ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ನೀಡಲಾಗಿದ್ದ ಸರ್ಕಾರದ ಉದ್ಯೋಗ ಮೀಸಲಾತಿ ಕರುಡು ವಿರುದ್ಧ ಮಾತನಾಡಿದ್ದ ಫೋನ್‌ಪೇ ಸಿಇಒ ಸಮೀರ್ ನಿಗಮ್ ಬೇಷರತ್ ಕ್ಷಮೆಯಾಚಿಸಿದ್ದಾರೆ. ಆದರೆ, ಈಗ ಮತ್ತೆ ಕನ್ನಡಿಗರು ಫೋನ್ ಪೇ ಇನ್‌ಸ್ಟಾಲ್ ಮಾಡ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಬೆಂಗಳೂರು (ಜು.21): ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಶೇ.50ರಿಂದ ಶೇ.75 ಮೀಸಲಾತಿ ನೀಡಿರುವ ಸರ್ಕಾರದ ಆದೇಶದ ವಿರುದ್ಧ ಹೇಳಿಕೆ ನೀಡಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ (Sameer Nigam) ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ರಾಜ್ಯಾದ್ಯಂತ ಕನ್ನಡಿಗರು ಫೋನ್ ಪೇ ಬಾಯ್ಕಾಟ್ (Uninstall Phonepe) ಆಕ್ರೋಶಕ್ಕೆ ಮಣಿಸು ಸಿಇಒ ಸಮೀರ್ ನಿಗಮ್ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಕನ್ನಡಿಗರು ಪುನಃ ಫೋನ್‌ಪೇ ಇನ್‌ಸ್ಟಾಲ್ ಮಾಡಿ ಬಳಕೆ ಮಾಡ್ತಾರಾ? ಎಂಬ ಪ್ರಶ್ನೆ ಶುರುವಾಗಿದೆ.
ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಫೋನ್ ಪೇ ಸಂಸ್ಥೆಯ ಅಧಿಕೃತ ಖಾತೆಯಿಂದ ಕ್ಷಮೆ ಕೋರಿ ಮಾಹಿತಿ ಹಂಚಿಕೊಳ್ಳಲಾಗಿದೆ. ನಮ್ಮ CEO ಮತ್ತು ಸ್ಥಾಪಕರು ಸಮೀರ್ ನಿಗಮ್ ಅವರು, ಕರ್ನಾಟಕ ಕರಡು ಉದ್ಯೋಗ ಮೀಸಲಾತಿ ಮಸೂದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವ ವೈಯಕ್ತಿಕ ಹೇಳಿಕೆಯನ್ನು ನೀಡಿದ್ದಾರೆ. ಫೋನ್ ಪೇ (PhonePe) ಬೆಂಗಳೂರಿನಲ್ಲಿ ಹುಟ್ಟಿದೆ. ಕಳೆದೊಂದು ದಶಕದಲ್ಲಿ ಫೋನ್‌ಪೇ ಬೆಂಗಳೂರಿನಿಂದ ಭಾರತದ ಉದ್ದಗಲಕ್ಕೂ ವಿಸ್ತರಿಸಿದೆ. ಈ ಮೂಲಕ ದೇಶದ 55 ಕೋಟಿಗೂ ಹೆಚ್ಚಿನ ಜನರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಪಾವತಿಗಳನ್ನು ನೀಡಲು ಸಾಧ್ಯವಾಗಿದೆ. ಆದರೆ, ಈಗ ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ಕೋಪ ವ್ಯಕ್ತವಾಗುತ್ತಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಫೋನ್ ಪೇ ಸಿಇಒ ಉದ್ಧಟತನ, Uninstall Phonepe ಅಭಿಯಾನ ಟ್ರೆಂಡಿಂಗ್
ದೇಶದಲ್ಲಿ ಒಂದು ಖಾಸಗಿ ಕಂಪನಿಯಾಗಿ ಎಲ್ಲ ವೈವಿಧ್ಯತೆಯನ್ನು ಒಳಗೊಂಡು ಅಭಿವೃದ್ಧಿ ಹೊಂದಿದ್ದೇವೆ. ಹೀಗಾಗಿ, ಸ್ಥಳೀಯ ಕನ್ನಡಿಗರು ಸೇರಿದಂತೆ ಎಲ್ಲಾ ಭಾರತೀಯರಿಗೆ ನ್ಯಾಯಯುತ, ಪಕ್ಷಪಾತವಿಲ್ಲದ ಮತ್ತು ಅರ್ಹತೆ ಆಧಾರಿತ ಉದ್ಯೋಗಾವಕಾಶಗಳನ್ನು ನೀಡಿದ್ದೇವೆ. ಇದರಿಂದ ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಉದ್ಯೋಗದ ಅವಕಾಶ ನೀಡಲು ಸಾಧ್ಯವಾಗುತ್ತದೆ. ಆದರೆ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಕುರಿತು ವೈಯಕ್ತಿಕ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗಿರುವುದನ್ನು ನಾನು ಕೇಳಿದ್ದೇನೆ. ನನ್ನ ಉದ್ದೇಶ ಕನ್ನಡಿಗರನ್ನು ಅವಮಾನಿಸುವುದು ಆಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರದ್ದಾದರೂ ಭಾವನೆಗಳಿಗೆ ನೋವುಂಟಾಗಿದ್ದರೆ ನಿಮಗೆ ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ; ಕೇಂದ್ರ ಸರ್ಕಾರದ ಭ್ರಷ್ಟಾಚಾರ ಕಾರಣವೆಂದ ಕಾಂಗ್ರೆಸ್!
