
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗುಂಡು ಹಾರಿಸಲಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬುಧವಾರ (ಮಾರ್ಚ್ 11) ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದ ವಕೀಲರ ವಿವಾಹ ಸಮಾರಂಭದಲ್ಲಿ ಅಬ್ದುಲ್ಲಾ ಭಾಗವಹಿಸಿದ್ದರು. ಗುಂಡಿನ ದಾಳಿ ನಡೆಸಿದ ಕಮಲ್ ಸಿಂಗ್ ಜಮ್ವಾಲ್ ಎಂಬಾತನನ್ನು ಭದ್ರತಾ ಸಿಬ್ಬಂದಿ ಬಂಧಿಸಿ ವಶಕ್ಕೆ ಪಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮತ್ತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಒಮರ್ ಅಬ್ದುಲ್ಲಾ, 'ದೇವರು ಕರುಣಾಮಯಿ. ನನ್ನ ತಂದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪ್ರಸ್ತುತ ದಾಳಿ ಮಾಡಿದ್ದೇಕೆ, ಯಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಲೋಡ್ ಮಾಡಿದ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೊಬ್ಬರು ನನ್ನ ತಂದೆಯ ಹತ್ತಿರ ಬಂದು ಗುಂಡು ಹಾರಿಸಿದ್ದಾರೆ ಎಂಬುದು ತಿಳಿದುಬಂದಿದೆ. ಭದ್ರತಾ ತಂಡವು ಗುಂಡನ್ನು ತಡೆದು ಹತ್ಯೆಯ ಪ್ರಯತ್ನವನ್ನು ವಿಫಲಗೊಳಿಸಿದೆ. ಪ್ರಸ್ತುತ, ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳಿವೆ, ಅದರಲ್ಲಿ ಒಂದು Z+ (NSG) ಭದ್ರತಾ ಪಡೆಗಳಿಂದ ರಕ್ಷಣೆಯಲ್ಲಿರುವ ಮಾಜಿ ಮುಖ್ಯಮಂತ್ರಿಗೆ ಅಪರಿಚಿತರೊಬ್ಬರು ಇಷ್ಟು ಹತ್ತಿರಕ್ಕೆ ಬರಲು ಹೇಗೆ ಸಾಧ್ಯವಾಯಿತು? ಎಂಬುದು
ಗುಂಡಿನ ದಾಳಿ ಘಟನೆ ವ್ಯಾಪಕ ಕೋಲಾಹಲಕ್ಕೆ ಕಾರಣವಾಯಿತು. ಆರೋಪಿ ಕಮಲ್ ಸಿಂಗ್ ಜಮ್ವಾಲ್ ಜಮ್ಮು ನಿವಾಸಿ. ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ವಿಡಿಯೋದಲ್ಲಿ, ಆರೋಪಿ ಕಮಲ್ ಸಿಂಗ್ ಫಾರೂಕ್ ಅಬ್ದುಲ್ಲಾ ಬಳಿಗೆ ಬಂದು ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಅವನು ಗುಂಡು ಹಾರಿಸಿದ ತಕ್ಷಣ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವನನ್ನು ತಡೆದು ವಶಕ್ಕೆ ಪಡೆದಿರುವುದು ಕಾಣಬಹುದು.
ಫಾರೂಕ್ ಅಬ್ದುಲ್ಲಾ ಅವರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಕೂಡ ಇದ್ದರು. ಚೌಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