
ಹೈದರಾಬಾದ್ (ಮಾ.25): ತೆಲಂಗಾಣದಲ್ಲಿ ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರರಾವ್ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಹಗರಣಕ್ಕೆ ಸಂಬಂಧಿಸಿದಂತೆ ಭಾನುವಾರ ಹೈದರಾಬಾದ್ ಪೊಲೀಸರು, ಗುಪ್ತಚರ ಇಖಾಖೆಯ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ, ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೆ ಏರಿದಂತಾಗಿದೆ.
ಬಂಧಿತರನ್ನು ಹೆಚ್ಚುವರಿ ಡಿಸಿಪಿ ತಿರುಪತಣ್ಣ ಹಾಗೂ ಹೆಚ್ಚುವರಿ ಎಸ್‌ಪಿ ಎನ್. ಭುಜಂಗರಾವ್ ಎಂದು ಗುರುತಿಸಲಾಗಿದೆ. ಈ ಅಧಿಕಾರಿಗಳು ವಿಶೇಷ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಇದಕ್ಕೂ ಮೊದಲು ಅಮಾನತಾಗುರುವ ಡಿಎಸ್‌ಪಿ ಡಿ. ಪ್ರಣೀತ್ ರಾವ್ ಅವರನ್ನು ಬಂಧಿಸಲಾಗಿತ್ತು.
ರೇವಂತ್ ಆಪ್ತರ ಫೋನ್ ಟ್ಯಾಪ್: ಬಿಆರ್‌ಎಸ್ ನಾಯಕ ಕೆಸಿಆರ್ ಅವಧಿಯಲ್ಲಿ ಇವರು ಸರ್ಕಾರದ ಅಣತಿ ಮೇಲೆ ಈಗ ತೆಲಂಗಾಣ ಮುಖ್ಯಮಂತ್ರಿ ಆಗಿರುವ ರೇವಂತ ರೆಡ್ಡಿ ಹಾಗೂ ಅವರ ಆಪ್ತರ ಫೋನ್ ಕದ್ದಾಲಿಸಿದ್ದರು. ಬಿಆರ್‌ಎಸ್ ನಾಯಕನೊಬ್ಬನ ಸೂಚನೆ ಮೇರೆಗೆ ಫೋನ್ ಕದ್ದಾಲಿಕೆ ನಡೆದಿತ್ತು. ಕಾಂಗ್ರೆಸ್ ಪಕ್ಷ ಚುನಾವಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಹಾಗೂ ಹಣವನ್ನು ಹೇಗೆ ಹೊಂದಿಸುತ್ತಿದೆ ಎಂಬ ಮಾಹಿತಿಗಳನ್ನು ಬಿಆರ್‌ಎಸ್ ನಾಯಕನ ಸೂಚನೆ ಮೇರಗೆ ಕದ್ದಾಲಿಸಲಾಗಿತ್ತು. ಕದ್ದಾಲಿಕೆಗೆ ಬಿಆರ್‌ಎಸ್ ನಾಯಕರು ಒಂದು ತೆಲುಗು ಖಾಸಗಿ ನ್ಯೂಸ್ ಚಾನೆಲ್ ಮುಖ್ಯಸ್ಥನ ಸಹಕಾರ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಇದಕ್ಕೂ ಮೊದಲು ಪ್ರಣೀತ್ ಬಂಧನ ಆಗಿತ್ತು: ಈಗಿನ ಇಬ್ಬರು ಬಂಧಿತರು ವಿಶೇಷ ಗುಪ್ತಚರ ಇಲಾಖೆಯಲ್ಲಿ (ಎಸ್‌ಐಬಿ) ಪ್ರಣೀತ್ ರಾವ್ ಜತೆಗೂಡಿ ಇವರು ಕದ್ದಾಲಿಕೆ ಮಾಡುತ್ತಿದ್ದರು. ಬಳಿಕ ಕದ್ದಾಲಿಕೆ ಮಾಡಿದ ಮಾಹಿತಿಯನ್ನು ಎಲೆಕ್ಟ್ರಾನಿಕ್ ಸಾಧನಗಳಿಂದ ಅಳಿಸಿ ಹಾಕಿ ಹಾಕಿ ಎಲ್ಲ ಪುರಾವೆಗಳ ನಾಶಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಇದೇ ವೇಳೆ ಎಸ್‌ಐಬಿ ಮಾಜಿ ಮುಖ್ಯಸ್ಥ ಟಿ. ಪ್ರಭಾಕರ ರಾವ್, ಹಿಂದಿನ ಟಾಸ್ಕ್‌ಫೋರ್ಸ್ ಡಿಸಿಪಿ ರಾಧಾ ಕಿಶನ್ ರಾವ್ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ, ಕೆಸಿಆರ್ ಅವರ ಬಿಆರ್‌ಎಸ್ ಪಕ್ಷ ಈ ಹಗರಣದಲ್ಲಿ ಶಾಮೀಲಾಗಿದೆ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