ಸೆಲ್ಫಿ ಬೇಕಾ 100 ರೂಪಾಯಿ ಕೊಡಿ, ಮತ್ತೊಂದು ವಿವಾದ ಮೈಮೇಲೆ ಎಳೆದ ಸಚಿವೆ!

By Suvarna NewsFirst Published Jul 18, 2021, 9:32 PM IST
Highlights
  • ಸೆಲ್ಫಿ ತೆಗೆಯಲು 100 ರೂಪಾಯಿ ನೀಡಬೇಕು ಎಂದು ಮಧ್ಯಪ್ರದೇಶ ಸಚಿವೆ
  • ಸದಾ ವಿವಾದಾತ್ಮಕ ಹೇಳಿಕೆ ನೀಡುವ ಸಚಿವೆ ಇದೀಗ ಸೆಲ್ಫಿ ಮೇಲೂ ರಾಜಕೀಯ
  • 100 ರೂಪಾಯಿ ಕೊಟ್ಟ ಸೆಲ್ಫಿ ತೆಗೆಯಲು ಇವರೇನು ಸೆಲೆಬ್ರೆಟಿನಾ, ಕ್ರೀಡಾಪಟುವೇ ಎಂದ ಜನ?

ಇಂದೋರ್(ಜು.18):  ಸೆಲ್ಫಿ ಬೇಕೆ, 100 ರೂಪಾಯಿ ಪಾವತಿಸಿ. ಇದು ಮಧ್ಯಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಶಾ ಠಾಕೂರ್ ಹೊಸ ಆಜ್ಞೆ. ಸದಾ ವಿವಾದಾತ್ಮಕ ಹೇಳಿಕೆ ನೀಡುವ ಉಶಾ ಠಾಕೂರ್ ಇದೀಗ ಸೆಲ್ಫಿ ಹೇಳಿಕೆ ಮೂಲಕ ಮತ್ತೆ ಮಧ್ಯ ಪ್ರದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.

'ॐ ಉಚ್ಛಾರಣೆಯಿಂದ ಯೋಗ ಶಕ್ತಿಶಾಲಿಯಾಗಲ್ಲ, ಅಲ್ಲಾ ಎಂದರೆ ಶಕ್ತಿ ಕಡಿಮೆ ಆಗುವುದಿಲ್ಲ'

ಯಾವುದೇ ಕಾರ್ಯಕ್ರಮಕ್ಕೆ ತೆರಳುವಾಗ, ಸಾರ್ವಜನಿಕ ಸ್ಥಳಕ್ಕೆ ಬರುವಾಗ ಸೆಲ್ಫಿಗಾಗಿ ದುಂಬಾಲು ಬೀಳುತ್ತಾರೆ. ಇದರಿಂದ ನಮ್ಮ ಸಮಯ ವ್ಯರ್ಥವಾಗುತ್ತಿದೆ. ಇದರಿಂದ ತಡವಾಗಿ ಕಾರ್ಯಕ್ರಮಕ್ಕೆ ತಲುಪುತ್ತೇವೆ. ಹೀಗಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳಲು 100 ರೂಪಾಯಿ ಪಾವತಿಸಬೇಕು. ಈ ಹಣವನ್ನು ಪಕ್ಷದ ಕಲ್ಯಾಣ ಕಾರ್ಯಗಳಿಗೆ ಬಳಸಬಹುದು ಎಂದು ಉಶಾ ಹೇಳಿದ್ದಾರೆ.

ಉಶಾ ಠಾಕೂರ್ ಹೇಳಿಕೆಯನ್ನು ಕಾಂಗ್ರೆಸ್ ವ್ಯಂಗ್ಯವಾಡಿದೆ. ಬಿಜೆಪಿ ಇದೀಗ ಬ್ಯೂಸಿನೆಸ್ ಪಾರ್ಟಿಯಾಗಿದೆ. ಹೆಜ್ಜೆ ಹೆಜ್ಜೆಗೆ ಹಣ ವಸೂಲಿ ಮಾಡುವ ಯೋಜನೆಗಳನ್ನೇ ಜಾರಿಗೆ ತರುತ್ತಿದೆ ಎಂದಿದೆ. ಇತ್ತ ಮಧ್ಯ ಪ್ರದೇಶ ಜನ, ಸೆಲ್ಫಿಗೆ ದುಡ್ಡು ಕೇಳಲು ಇವರೇನು ಸೆಲೆಬ್ರೆಟಿಯಾ ಅಥವಾ ಖ್ಯಾತ ಕ್ರೀಡಾಪಟವೇ? ಭಾರತದಲ್ಲಿ ಒಂದೊಂದು ಸೆಕೆಂಡ್ ಮುಖ್ಯವಾಗಿರುವ ಹಲವರು ಸೆಲ್ಫಿಗೆ ಅವಕಾಶ ನೀಡುತ್ತಾರೆ. ಬಿಜೆಪಿ ಸಚಿವೆಗೆ ಹಣ ವಸೂಲಿ ಕೆಲಸ ಬಿಟ್ಟರೆ ಬೇರೇನು ಬರುವುದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಶಾ ಠಾಕೂರ್ ಈ ರೀತಿ ಅಸಂಬದ್ದ ಹೇಳಿಕ ನೀಡುತ್ತಿರುವುದು ಇದೇ ಮೊದಲಲ್ಲ.  ಯೋಗದಿಂದ ಇಡೀ ವಾತಾವರಣ ಶುದ್ದಿಯಾಗುತ್ತೆ ಎಂದಿದ್ದರು. ಹೀಗಾಗಿ ಯೋಗ ಮಾಡಿದರೆ ಆ ಪ್ರದೇಶದಲ್ಲಿ ವೈರಸ್ ಸುಳಿಯುವುದಿಲ್ಲ ಎಂದು ಭಾರಿ ವಿವಾದ ಸೃಷ್ಟಿಸಿದ್ದರು. ಇನ್ನು ಮಾಸ್ಕ್ ಇಲ್ಲದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ತನ್ನ ವೇದಿಕೆ ಜೀವನ, ಯೋಗದಿಂದ ತನಗೆ ಕೊರೋನಾ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಸೆಲ್ಫಿಗೆ 100 ರೂಪಾಯಿ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಇದೀಗ ಬಿಜೆಪಿ ತೇಪೆ ಹಚ್ಚುವ ಕಾರ್ಯ ಮಾಡಿದೆ. ಸಚಿವೆ ಜೋಕ್ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಜೋಕ್ ಮಾಡುವ ಅವಕಾಶವಿದೆ ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಹೇಳಿದ್ದಾರೆ.
 

click me!