದುವೆ ಮತ್ತು ಕುಟುಂಬದ ಜವಾಬ್ದಾರಿಗಳಿದ್ದವು ಮತ್ತು ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಹೊಂದಿಸಲು ಮಂಡಿಗೆ ಬಂದಿದ್ದರು ಎಂದು ಅವರು ಹೇಳಿದರು.

ಮಾಜಿ ಸಚಿವ ಜೈವರ್ಧನ್ ಸಿಂಗ್ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸ್ವಂತ ಬೆಳೆಯನ್ನು ಮಾರಾಟ ಮಾಡಲು ಮಂಡಿಯಲ್ಲಿ ಅಳುತ್ತಿರುವ ರೈತನ ಸ್ಥಿತಿ ಬೇಸರದ ವಿಚಾರ

ನಾಳೆ ಅವರ ಮಗಳ ಮದುವೆ ಇದೆ, ಮತ್ತು ರೈತ ತನ್ನ ಧಾನ್ಯವನ್ನು ಖರೀದಿಸಲು ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದಾನೆ. ಈ ದೇಶದ ಆಹಾರ ಪೂರೈಕೆದಾರನನ್ನು ಅವಮಾನಿಸಲಾಗುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಇಂತಹ ಅನ್ಯಾಯ ಮುಂದುವರಿದರೆ, ಕಾಂಗ್ರೆಸ್ ಪಕ್ಷವು ರೈತರನ್ನು ಬೆಂಬಲಿಸಿ ಪ್ರತಿಭಟನೆಗಳನ್ನು ನಡೆಸಲಿದೆ ಎಂದು ಅವರು ಎಚ್ಚರಿಸಿದರು.

ಗದ್ದಲದ ನಂತರ, ಮಂಡಿ ಕಾರ್ಯದರ್ಶಿ ಆರ್.ಪಿ. ಸಿಂಗ್, ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಶರ್ಮಾ ಅವರ ವರ್ತನೆಯಿಂದಾಗಿ ವಿವಾದ ಉದ್ಭವಿಸಿದೆ ಎಂದು ಒಪ್ಪಿಕೊಂಡರು. ಇನ್ಸ್‌ಪೆಕ್ಟರ್ ಕುಡಿದಿದ್ದಾರೆ ಎಂದು ದೂರುಗಳು ಬಂದಿವೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು. ರಾಜ್‌ಕುಮಾರ್ ಶರ್ಮಾ ಅವರು ಉಸ್ತುವಾರಿ ಮಾರುಕಟ್ಟೆ ಇನ್ಸ್‌ಪೆಕ್ಟರ್ ಆಗಿದ್ದು, ನಾವು ಈ ವಿಷಯವನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್‌ಪಿ ಸಿಂಗ್ ಹೇಳಿದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರವೂ ಹುಟ್ಟಿದ ಕಂದ: ಇದು ಸರ್ಕಾರದ ಲೋಪ ಮಗು ಸಾಕಲು ಆರ್ಥಿಕ ನೆರವು ಬೇಕು ಎಂದ ದಂಪತಿ
India Latest News Live: 500 ಸಿಲಿಂಡರ್‌ ಕದ್ದಿದ್ದ 7 ಮಂದಿ ಸೆರೆ; 13 ಲಕ್ಷಕ್ಕೆ ಡೀಲ್‌ ಮಾಡಿಕೊಂಡಿದ್ದ ಗ್ಯಾಂಗ್‌