
ಬೆಂಗಳೂರು(ಜು.21) ಕನ್ನಡಿಗರಿಂದ ಬಾಯ್ಕಾಟ್ ಫೋನ್‌ಪೇ ಅಭಿಯಾನ, ಇದರ ಬೆನ್ನಲ್ಲೇ ರಾಯಭಾರಿ ಕಿಚ್ಚ ಸುದೀಪ್ ಒಪ್ಪಂದ ಕಡಿತಗೊಳಿಸುವ ಮಾತುಗಳು ಕೇಳಿಬರುತ್ತಿದ್ದಂತೆ ಫೋನ್‌ಪೇ ಬೆಚ್ಚಿ ಬಿದ್ದಿದೆ. ಇದೀಗ ಬೇಷರತ್ ಕ್ಷಮೆಯಾಚಿಸಿದೆ. ಇಷ್ಟೇ ಅಲ್ಲ ಕನ್ನಡ, ಕರ್ನಾಟಕ, ಇಲ್ಲಿನ ಜನ, ಸಂಸ್ಕೃತಿ ಬಗ್ಗೆ ಅಪಾರ ಗೌರವವಿದ್ದು, ಸರ್ಕಾರದ ನಿಲುವಿಗೆ ಬದ್ಧ ಎಂದು ಪೋನ್‌ಪೆ ಸಂಸ್ಥಾಪಕ ಹಾಗಾ ಸಿಇಒ ಸಮೀರ್ ನಿಮಗ್ ಅಧಿಕೃತವಾಗಿ ಕ್ಷಮೆ ಕೇಳಿದ್ದಾರೆ. ಈ ಕುರಿತು ಕ್ಷಮಾಪಣಾ ಪತ್ರ ಪ್ರಕಟಿಸಿದೆ.
ಸಮೀರ್ ನಿಗಮ್ ಪತ್ರದಲ್ಲಿ, ಫೋನ್‌ಪೇ ಬೆಂಗಳೂರಿನಲ್ಲಿ ಹುಟ್ಟಿದೆ. ಬೆಂಗಳೂರು ಮಣ್ಣಿನೊಂದಿಗೆ ಫೋನ್‌ಪೇ ಬೆಸೆದುಕೊಂಡಿರುವುದಕ್ಕೆ ಅತೀವ ಸಂತಸವಿದೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಪ್ರತಿಭೆ ಹಾಗೂ ವೈವಿಧ್ಯತೆಯಿಂದ ಕೂಡಿರುವ ಬೆಂಗಳೂರಿನಲ್ಲಿ ನಮ್ಮ ಸಂಸ್ಥೆ ಬೆಳೆದು ನಿಂತಿರುವುದು ನಮಗೆ ಹೆಮ್ಮೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ ಹುಟ್ಟಿ ಇದೀಗ ಭಾರತ ಮೂಲೆ ಮೂಲೆಯಲ್ಲಿ ಪಸರಿಸಿದ್ದೇವೆ. ಇದರ ಪರಿಣಾಮ ದೇಶದ 55 ಕೋಟಿ ಭಾರತೀಯರಿಗೆ ಅತ್ಯಂತ ಸುರಕ್ಷತಿ ಹಾಗೂ ಸುಲಭ ಡಿಜಿಟಲ್ ಪಾವತಿ ಸೇವೆ ಒದಗಿಸಲು ಸಾಧ್ಯವಾಗಿದೆ.
ಕನ್ನಡಿಗರನ್ನು ಬೆಂಬಲಿಸಿ ಫೋನ್‌ಪೇ ಜತೆಗಿನ ಒಪ್ಪಂದದಿಂದ ಹೊರಬರ್ತಾರಾ ಸುದೀಪ್? ಕಿಚ್ಚನ ಟೀಂನಿಂದ ಅಪ್ಡೇಟ್
ಸಿಲಿಕಾನ್ ಸಿಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಈ ಖ್ಯಾತಿಗೆ ನಿಜಕ್ಕೂ ಅರ್ಹವಾಗಿದೆ. ಇಲ್ಲಿನ ತಂತ್ರಜ್ಞಾನ, ಮೂಲಭೂತ ಸೌಕರ್ಯ, ಹೊಸತನ, ಸಂಸ್ಕೃತಿಯಿಂದ ಕರ್ನಾಟಕದ ಹಾಗೂ ದೇಶದ ಪ್ರತಿಭಾವಂತ ಯುವ ಸಮೂಹವನ್ನು ಆಕರ್ಷಿಸುತ್ತಿದೆ. ಒಂದು ಸಂಸ್ಥೆಯಾಗಿ ನಾವು ಕರ್ನಾಟಕ ಸರ್ಕಾರ ಹಾಗೂ ಕನ್ನಡಿಗರಿಗೆ ಆಭಾರಿಯಾಗಿದ್ದೇವೆ. ನಮಗೆ ನೀಡಿದ ಸಹಕಾರ, ಪ್ರೋತ್ಸಾಹ, ಸೌಲಭ್ಯ, ಪೂರಕ ವಾತಾವರಣಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಇಂತಹ ವ್ಯವಸ್ಥೆ, ನೀತಿಗಳಿಲ್ಲದಿದ್ದರೆ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ಸೂಪರ್ ಪವರ್ ನಗರವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.
