ಐಸ್‌ಕ್ರೀಂ, ಬಲೂನ್‌, ಕ್ಯಾಂಡಿಯಲ್ಲಿ ಪ್ಲಾಸ್ಟಿಕ್‌ ಕಡ್ಡಿ ಬಳಕೆಗೆ ನಿಷೇಧ!

By Suvarna NewsFirst Published Jul 24, 2021, 9:37 AM IST
Highlights

* ಕ್ಯಾಂಡಿ, ಐಸ್‌ಕ್ರೀಂ, ಬಲೂನ್‌ಗಳ ಪ್ಲಾಸ್ಟಿಕ್‌ ಕಡ್ಡಿ, ಪ್ಲಾಸ್ಟಿಕ್‌ ಧ್ವಜಗಳ ಉತ್ಪಾದನೆ, ಮಾರಾಟ, ವಿತರಣೆ, ಬಳಕೆ ನಿಷೇಧ

* 2020, ಜನವರಿ 1ರಿಂದ ಪ್ಲಾಸ್ಟಿಕ್‌ ನಿರ್ಮಿತ ವಸ್ತುಗಳು ಬ್ಯಾನ್

* ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಮಾಹಿತಿ

ನವದೆಹಲಿ(ಜು.24): ಕ್ಯಾಂಡಿ, ಐಸ್‌ಕ್ರೀಂ, ಬಲೂನ್‌ಗಳ ಪ್ಲಾಸ್ಟಿಕ್‌ ಕಡ್ಡಿ, ಪ್ಲಾಸ್ಟಿಕ್‌ ಧ್ವಜಗಳ ಉತ್ಪಾದನೆ, ಮಾರಾಟ, ವಿತರಣೆ, ಬಳಕೆಯನ್ನು 2020, ಜನವರಿ 1ರಿಂದ ನಿಷೇಧಿಸಲಾಗುವುದು ಎಂದು ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಲೋಕಸಭೆಗೆ ತಿಳಿಸಿದ್ದಾರೆ.

ಒಮ್ಮೆ ಮಾತ್ರ ಬಳಸಲಾಗುವ ಪ್ಲಾಸ್ಟಿಕ್‌ಗಳಾದ ಸ್ಟ್ರಾ, ಕಪ್‌, ಬಟ್ಟಲು, ಚಮಚ, ಚಾಕು, ಗ್ಲಾಸ್‌, ಪ್ಲಾಸ್ಟಿಕ್‌ ಬಾಕ್ಸ್‌ , 100 ಮೈಕ್ರೋನ್‌ ಕೆಳಗಿನ ಪಿವಿಸಿ ಬ್ಯಾನರ್‌ಗಳನ್ನು ಮುಂದಿನ ವರ್ಷ ಜುಲೈಯಲ್ಲಿ ನಿಷೇಧಿಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.

ಒಮ್ಮೆ ಮಾತ್ರ ಬಳಸಲಾಗುವ, 120 ಮೈಕ್ರೋನ್‌ಗಿಂದ ಕಡಿಮೆ ಇರುವ ಪ್ಲಾಸ್ಟಿಕ್‌ನಿಂದ ಮಾಡಿದ ಕ್ಯಾರಿ ಬ್ಯಾಗ್‌, ನಾನ್‌ ವೊವೆನ್‌ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಇದೇ ವರ್ಷದ ಸೆ.30 ರಿಂದ ನಿಷೇಧಿಸಲಾಗುವುದು ಎಂದು ಹೇಳಿದರು.

ಒಂದು ಬಾರಿ ಬಳಕೆಗೆ ಗುರುತಿಸಲಾದ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯ ಪಡೆಯನ್ನು ರಚಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಈಗಾಗಲೇ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಕಾರ್ಯಪಡೆಯನ್ನು ರಚಿಸಿವೆ. ರಾಷ್ಟ್ರಮಟ್ಟದಲ್ಲೂ  ಸಚಿವಾಲಯವು ಕಾರ್ಯಪಡೆಯನ್ನು ರಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

click me!