ಫೋನ್‌ಪೇ ವಿರುದ್ಧ ಗುಡುಗಿದ್ದ ಕಿಚ್ಚ ಸುದೀಪ್:
ಮುಖ್ಯವಾಗಿ ಫೋನ್‌ಪೇ ಪೇಮೆಂಟ್ ಮಾಡಿದಾಕ್ಷಣ ಕನ್ನಡದ ನಟ ಕಿಚ್ಚ ಸುದೀಪ್ ಅವರ ಧ್ವನಿ ಕೇಳುತ್ತದೆ. ಫೋನ್‌ಪೇಗೆ ಕಿಚ್ಚ ಸುದೀಪ್ ಧ್ವನಿ ಕೊಟ್ಟಿದ್ದು, ಇದರಿಂದ ಆದಾಯವನ್ನೂ ಪಡೆದಿದ್ದರು. ಆದರೆ, ಕನ್ನಡಿಗರ ಬಗ್ಗೆ ಫೋನ್‌ಪೇ ಸಿಇಒ ಸಮೀರ್ ನಿಗಮ್ ಅವರು ಮಾತನಾಡುತ್ತಿದ್ದಂತೆ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆದಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಕನ್ನಡಿಗನಾಗಿರುವ ಕಿಚ್ಚ ಸುದೀಪ್ ಕೂಡ ಫೋನ್‌ಪೇ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದರು. ಫೋನ್‌ಪೇನಿಂದ ಹೊರಬರಲು ಕೂಡ ತೀರ್ಮಾನ ಕೈಗೊಂಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲಿಯೇ ಸ್ವತಃ ಸಿಇಒ ಸಮೀರ್ ನಿಗಮ್ ಕನ್ನಡಿಗರಿಗೆ ಬೇಷರತ್ ಕ್ಷಮೆ ಕೇಳಿದ್ದಾರೆ.
ಫೋನ್‌ಪೇ ಪುನಃ ಇನ್‌ಸ್ಟಾಲ್ ಮಾಡ್ತಾರಾ ಕನ್ನಡಿಗರು?
ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ಕನ್ನಡಿಗರು ಫೋನ್‌ಪೇ ವಿರುದ್ಧ ಅನ್‌ಇನ್‌ಸ್ಟಾಲ್ ಫೋನ್‌ಪೇ ಅಭಿಯಾನ ಆರಂಭಿಸಿದ್ದರು. ಆದರೆ, ಈಗ ಫೋನ್‌ಪೇ ಸಿಇಒ ಬೇಷರತ್ ಕ್ಷಮೆ ಕೇಳಿದ ನಂತರ ಪುನಃ ಇನ್‌ಸ್ಟಾಲ್ ಮಾಡುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ. ಇನ್ನು ಕನ್ನಡಿಗರು ವಿಶಾಲ ಹೃದಯದವರಾಗಿದ್ದು, ಕ್ಷಮೆ ಕೇಳಿದ ನಂತರ ಇನ್‌ಸ್ಟಾಲ್ ಮಾಡಲು ಮುಂದಾಗುತ್ತಾರೆ ಎಂಬ ಭರವಸೆ ಫೋನ್‌ಪೇ ಸಂಸ್ಥೆಗಿದೆ. ಕಳೆದೊಂದು ದಿನದಿಂದ ಸಣ್ಣಪುಟ್ಟ ವ್ಯಾಪಾರಿಗಳು ಫೋನ್‌ಪೇ ಬಳಸದೇ ಇತರೆ ಆಪ್‌ಗಳನ್ನು ಬಳಸಿ ಡಿಜಿಟಲ್ ಪಾವತಿ ಮಾಡಿಸಿಕೊಳ್ಳಲು ಮುಂದಾಗಿದ್ದರು. ಈಗ ಪುನಃ ಪೋನ್‌ಪೇ ಬಳಕೆ ಮಾಡಲು ಮುಂದಾಗಬಹುದು.