ಬೇಕರಿಯಲ್ಲಿ ಪರಿಚಯವಾದ ಯುವತಿಯನ್ನು ಪ್ರಾರ್ಥನಾ ಸಭೆಗೆ ಆಹ್ವಾನಿಸಿ ಸಭ್ಯವಾಗಿ ನಡೆದುಕೊಂಡು ನಂಬಿಕೆ ಗಳಿಸಿದ ನಂತರ ಕಿರುಕುಳ ನೀಡಲಾಗಿತ್ತು.
ಮೊಹಾಲಿ: ಪಂಜಾಬ್‌ನಲ್ಲಿ ಬಲತ್ಕಾರ ಪ್ರಕರಣವೊಂದರಲ್ಲಿ ಪಾದ್ರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2018ರಲ್ಲಿ ನಡೆದ ಬಲತ್ಕಾರ ಪ್ರಕರಣದಲ್ಲಿ ಬಜಿಂದರ್ ಸಿಂಗ್ ಎಂಬ ಪಾದ್ರಿಗೆ ಮೊಹಾಲಿಯ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಮೊಹಾಲಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಕ್ರಾಂತ್ ಕುಮಾರ್ ಈ ತೀರ್ಪು ನೀಡಿದ್ದಾರೆ. ಈತನ ವಿರುದ್ಧ ಇದ್ದ ಅತ್ಯಾ*ಚಾರ, ಅಕ್ರಮ ಬಂಧನ, ಉದ್ದೇಶಪೂರ್ವಕವಾಗಿ ಗಾಯಗೊಳಿಸಿದ ಆರೋಪಗಳು ಸಾಬೀತಾಗಿದ್ದವು. ಇದರ ಬೆನ್ನಲ್ಲೇ ಶಿಕ್ಷೆ ಪ್ರಕಟಿಸಲಾಗಿದೆ. ಬಜಿಂದರ್ ಸಿಂಗ್‌ನನ್ನು ಪಟಿಯಾಲ ಜೈಲಿಗೆ ಸ್ಥಳಾಂತರಿಸಲಾಗಿದೆ.
ಯುವತಿಯೊಬ್ಬಳಿಗೆ ವಿದೇಶದಲ್ಲಿ ಕೆಲಸ ಕೊಡಿಸಿ ಅಲ್ಲಿಯೇ ವಾಸಿಸುವಂತೆ ಮಾಡುವುದಾಗಿ ಆಮಿಷವೊಡ್ಡಿ ಯುವತಿಯ ನಂಬಿಕೆ ಗಳಿಸಿ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದ. ಮನೆಗೆ ಕರೆಸಿ ಕಿರುಕುಳ ನೀಡಿದ ಬಳಿಕ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಕಿರುಕುಳ ಮುಂದುವರಿಸಿದ್ದಾಗಿ ದೂರುದಾರ ಯುವತಿ ಆರೋಪಿಸಿದ್ದಾರೆ. 2018ರಲ್ಲಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಪಾಸ್ಟರ್ ಬಜಿಂದರ್ ಸಿಂಗ್‌ನನ್ನು ಬಂಧಿಸಲಾಗಿತ್ತು. ಬಳಿಕ ಆತ ಜಾಮೀನು ಪಡೆದು ಹೊರ ಬಂದಿದ್ದ.
ಪ್ರಕರಣದ ಇತರ ಆರೋಪಿಗಳಾದ ಅಕ್ಬರ್ ಘಾಟಿ, ರಾಜೇಶ್ ಚೌಧರಿ, ಜತೀಂದರ್ ಕುಮಾರ್, ಸಿತಾರ್ ಅಲಿ ಮತ್ತು ಸಂದೀಪ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ಖುಲಾಸೆಗೊಳಿಸಿದೆ. ನ್ಯಾಯಾಲಯ ತೀರ್ಪು ಪ್ರಕಟಿಸುವ ವೇಳೆ ಬಜಿಂದರ್ ಸಿಂಗ್‌ನ ಅನೇಕ ಅನುಯಾಯಿಗಳು ನ್ಯಾಯಾಲಯದತ್ತ ನುಗ್ಗಲು ಯತ್ನಿಸಿದ್ದು, ಆವಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಈ ಪಾದ್ರಿಗೆ ಯುವತಿ ಬೇಕರಿಯಲ್ಲಿ ಪರಿಚಯವಾಗಿದ್ದಳು. ಆಕೆಯನ್ನು ಪ್ರಾರ್ಥನಾ ಸಭೆಗೆ ಆಹ್ವಾನಿಸಿದ್ದ ಆತ ಆರಂಭದಲ್ಲಿ ಸಭ್ಯವಾಗಿ ನಡೆದುಕೊಂಡು ನಂಬಿಕೆ ಗಳಿಸಿದ ನಂತರ ಲೈಂಗಿ*ಕ ಕಿರುಕುಳ ನೀಡಿದ್ದ. ವಿದೇಶ ಪ್ರವಾಸಕ್ಕೆ ಹಣ ನೀಡುವಂತೆ ಬೆದರಿಸಿ ಇಲ್ಲದಿದ್ದರೆ ಯುವತಿಯ ಕಿರುಕುಳ ದೃಶ್ಯವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ. ಇದರಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮತ್ತೊಬ್ಬ ಮಹಿಳೆಯೂ ಈತನ ವಿರುದ್ಧ ಕಿರುಕುಳ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ.