ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಿಸಿರುವ ಚಿನ್ನ ಕಳ್ಳಸಾಗಾಣೆ ಆರೋಪ ಹೊತ್ತಿರುವ ಸ್ವಪ್ನಾ ಸುರೇಶ್ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪಿಣರಾಯಿ ವಿಜಯನ್ ಸರ್ಕಾರದ ಮೂವರು ಸಚಿವರು ಸೆಕ್ಸ್‌ಗಾಗಿ ಒತ್ತಾಯಿಸಿರುವ ಕುರಿತ ಆರೋಪ ಇದೀಗ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ.
ತಿರುವನಂತಪುರಂ(ಅ.25); ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐಎಂ ಸರ್ಕಾರಕ್ಕೆ ಚಿನ್ನ ಕಳ್ಳ ಸಾಗಾಣೆ ಆರೋಪಿ ಸ್ವಪ್ನಾ ಸುರೇಶ್ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಪಿಣರಾಯಿ ಸರ್ಕಾರದ ಸೆಕ್ರೆಟರಿ ಕೌನ್ಸೆಲ್ ಜನರಲ್ ಆಗಿದ್ದ ಸ್ವಪ್ನಾ ಸುರೇಶ್ ಒಂದೊಂದು ಮಾತುಗಳು, ರಹಸ್ಯ ಮಾಹಿತಿಗಳು ಕೇರಳ ಸರ್ಕಾರದ ಬುಡ ಅಲುಗಾಡಿಸುತ್ತಿದೆ. ಇದೀಗ ಸಿಪಿಐಎಂ ಪಕ್ಷದ ಪ್ರಮುಖ ಮೂವರು ನಾಯಕರು, ಮಾಜಿ ಸಚಿವರು ಸೆಕ್ಸ್‌ಗಾಗಿ ಒತ್ತಾಯಿಸಿದ್ದರು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಇದಕ್ಕೆ ಪೂರಕ ದಾಖಲೆಗಳನ್ನು ನೀಡಿದ್ದಾರೆ. ಏಷ್ಯಾನೆಟ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಪ್ನಾ ಸುರೇಶ್ ಈ ಕುರಿತು ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್, ಮಾಜಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಹಾಗೂ ಮಾಜಿ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್ ಮಂಚ ಹಂಚಿಕೊಳ್ಳಲು ಹಲವು ಬಾರಿ ಒತ್ತಾಯಿಸಿದ್ದಾರೆ ಎಂದು ಸ್ಪಪ್ನಾ ಸುರೇಶ್ ಹೇಳಿದ್ದಾರೆ. ಈ ಮೂವರು ನಾಯರು ಸಚಿವರಾಗಿದ್ದ ವೇಳೆ ನೇರವಾಗಿ ಹಾಗೂ ಫೋನ್ ಮೂಲಕ ಮಂಚ ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.
ಪಿಣರಾಯಿ ವಿಜಯನ್ ಅವರ ಮೊದಲ ಬಾರಿಯ ಸರ್ಕಾರದಲ್ಲಿ ಸ್ವಪ್ನಾ ಸುರೇಶ್ ಅರಬ್ ಎಮಿರೈಟ್ಸ್‌ನ ಸೆಕ್ರೆಟರಿ ಕೌನ್ಸಲ್ ಜನರಲ್ ಆಗಿದ್ದರು. ಇದೇ ವೇಳೆ ಸಿಪಿಐಎಂ ಪಕ್ಷ ಹಾಗೂ ಸರ್ಕಾರದ ಆಜ್ಞೆಯಂತೆ ಚಿನ್ನ ಕಳ್ಳಸಾಗಾಣೆ ಪ್ರಕರಣ ಬೆಳಕಿಗೆ ಬಂದಿತ್ತು. ಇದು ಪಿಣರಾಯಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಪಿಣರಾಯಿ ಸರ್ಕಾರಕ್ಕೆ ಒಂದಲ್ಲಾ ಒಂದು ಸಂಕಷ್ಟಗಳು ಎದುರಾಗುತ್ತಲೇ ಇದೆ. ಇದೀಗ ಪಿಣರಾಯಿ ಸರ್ಕಾರದ ಮಾಜಿ ಸಚಿವರ ಮೇಲಿನ ಸೆಕ್ಸ್ ಆರೋಪ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಯುಎಇಯಲ್ಲಿ ಮಗಳ ಬ್ಯುಸಿನೆಸ್‌ಗೆ ಸಹಾಯ ಮಾಡಿ ಎಂದು ಶಾರ್ಜಾ ರೂಲರ್‌ಗೆ ಕೇಳಿದ್ದ ಕೇರಳ ಸಿಎಂ!
ಮಾಜಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್, ದೇವಂಸ ಬೋರ್ಡ್ ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ನೇರವಾಗಿ ನನ್ನಲ್ಲಿ ಸೆಕ್ಸ್‌ಗೆ ಸಹಕರಿಸುವಂತೆ ಆರೋಪಿಸಿದ್ದಾರೆ. ಹಲವು ಬಾರಿ ಸೆಕ್ಸ್‌ಗೆ ಒತ್ತಾಯಿಸಿದ್ದಾರೆ. ಫೋನ್ ಮೂಲಕ ಎಲ್ಲೆ ಮೀರಿ ವರ್ತಿಸಿದ್ದಾರೆ, ಮಾತನಾಡಿದ್ದಾರೆ. ನೇರವಾಗಿ ಸಿಕ್ಕಾಗಲೂ ಸೆಕ್ಸ್‌ಗೆ ಒತ್ತಾಯಿಸಿದ್ದಾರೆ. ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಿದ್ದೆ. ಇನ್ನು ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ನೇರವಾಗಿ ನನ್ನಲ್ಲಿ ಸೆಕ್ಸ್‌ಗೆ ಒತ್ತಾಯಿಸಿಲ್ಲ. ಆದರೆ ಧೂತರನ್ನು ಕಳುಹಿಸಿ, ಇತರರ ಮೂಲಕ ಬೇಡಿಕೆ ಇಟ್ಟಿದ್ದರು ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ.
ಇಬ್ಬರು ಸಚಿವರು ಸರ್ಕಾರಿ ಕೆಲಸಗಳ ಕುರಿತು ಚರ್ಚಿಸಲು ಅಧಿಕೃತ ನಿವಾಸಕ್ಕೆ ಹಲವು ಬಾರಿ ಆಹ್ವಾನಿಸಿದ್ದಾರೆ. ಕೆಲವು ಬಾರಿ ಅರ್ಧಗಂಟೆ ಮುಂಚಿತವಾಗಿ ಒಬ್ಬಳೇ ಬರುವಂತೆ ಸೂಚಿಸಿದ್ದರು. ತಾನು ಪ್ರತಿ ಬಾರಿ ಈ ನೀಚ ನಾಯಕರನ್ನು ಭೇಟಿಯಾಗಲು ಹೋದಾಗ, ನನ್ನ ಜೊತೆ ಅಧಿಕಾರಿಗಳು, ಪಿಆರ್‍ಓ ಇದ್ದರು. ಹೀಗಾಗಿ ನನಗೆ ಒಬ್ಬಳೇ ಬರುವಂತೆ ಸೂಚಿಸಿದ್ದರು. ಆದರೆ ಅವರ ಸೆಕ್ಸ್ ಬಯಕೆ ಈಡೇರಿಸಲು ನಾನು ಅವರ ಕಚೇರಿಗೆ ತೆರಳಿಲ್ಲ. ಅವರ ಸೆಕ್ಸ್ ಬಯಕೆಗೆ ನಾನು ವಸ್ತುವಾಗಲಿಲ್ಲ ಎಂದು ಸ್ಪಪ್ನಾ ಸುರೇಶ್ ಹೇಳಿದ್ದಾರೆ.
ಈ ಆರೋಪಗಳನ್ನು ಸಿಪಿಐಎಂ ಹಾಗೂ ಮೂವರು ನಾಯಕರು ಅಲ್ಲಗೆಳೆದಿದ್ದಾರೆ. ಇವೆಲ್ಲಾ ಸ್ವಪ್ನಾ ಸುಖಾಸುಮ್ಮನೆ ಮಾಡುವ ಆರೋಪಗಳು ಎಂದಿದೆ. ಆದರೆ ಇದಕ್ಕೆ ಸಪ್ನಾ ಸುರೇಶ್ ಖಾರವಾಗಿ ಪ್ರತಿಕ್ರಿಯೆಸಿದ್ದಾರೆ. ಈ ಮೂವರು ನಾಯಕರ ಕುರಿತ ಕೆಲಫೋಟೋಗಳನ್ನು ಸ್ವಪ್ನಾ ಸುರೇಶ್ ಬಹಿರಂಗ ಪಡಿಸಿದ್ದಾರೆ. ಇಷ್ಟೇ ಅಲ್ಲ ಇದಕ್ಕೆ ಪೂರಕವಾದ ಮತ್ತಷ್ಟು ಕೆಲ ಫೋಟೋಗಳು ನನ್ನ ಬಳಿ ಇದೆ. ನಾನು ಮಾಡಿರುವ ಸೆಕ್ಸ್ ಆರೋಪಗಳು ಸುಳ್ಳಾಗಿದ್ದರೆ, ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಿ. ನಾನು ಕೋರ್ಟ್‌ಗೆ ದಾಖಲೆ ಸಲ್ಲಿಸುತ್ತೇನೆ ಎಂದು ಸ್ಪಪ್ನಾ ಸುರೇಶ್ ಹೇಳಿದ್ದಾರೆ. ಸ್ವಪ್ನಾ ಸುರೇಶ್ ಮಾಡಿರುವ ಆರೋಪವನ್ನು ನಾಯಕರು ನಿರಾಕರಿಸಿದ್ದಾರೆ. ಆದರೆ ಸ್ಪಪ್ನ ವಿರುದ್ದ ಯಾವುದೇ ಪ್ರಕರಣಗಳು ದಾಖಲಿಸಿಲ್ಲ.