ವೈವಿದ್ಯಮಯ ನಗರದಲ್ಲಿ ನಾವು ಸ್ಥಳೀಯ ಕನ್ನಡಿಗರು, ಇತರ ರಾಜ್ಯದ ಹಾಗೂ ದೇಶದ ಪ್ರತಿಭಾವಂತರಿಗೆ ಯಾವುದೇ ಪಕ್ಷಪಾತ, ಬೇಧವಿಲ್ಲದೆ ಉದ್ಯೋಗ ನೀಡಲು ಪ್ರಯತ್ನಿಸಿದ್ದೇವೆ. ನಮ್ಮ ಸಂಸ್ಥೆಯ ಈ ನೀತಿಯಿಂದ ದೇಶದಲ್ಲಿನ ಉದ್ಯೋಗವಕಾಶ ಹಾಗೂ ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ ಕಲ್ಪಿಸಲು ನೆರವಾಗಿದೆ. ಇದರಿಂದ ಬೆಂಗಳೂರು, ಕರ್ನಾಟಕ ಹಾಗೂ ಭಾರತದ ಆರ್ಥಿಕ ಶಕ್ತಿಯನ್ನು ವೃದ್ಧಿಸಲೂ ಸಹಕಾರಿಯಾಗಿದೆ.
ಇತ್ತೀಚೆಗೆ ಉದ್ಯೋಗ ಮೀಸಲಾತಿ ಕುರಿತು ಮಾಧ್ಯಮಗಳ ವರದಿ, ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆಗಳನ್ನು ನಾನು ಗಮನಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ಸ್ಪಷ್ಟಪಡಿಸಲು ಬಯಸುವ ಮೊದಲ ವಿಚಾರ, ಕನ್ನಡಿಗರನ್ನು, ಕರ್ನಾಟಕದ ಜನರನ್ನು ಅವಾಮಾನಿಸುವ ಉದ್ದೇಶ ಇರಲಿಲ್ಲ. ಒಂದು ವೇಳೆ ನನ್ನ ಮಾತಿನಿಂದ ನೋವಾಗಿದ್ದರೆ ನನ್ನನ್ನು ಕ್ಷಮಿಸಿ, ಇದಕ್ಕಾಗಿ ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ. ಕನ್ನಡ ಹಾಗೂ ಭಾರತೀಯ ಇತರ ಭಾಷೆಗಳ ಬಗ್ಗೆ ಅತೀವ ಗೌರವ ಇಟ್ಟುಕೊಂಡಿದ್ದೇನೆ ಎಂದು ಸಿಇಒ ಸಮೀರ್ ನಿಗಮ್ ಹೇಳಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಫೋನ್ ಪೇ ಸಿಇಒ ಉದ್ಧಟತನ, Uninstall Phonepe ಅಭಿಯಾನ ಟ್ರೆಂಡಿಂಗ್
ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ವೈವಿದ್ಯತೆ ಭಾರತದ ಶ್ರೀಮಂತ ಸಾಂಸ್ಕೃತಿ ಪರಂಪರೆಯ ಆಸ್ತಿಯಾಗಿದೆ.ಇದು ನಾವೆಲ್ಲ ಹೆಮ್ಮೆಪಡುವ ವಿಚಾರ ಎಂದು ಬಲವಾಗಿ ನಂಬಿದ್ದೇನೆ. ಎಲ್ಲಾ ಭಾರತೀಯರು ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸಬೇಕು ಹಾಗೂ ಆಚರಿಸಬೇಕು ಅನ್ನೋದು ನನ್ನ ಅಭಿಪ್ರಾಯ. ಭಾರತೀಯ ಸ್ಟಾರ್ಟ್‌ಅಪ್ ಕಂಪನಿಗಳು ವಿಶ್ವದ ದೈತ್ಯ ಕಂಪನಿಗಳ ವಿರುದ್ದ ಸ್ಪರ್ಧಿಸುತ್ತಿದೆ. ಆ್ಯಪಲ್, ಗೂಗಲ್, ಅಮೆಜಾನ್, ಮೈಕ್ರೋಸಾಫ್ಟ್ ಸೇರಿದಂತೆ ಟ್ರಿಲಿಯನ್ ಡಾಲರ್ ಕಂಪನಿಗಳ ವಿರುದ್ದ ಭಾರತದ ಸ್ಟಾರ್ಟ್ಅಪ್ ಅಷ್ಟೇ ಪರಿಣಾಮಕಾರಿಯಾಗಿ ಸ್ಪರ್ಧಿಸುತ್ತಿದೆ. ಬೆಂಗಳೂರು ಉದ್ಯೋಗ ಸೃಷ್ಟಿಯ ಕೇಂದ್ರ. ಹೆಚ್ಚಿನ ಉದ್ಯೋಗ ಸೃಷ್ಟಿ, ಅಭಿವೃದ್ಧಿ, ಸವಾಲುಗಳಿಗೆ ಸೂಕ್ತ ಪರಿಹಾರ ಹುಡುಕಲು ಎಲ್ಲರು ಜೊತೆಯಾಗಿ ಶ್ರಮಿಸೋಣ ಎಂದು ಸಮೀರ್ ನಿಗಮ್ ಕ್ಷಮಾಪಣ ಪತ್ರದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