ಪ್ಲಾಸ್ಮಾ ಚಿಕಿತ್ಸೆ ಅಕ್ರಮ: ಕೇಂದ್ರ ಆರೋಗ್ಯ ಸಚಿವಾಲಯದ ಎಚ್ಚರಿಕೆ!

By Kannadaprabha NewsFirst Published Apr 29, 2020, 7:55 AM IST
Highlights

ಪ್ಲಾಸ್ಮಾ ಚಿಕಿತ್ಸೆ ಇನ್ನೂ ಪ್ರಾಯೋಗಿಕ ಹಂತದಲ್ಲಿ| ಚಿಕಿತ್ಸೆಗೆ ಬಳಸಬಹುದೆಂಬುದಕ್ಕೆ ಪುರಾವೆ ಇಲ್ಲ-ಕೇಂದ್ರ| ನಿಯಮ ರೀತಿ ಪ್ಲಾಸ್ಮಾ ಮಾಡದಿದ್ರೆ ಪ್ರಾಣಕ್ಕೆ ಕುತ್ತು|  ಸಂಶೋಧನೆ, ಪರೀಕ್ಷೆಗೆ ಹೊರತಾಗಿ ಈ ಚಿಕಿತ್ಸೆ ಬಳಕೆ ಅಕ್ರಮ

ನವದೆಹಲಿ(ಏ.29): ಕೊರೋನಾ ಸೋಂಕಿತರೊಬ್ಬರು ಪ್ಲಾಸ್ಮಾ ಥೆರಪಿ ಮೂಲಕ ದೆಹಲಿಯಲ್ಲಿ ಗುಣಮುಖರಾದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ಚಿಕಿತ್ಸೆ ಆರಂಭವಾಗಿದೆ. ಹಲವು ರಾಜ್ಯಗಳು ರೋಗಿಗಳಿಗೆ ಈ ಚಿಕಿತ್ಸೆ ನೀಡಲು ತುದಿಗಾಲಿನಲ್ಲಿ ನಿಂತಿವೆ. ಆದರೆ ಇಂತಹ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಪ್ಲಾಸ್ಮಾ ಥೆರಪಿ ಎಂಬುದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಕೊರೋನಾ ಚಿಕಿತ್ಸೆಗೆ ಅದನ್ನು ಬಳಸಬಹುದು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆ ಚಿಕಿತ್ಸೆ ನೀಡುವುದು ಅಕ್ರಮ. ಪ್ಲಾಸ್ಮಾ ಥೆರಪಿಯಿಂದ ಪ್ರಾಣಕ್ಕೆ ಸಂಚಕಾರ ಕೂಡ ಎದುರಾಗಬಹುದು ಎಂದು ಸ್ಪಷ್ಟಪಡಿಸಿದೆ.

ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!

ವೈಜ್ಞಾನಿಕವಾಗಿ ಈ ಚಿಕಿತ್ಸಾ ವಿಧಾನದ ಪರಿಣಾಮ ಸಾಬೀತಾಗುವವರೆಗೂ ಸಂಶೋಧನೆ ಹಾಗೂ ಕ್ಲಿನಿಕಲ್‌ ಟ್ರಯಲ್‌ ಹೊರತುಪಡಿಸಿ ಅದನ್ನು ಬಳಕೆ ಮಾಡುವುದು ಅಕ್ರಮ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೊರೋನಾಗೆ ಈವರೆಗೂ ಯಾವುದೇ ಅಂಗೀಕೃತ ಚಿಕಿತ್ಸೆಗಳಿಲ್ಲ. ಮಾರಕ ವೈರಾಣು ವ್ಯಾಧಿಗೆ ಪ್ಲಾಸ್ಮಾ ಚಿಕಿತ್ಸೆ ಬಳಸಿಕೊಳ್ಳಬಹುದು ಎಂದು ಹೇಳುವುದಕ್ಕೆ ಸಾಕಷ್ಟುಸಾಕ್ಷ್ಯಗಳೂ ಇಲ್ಲ. ಅದಕ್ಕೆಂದೇ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು (ಐಸಿಎಂಆರ್‌), ಪ್ಲಾಸ್ಮಾ ಥೆರಪಿಯ ಕ್ಷಮತೆ ಬಗ್ಗೆ ರಾಷ್ಟ್ರೀಯ ಮಟ್ಟದ ಅಧ್ಯಯನ ಆರಂಭಿಸಿದೆ. ಐಸಿಎಂಆರ್‌ ಅಧ್ಯಯನ ಪೂರ್ಣಗೊಳ್ಳುವವರೆಗೆ ಹಾಗೂ ಬಲವಾದ ವೈಜ್ಞಾನಿಕ ಪುರಾವೆ ಸಿಗುವವರೆಗೆ, ಪ್ಲಾಸ್ಮಾ ಚಿಕಿತ್ಸೆಯನ್ನು ಕೇವಲ ಪ್ರಾಯೋಗಿಕವಾಗಿ ಹಾಗೂ ಸಂಶೋಧನೆಯ ಉದ್ದೇಶದಿಂದ ಬಳಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!

‘ಒಂದು ವೇಳೆ ಪ್ಲಾಸ್ಮಾ ಚಿಕಿತ್ಸೆಯನ್ನು ಸೂಕ್ತ ವಿಧಾನದಲ್ಲಿ ಹಾಗೂ ಮಾರ್ಗದರ್ಶಿ ನಿಯಮದ ಅನುಸಾರ ಬಳಸದೇ ಹೋದರೆ, ಅದು ಜೀವಕ್ಕೇ ಎರವಾಗಬಹುದಾದ ಅಪಾಯ ತರಬಹುದು’ ಎಂದೂ ಅವರು ಎಚ್ಚರಿಸಿದರು.

ಡಬಲ್‌ ಪ್ರಮಾಣ 10.2 ದಿನಕ್ಕೇರಿಕೆ:

ಈ ನಡುವೆ, ಕೊರೋನಾ ಸೋಂಕು ದ್ವಿಗುಣಗೊಳ್ಳುವ ವೇಗವು 10.2 ದಿನಕ್ಕೆ ಏರಿದೆ. ಮಾ.21ರ ಅಂಕಿ-ಅಂಶದ ಪ್ರಕಾರ ಸೋಂಕು 3 ದಿನಗಳಿಗೊಮ್ಮೆ ಡಬಲ್‌ ಆಗುತ್ತಿತ್ತು. ಆದರೆ, ಒಟ್ಟು ಸೋಂಕಿತರಲ್ಲಿ 6868 ಜನರು ಗುಣಮುಖರಾಗಿದ್ದಾರೆ. ಗುಣಮುಖ ಪ್ರಮಾಣ ಶೇ.23.3ಕ್ಕೇರಿದೆ ಎಂದು ಅವರು ಮಾಹಿತಿ ನೀಡಿದರು.

click me!