Latest Videos

ಮಣಿಪುರದಲ್ಲಿ ಸಂಘರ್ಷ ತಡೆಗೆ ಶಾಂತಿ ಸಮಿತಿ ರಚನೆ: ಸೈನಿಕರಿಂದ ಕಸಿದ ಗನ್‌ ಮರಳಿಸಲು ಡ್ರಾಪ್‌ಬಾಕ್ಸ್‌

By Kannadaprabha NewsFirst Published Jun 11, 2023, 8:33 AM IST
Highlights

ಮಣಿಪುರದಲ್ಲಿ ಸಂಘರ್ಷದಲ್ಲಿ ತೊಡಗಿರುವ ವಿವಿಧ ಸಮುದಾಯಗಳ ನಡುವೆ ಶಾಂತಿ ಸ್ಥಾಪನೆ ಮಾಡಲು ರಾಜ್ಯಪಾಲರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ನವದೆಹಲಿ/ಇಂಫಾಲ್: ಮಣಿಪುರದಲ್ಲಿ ಸಂಘರ್ಷದಲ್ಲಿ ತೊಡಗಿರುವ ವಿವಿಧ ಸಮುದಾಯಗಳ ನಡುವೆ ಶಾಂತಿ ಸ್ಥಾಪನೆ ಮಾಡಲು ರಾಜ್ಯಪಾಲರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಸಮಿತಿಯಲ್ಲಿ ಮುಖ್ಯಮಂತ್ರಿ, ಕೆಲ ಸಚಿವರು, ಸಂಸದರು, ಶಾಸಕರು, ರಾಜಕೀಯ ಪಕ್ಷಗಳ ನಾಯಕರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಸದಸ್ಯರಾಗಿದ್ದಾರೆ. ರಾಜ್ಯಪಾಲರ ನೇತೃತ್ವದ ‘ಶಾಂತಿ ಸಮಿತಿ’ಯು ಸಂಘರ್ಷದಲ್ಲಿ ತೊಡಗಿರುವ ಬೇರೆ ಬೇರೆ ಸಮುದಾಯಗಳ ಜೊತೆ ಮಾತುಕತೆ ನಡೆಸಿ ಅವರ ನಡುವಿನ ಭಿನ್ನಮತವನ್ನು ನಿವಾರಿಸಲು ಯತ್ನಿಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯ (Union Home Ministry)ತಿಳಿಸಿದೆ.

ಮಣಿ​ಪು​ರ​ದಲ್ಲಿ 1 ತಿಂಗ​ಳಿಗೂ ಹೆಚ್ಚು ಕಾಲ​ದಿಂದ 2 ಜನಾಂಗ​ಗಳ ನಡುವೆ ಸಂಘರ್ಷ ನಡೆ​ದಿದ್ದು, ಸುಮಾರು 105 ಜನ​ರನ್ನು ಬಲಿ​ಪ​ಡೆ​ದಿದೆ. ಮೈತೇಯಿ ಸಮು​ದಾ​ಯಕ್ಕೆ ಎಸ್ಟಿ ಸ್ಥಾನ​ಮಾನ ನೀಡು​ವುದನ್ನು ವಿರೋ​ಧಿಸಿ ಕುಕಿ ಸಮು​ದಾಯ (Kuki community) ಹಿಂಸಾ​ಚಾ​ರಕ್ಕೆ ಇಳಿ​ದಿತ್ತು. ಇದರ ವಿರುದ್ಧ ಮೈತೇಯಿ ಸಮು​ದಾಯ (Maithei community) ಕೂಡ ತಿರು​ಗಿ​ಬಿ​ದ್ದಿತ್ತು. ಹೀಗಾಗಿ ರಾಜ್ಯ​ದಲ್ಲಿ ಶಾಂತಿ ಮರೀ​ಚಿ​ಕೆ​ಯಾ​ಗಿ​ದೆ.

ಮಣಿಪುರ ಹಿಂಸಾಚಾರ,ಆಸ್ಪತ್ರೆ ತೆರಳುತ್ತಿದ್ದ ತಾಯಿ-ಮಗನ ಜೀವಂತ ಸುಟ್ಟ ಪ್ರತಿಭಟನಾಕಾರರು!

ಸೈನಿಕರಿಂದ ಕಸಿದ ಗನ್‌ ಮರಳಿಸಲು ಮಣಿಪುರದಲ್ಲಿ ‘ಡ್ರಾಪ್‌ಬಾಕ್ಸ್‌’

ಇಂಫಾಲ: ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸೇನಾ ಕಾರ್ಯಾಚರಣೆ ವೇಳೆ ಜನರು ಯೋಧರಿಂದ ಕಸಿದುಕೊಂಡ ಶಸ್ತ್ರಾಸ್ತ್ರಗಳನ್ನು ಮರಳಿಸಲು ಬಿಜೆಪಿ ಶಾಸಕರೊಬ್ಬರು ತಮ್ಮ ಮನೆಯಲ್ಲಿ ‘ಡ್ರಾಪ್‌ಬಾಕ್ಸ್‌’ ಅಳವಡಿಸಿದ್ದಾರೆ. ಜನರು ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ತಂದು ಇದರಲ್ಲಿ ಹಾಕಬಹುದು. ಅವರ ಪರಿಚಯವನ್ನು ರಹಸ್ಯವಾಗಿಡಲಾಗುತ್ತದೆ. ಅಂದರೆ ಅವರ ತಪ್ಪನ್ನು ಕ್ಷಮಿಸಲಾಗುತ್ತದೆ.

