Rishi Sunak Britain PM: ಭಾರತ ಕಲಿಯೋದ್ಯಾವಾಗ ಎನ್ನುವ ಟೀಕೆಗೆ ಬಿಜೆಪಿ ಭರ್ಜರಿ ತಿರುಗೇಟು!

Published : Oct 25, 2022, 12:26 PM ISTUpdated : Oct 25, 2022, 12:32 PM IST
Rishi Sunak Britain PM: ಭಾರತ ಕಲಿಯೋದ್ಯಾವಾಗ ಎನ್ನುವ ಟೀಕೆಗೆ ಬಿಜೆಪಿ ಭರ್ಜರಿ ತಿರುಗೇಟು!

ಸಾರಾಂಶ

ಹಿಂದು ಅಲ್ಪಸಂಖ್ಯಾತ ರಿಷಿ ಸುನಕ್‌ ಬ್ರಿಟನ್‌ನಲ್ಲಿ ಪ್ರಧಾನಿ ಪದವಿಗೆ ಏರಿದ್ದಾರೆ. ಇದನ್ನಿಟ್ಟುಕೊಂಡು ಭಾರತದಲ್ಲಿ ಹೊಸ ರೀತಿಯ ಚರ್ಚೆ ಆರಂಭವಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಈ ರೀತಿ ಸ್ವೀಕರಿಸಲಾಗುತ್ತದೆಯೇ ಎಂಬ ಚರ್ಚೆಯನ್ನು ವಿರೋಧ ಪಕ್ಷಗಳು ಆರಂಭಿಸಿದ್ದು, ಬಿಜೆಪಿ ಕೂಡ ಭರ್ಜರಿ ತಿರುಗೇಟು ನೀಡಿದೆ.  

ನವದೆಹಲಿ (ಅ. 25): ರಿಷಿ ಸುನಕ್‌ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆಗೇರಿದ ಮೊದಲ ಭಾರತೀಯ ಸಂಜಾತ ವ್ಯಕ್ತಿ ಎನ್ನುವ ಹಿರಿಮೆ ಇವರದಾಗಿದೆ. ಸುನಕ್ ಹಿಂದೂ ಧರ್ಮವನ್ನು ನಂಬುತ್ತಾರೆ ಮತ್ತು ಅವರ ಧಾರ್ಮಿಕ ನಂಬಿಕೆಯನ್ನು ಹಿಂಜರಿಕೆಯಿಲ್ಲದೆ ವ್ಯಕ್ತಪಡಿಸುತ್ತಾರೆ. ಕನ್ಸರ್ವೇಟಿವ್‌ ಪಕ್ಷದ ನಾಯಕನಾಗುವುದರೊಂದಿಗೆ ಪ್ರಧಾನಿ ಪಟ್ಟಕ್ಕೂ ರಿಷಿ ಸುನಕ್‌ ನಿಯೋಜಿತರಾಗುವುದರೊಂದಿಗೆ ಭಾರತದಲ್ಲಿ ಕೆಲವು ಜನರು ಅಲ್ಪಸಂಖ್ಯಾತರು ಮತ್ತು ನಿರಾಶ್ರಿತರ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಅಲ್ಪಸಂಖ್ಯಾತ ಮೂಲದ ವ್ಯಕ್ತಿಯನ್ನು ಬ್ರಿಟನ್ ತನ್ನ ಪ್ರಧಾನಿಯಾಗಿ ಸ್ವೀಕರಿಸಿದ್ದರೂ, ಭಾರತವು ಇನ್ನೂ ಸಿಎಎ ಮತ್ತು ಎನ್‌ಆರ್‌ಸಿಯಂತಹ ವಿಭಜಕ ಕಾನೂನುಗಳಲ್ಲಿ ಸಿಲುಕಿಕೊಂಡಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಸೇರಿದಂತೆ ಭಾರತದ ಪ್ರಮುಖ ವ್ಯಕ್ತಿಗಳು, ಬ್ರಿಟನ್‌ಗಿಂತ ಮುಂಚೆಯೇ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಅತ್ಯುನ್ನತ ಸ್ಥಾಲ ಲಭಿಸಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಎರಡು ಬಾರಿ ಪ್ರಧಾನಿ ಆಗಿದ್ದರು. ಅಬ್ದುಲ್‌ ಕಲಾಂ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದರು ಎನ್ನುವ ಉದಾಹರಣೆ ನೀಡಿದ್ದಾರೆ.
 


ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿ ತರೂರ್ (Shashi Tharoor) ಭಾರತದಲ್ಲಿ ಹೀಗಾಗಬಹುದೇ? ಅವರು ಟ್ವೀಟ್ ಮಾಡಿದ್ದಾರೆ. 'ರಿಷಿ ಸುನಕ್ ಬ್ರಿಟನ್‌ ಪ್ರಧಾನಿ ಆಗುತ್ತಿದ್ದಾರೆ. ಅದರೊಂದಿಗೆ ಬ್ರಿಟಿಷರು ಜಗತ್ತಿನಲ್ಲಿ ಕೆಲವು ಅಪರೂಪದ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಇದು ಯಾವುದೆಂದರೆ, ಅಲ್ಪಸಂಖ್ಯಾತ (minorities) ಸಮುದಾಯದ ಸದಸ್ಯರಿಗೆ ಅತ್ಯಂತ ಶಕ್ತಿಶಾಲಿ ಕಚೇರಿಯ ಜವಾಬ್ದಾರಿ ನೀಡಿರುವುದು. ಈಗ ನಾವು ಭಾರತೀಯ ರಿಷಿ ಸುನಕ್ ಅವರ ಯಶಸ್ಸನ್ನು ಆಚರಿಸುತ್ತೇವೆ, ನಾವು ಪ್ರಾಮಾಣಿಕವಾಗಿ ಕೇಳಬೇಕಾದ ಪ್ರಶ್ನೆ ಏನೆಂದರೆ, ಇದು ನಮ್ಮಲ್ಲಿ ಸಂಭವಿಸಬಹುದೇ? ಎನ್ನುವುದು ಎಂದು ಟ್ವೀಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ರಿಷಿ ಸುನಕ್ (Rishi Sunak) ಅವರ ನೆಪದಲ್ಲಿ ಕೇಂದ್ರದ ಮೋದಿ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಯುಕೆ ಭಾರತೀಯ ಮೂಲದ ಮೊದಲ ಪ್ರಧಾನಿಯನ್ನು ಪಡೆಯಲಿರುವುದು ಹೆಮ್ಮೆಯ ಕ್ಷಣ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈಗ ಇಡೀ ಭಾರತವೇ ಸಂಭ್ರಮಿಸುತ್ತಿದೆ. ಯುಕೆ ಜನಾಂಗೀಯ ಅಲ್ಪಸಂಖ್ಯಾತ ಸದಸ್ಯರನ್ನು ತನ್ನ ಪ್ರಧಾನ ಮಂತ್ರಿಯಾಗಿ ಸ್ವೀಕರಿಸಿದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳುವುದು ಒಳ್ಳೆಯದು, ಆದರೆ ನಾವಿನ್ನೂ ಎನ್‌ಆರ್‌ಸಿ ಮತ್ತು ಸಿಎಎಯಂತಹ ವಿಭಜಕ ಮತ್ತು ತಾರತಮ್ಯ ಕಾನೂನುಗಳನ್ನು ಮಾಡುತ್ತಿದ್ದೇವೆ ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಬಿಜೆಪಿ ನಾಯಕರು ಮೆಹಬೂಬಾ ಮುಫ್ತಿಗೆ ( Jammu and Kashmir CM Mehbooba Mufti) ಭರ್ಜರಿಯಾಗಿ ತಿರುಗೇಟು ನೀಡಿದ್ದಾರೆ. ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾದ ನಂತರ, ಕೆಲವು ನಾಯಕರು ಬಹುಸಮಖ್ಯಾತರ ಬಗ್ಗೆ ಹೈಪರ್ಆಕ್ಟಿವ್ ಆಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್‌ ಮಾಡಿದ್ದಾರೆ. ಭಾರತದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 10 ವರ್ಷಗಳು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 5 ವರ್ಷಗಳ ಅಧಿಕಾರ ನೀಡಿದೆ.ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯಲ್ಲಿ ನೋಡುತ್ತಿದೆ. ಭಾರತ ಇಷ್ಟೆಲ್ಲಾ ಮಾಡಿರುವಾಗ, ಜಮ್ಮು ಕಾಶ್ಮೀರದ ಸಿಎಂ ಆಗಿ ಅಲ್ಪ ಸಂಖ್ಯಾತ ಹಿಂದುವನ್ನು ಮೆಹಬೂಬಾ ಮಫ್ತಿ ಒಪ್ಪಿಕೊಳ್ಳುತ್ತಾರೆಯೇ ಎಂದು ರವಿಶಂಕರ್‌ ಪ್ರಸಾದ್‌ (Ravishankar Prasad) ಪ್ರಶ್ನೆ ಮಾಡಿದ್ದಾರೆ.

