ತ್ರಿಶೂರ್(ಜು.18):ಕೊರೋನಾ 3ನೇ ಅಲೆ ಆತಂಕ, ಡೆಲ್ಟಾ ಪ್ಲಸ್ ಭೀತಿ ನಡುವೆ ಮನಸ್ಸಿಗಿ ಹಿತ ನೀಡುವ ಹಬ್ಬವೊಂದು ಕೇರಳದಲ್ಲಿ ಆರಂಭಗೊಂಡಿದೆ. ಇದು ಆನೆಗಳ ಹಬ್ಬ. ಮನುಷ್ಯ ಹಾಗೂ ಆನೆಗಳ ನಡುವಿನ ಸಂಘರ್ಷ, ಆನೆಗಳ ಮೇಲಿನ ದೌರ್ಜನ್ಯ, ಹಿಂಸೆ ಸೇರಿದಂತೆ ಪ್ರತಿ ದಿನ ಒಂದಲ್ಲ ಒಂದು ಮಾನವ ಪ್ರಾಣಿ ಸಂಘರ್ಷ ಸುದ್ದಿಯಾಗುತ್ತಲೇ ಇದೆ. ಇದರ ನಡುವೆ ಆನೆಗಳಿಗೂ ಮಾನವರಂತೆ ಆಷಾಡದಲ್ಲಿ ವಿಶ್ರಾಂತಿ ನೀಡುವ, ಆರೈಕೆ ಹಾಗೂ ಚಿಕಿತ್ಸೆ ನೀಡುವ ವಿಶೇಷ ಆನೆಗಳ ಹಬ್ಬ ಆರಂಭಗೊಂಡಿದೆ.
ಕೇರಳ ಜನತೆಗೆ ಆನೆ ಮೇಲೆ ವಿಶೇಷ ಪ್ರೀತಿ. ಇನ್ನು ಕೇರಳದ ತ್ರಿಶೂರ್ ಪೂರಂನಲ್ಲಿ ಆನೆಗಳ ಉತ್ಸವ ವಿಶ್ವ ವಿಖ್ಯಾತವಾಗಿದೆ. ಕೇರಳ ದೇವಸ್ಥಾನಗಳ ಉತ್ಸವ, ಜಾತ್ರೆ, ಪೂಜೆಗಳಿಗೆ ಆನೆ ಇರಲೇಬೇಕು. ಹೀಗೆ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ದೇವಸ್ಥಾನದ ಆನೆಗಳಿಗೆ ಆಷಾಡ ತಿಂಗಳಲ್ಲಿ ಸಂಪೂರ್ಣ ವಿಶ್ರಾಂತಿ. ಈ ವೇಳೆ ಆನೆಯೂಟ್(ಆನೆ ಹಬ್ಬ) ವಿಶೇಷ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿ ಕೊರೋನಾ ಕಾರಣ ಹಲವು ನಿರ್ಬಂಧಗಳೊಂದಿಗೆ ಆನೆಯೂಟ್ ಹಬ್ಬ ಆರಂಭಗೊಂಡಿದೆ.
undefined
ವಡಕ್ಕನಾಥನ್ ದೇವಸ್ಥಾನದಲ್ಲಿ ಕೇರಳ ದೇವಸಂ ಬೋರ್ಡ್ ಪ್ರತಿ ವರ್ಷ ಆನೆಯೂಟ್ ಆಚರಿಸುತ್ತದೆ. ಆಷಾಡ ಮಾಸದಲ್ಲಿ ಆಚರಿಸಲಾಗುವ ಈ ಆನೆಯೂಟ್ ಹಬ್ಬದಲ್ಲಿ ಆನೆಗಳ ವಿಶೇಷ ಆರೈಕೆ ನಡೆಯಲಿದೆ. ಆರ್ಯುವೇದ ಚಿಕಿತ್ಸೆ, 9 ಬಗೆಯ ಹಣ್ಣುಗಳು, ಅನ್ನ, ತುಪ್ಪ ಸೇರಿದಂತೆ ಹಲವು ಭಕ್ಷ್ಯಗಳನ್ನು ಆನೆಗಳಿಗೆ ನೀಡಲಾಗುತ್ತದೆ.
ಆಷಾಡ ಮಾಸದ ಒಂದು ತಿಂಗಳು ಆನೆಗಳಿಗೆ ಸಂಪೂರ್ಣ ವಿಶ್ರಾಂತಿ, ಚಿಕಿತ್ಸೆ ಹಾಗೂ ಆರೈಕೆ ನಡೆಯಲಿದೆ. ಈ ಒಂದು ತಿಂಗಳ ಅವಧಿಯಲ್ಲಿ ಆನೆಗಳನ್ನು ಮುಂದಿನ ಒಂದು ವರ್ಷದ ಉತ್ಸವ, ಜಾತ್ರೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಪಾಲ್ಗೊಳ್ಳಲು ಸಜ್ಜುಗೊಳಿಸಲಾಗುತ್ತದೆ.
ಪ್ರತಿ ವರ್ಷ 80 ರಿಂದ 85 ಆನೆಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತದೆ. ಆದರೆ ಕೊರೋನಾ ಕಾರಣ ಈ ಬಾರಿ ಕೇವ 15 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಮಾವುತರು, ದೇವಸ್ಥಾನ ಆಡಳಿತ ಮಂಡಳಿ, ದೇವಸಂ ಬೋರ್ಡ್ ಸೇರಿದಂತೆ ಒಟ್ಟು 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ವರ್ಷ ಈ ಆನೆಯೂಟ್ ವೀಕ್ಷಿಸಲು ವಡಕ್ಕನಾಥನ್ ದೇವಸ್ಥಾನ ತುಂಬಿ ತುಳುಕಲಿದೆ. 50 ಸಾವಿರಕ್ಕೂ ಹೆಚ್ಚು ಭಕ್ತರು ಆನೆಯೂಟ್ ಹಬ್ಬ ವೀಕ್ಷಿಸಲು ಆಗಮಿಸುತ್ತಾರೆ. ಭಕ್ತರು ಆನೆಗಳಿಗಾಗಿ ಹಣ್ಣಗಳು ತಂದು ನೀಡುತ್ತಾರೆ. ಆದರೆ ಈ ಬಾರಿ ಕೊರೋನಾ ಕಾರಣ ಕಠಿಣ ನಿರ್ಬಂಧ ವಿಧಿಸಲಾಗಿದೆ.