ಇಂಫಾಲ ಪೂರ್ವ ಕ್ಷೇತ್ರದ ಶಾಸಕ ಎಲ್‌.ಸುಶೀಂದ್ರೋ ಮೀಟಿ (Imphal East Constituency MLA L. Sushindro Meeti) ಅವರೇ ತಮ್ಮ ಮನೆಯಲ್ಲಿ ಡ್ರಾಪ್‌ಬಾಕ್ಸ್‌ ಇರಿಸಿರುವವರು. ಗಲಭೆ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಮರಳಿಸಿದರೆ ಶಾಂತಿ ಸ್ಥಾಪನೆಗೆ ಸಹಾಯವಾಗುತ್ತದೆ ಎಂದು ಶಾಸಕ ಸುಶೀಂದ್ರೋ ಸ್ವಯಂಪ್ರೇರಿತರಾಗಿ ಡ್ರಾಪ್‌ಬಾಕ್ಸ್‌ ಇರಿಸಿದ್ದಾರೆ. ಈಗಾಗಲೇ ಕೆಲವರು ಇದರಲ್ಲಿ ರೈಫಲ್‌ಗಳು ಹಾಗೂ ಗುಂಡುಗಳನ್ನು ತಂದು ಹಾಕಿದ್ದಾರೆ. ಶಸ್ತ್ರಾಸ್ತ್ರ ತಂದು ಡ್ರಾಪ್‌ಬಾಕ್ಸ್‌ಗೆ ಹಾಕುವವರ ಬಳಿ ನಾವು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಶಾಸಕರು ಪ್ರಕಟಿಸಿದ್ದಾರೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿಕ್ಕಿ ಬಿಎಸ್ಸೆಫ್‌ ಯೋಧ​ನ ಹತ್ಯೆ

ಮೀಟಿ ಹಾಗೂ ಕುಕಿ ಸಮುದಾಯದ ನಡುವೆ ಕಳೆದ ತಿಂಗಳು ಭಾರಿ ಸಂಘರ್ಷ ನಡೆದ ವೇಳೆ ಪೊಲೀಸ್‌ ಠಾಣೆಗಳಿಗೆ ನುಗ್ಗಿ ಜನರು ಶಸ್ತ್ರಾಸ್ತ್ರಗಳನ್ನು ದೋಚಿದ್ದರು. ಅವುಗಳನ್ನು ಮರಳಿಸುವಂತೆ ಮುಖ್ಯಮಂತ್ರಿ ಬೀರೇನ್‌ ಸಿಂಗ್‌ (Biren Singh) ಮನವಿ ಮಾಡಿದ್ದರು. ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಹುಡುಕಾಟ ನಡೆಸಿ 35 ಗನ್‌ಗಳನ್ನು ವಶಪಡಿಸಿಕೊಂಡಿದ್ದರು. ಇನ್ನೂ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಜನರ ಕೈಯಲ್ಲೇ ಉಳಿದಿವೆ. ಅದು ಶಾಂತಿ ಸ್ಥಾಪನೆಗೆ ಅಡ್ಡಿಯಾಗಿದೆ.

ಮಣಿಪುರ ಹಿಂಸೆ ತನಿ​ಖೆಗೆ ಸಿಬಿಐ ಎಸ್‌​ಐಟಿ ರಚ​ನೆ

ನವದೆಹಲಿ: ಸಿಬಿಐಗೆ ವಹಿಸಲಾಗಿರುವ ಮಣಿಪುರ ಹಿಂಸಾಚಾರದಲ್ಲಿ ಕ್ರಿಮಿನಲ್‌ ಸಂಚು ಇದೆಯೇ ಎಂಬುದು ಸೇರಿದಂತೆ 6 ಪ್ರಕರಣಗಳನ್ನು ತನಿಖೆ ಮಾಡಲು ಡಿಐಜಿ ರಾರ‍ಯಂಕ್‌ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ಸಿಬಿಐ ರಚನೆ ಮಾಡಿದೆ. ಹಿಂಸಾಚಾರದ ಬಳಿಕ ಮಣಿಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amit Shah), ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ 6 ಎಫ್‌ಐಆರ್‌ಗಳನ್ನು ಸಿಬಿಐ ತನಿಖೆ ನಡೆಸಲಿದೆ ಎಂದು ಹೇಳಿದ್ದರು. ಇದರಲ್ಲಿ 5 ಎಫ್‌ಐಆರ್‌ಗಳು ಈ ಕೃತ್ಯದಲ್ಲಿ ಕ್ರಿಮಿನಲ್‌ ಸಂಚು ನಡೆದಿದೆಯೇ ಎಂಬ ಆರೋಪಗಳನ್ನು ಆಧರಿಸಿತ್ತು. ಕೇಂದ್ರ ಸರ್ಕಾರದ ಮೂಲಕ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ವಿಚಾರಕ್ಕೆ ಆರಂಭವಾದ ಪ್ರತಿಭಟನೆ ಹಿಂಸಾಚಾರ ಸ್ವರೂಪಕ್ಕೆ ತಿರುಗಿದ್ದು, 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 300ಕ್ಕೂ ಹೆಚ್ಚು ಮಂದಿ ಈ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು.

click me!