British PM Rishi Sunak: ಬ್ರಿಟನ್‌ ಪ್ರಧಾನಿ ಆದ ಅಳಿಯ, ಹೆಮ್ಮೆಯ ವಿಷಯ ಎಂದ ನಾರಾಯಣ ಮೂರ್ತಿ!

ಬಿಎಸ್ಪಿ ನಾಯಕ ಕುನ್ವರ್ ಡ್ಯಾನಿಶ್ ಅಲಿ ಕೂಡ ಈ ವಿಷಯದಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ. ಅತ್ಯಂತ ಶಕ್ತಿಶಾಲಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಹಸ್ತಾಂತರಿಸುವ ಮೂಲಕ ಬ್ರಿಟಿಷರು ವಿಶ್ವದಲ್ಲೇ ವಿಶಿಷ್ಟವಾದ ಮತ್ತು ಅಪರೂಪದ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ. ನಾವು ಭಾರತೀಯರು ಇಂದು ರಿಷಿ ಸುನಕ್ ಅವರ ಯಶಸ್ಸನ್ನು ಆಚರಿಸುತ್ತಿದ್ದೇವೆ. ಪ್ರಾಮಾಣಿಕವಾಗಿ ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ, ಇದು ನಮ್ಮಲ್ಲಿ ಸಂಭವಿಸಬಹುದೇ? ಎನ್ನುವುದು' ಎಂದು ಬರೆದಿದ್ದಾರೆ.

ಬ್ರಿಟನ್‌ ಏಕತೆ, ಸ್ಥಿರತೆ ನನ್ನ ಆದ್ಯತೆ; ಸಂಕಷ್ಟ ಎದುರಿಸುತ್ತಿರುವ ದೇಶಕ್ಕೆ ಅಭಯ ನೀಡಿದ Rishi Sunak

ಈ ವಿಚಾರದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲು ಅಮೆರಿಕದಲ್ಲಿ ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್, ಎಂದು ಟ್ವೀಟ್ ಮಾಡಿದ್ದಾರೆ. ಅಮೆರಿಕ ಮತ್ತು ಬ್ರಿಟನ್‌ ಜನರು ತಮ್ಮ ದೇಶಗಳ ಬಹುಸಂಖ್ಯಾತರಲ್ಲದ ನಾಗರಿಕರನ್ನು ಅಪ್ಪಿಕೊಂಡಿದ್ದಾರೆ ಮತ್ತು ಅವರನ್ನು ಸರ್ಕಾರದ ಉನ್ನತ ಸ್ಥಾನಗಳಿಗೆ ಆಯ್ಕೆ ಮಾಡಿದ್ದಾರೆ. ಭಾರತ ಮತ್ತು ಬಹುಸಂಖ್ಯಾತ ಪಕ್ಷಗಳು ಕಲಿಯಬೇಕಾದ ಪಾಠವಿದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