ಇಂದಿನಿಂದ ಸಂಸತ್ತಿನ ಬಜೆಟ್‌ ಕಲಾಪ ಆರಂಭ, ನಾಳೆ ಕೇಂದ್ರ ಬಜೆಟ್‌

By Kannadaprabha NewsFirst Published Jan 31, 2023, 6:54 AM IST
Highlights

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದ ಮೊದಲ ಕಂತು ಫೆ.14ಕ್ಕೆ ಮುಕ್ತಾಯವಾಗಲಿದ್ದು, ಮಾ.12ರಿಂದ ಬಜೆಟ್‌ ಅಧಿವೇಶನದ ಎರಡನೆಯ ಕಂತು ಆರಂಭವಾಗಲಿದೆ.

ನವದೆಹಲಿ:   ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದ ಮೊದಲ ಕಂತು ಫೆ.14ಕ್ಕೆ ಮುಕ್ತಾಯವಾಗಲಿದ್ದು, ಮಾ.12ರಿಂದ ಬಜೆಟ್‌ ಅಧಿವೇಶನದ ಎರಡನೆಯ ಕಂತು ಆರಂಭವಾಗಲಿದೆ. ಮೊದಲ ದಿನವಾದ ಮಂಗಳವಾರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಭಾಷಣ ಮಾಡಲಿದ್ದಾರೆ. ಫೆ.1ರ ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ನರೇಂದ್ರ ಮೋದಿ ಸರ್ಕಾರದ ಈ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ.

ಬಜೆಟ್‌ ಅಧಿವೇಶನದ (budget session) ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿತು. ಆಮ್‌ ಆದ್ಮಿ ಪಕ್ಷ, ಡಿಎಂಕೆ, ಎಡಪಕ್ಷಗಳು, ಆರ್‌ಜೆಡಿ, ಜೆಡಿಯು, ಟಿಆರ್‌ಎಸ್‌, ಟಿಎಂಸಿ, ಬಿಜೆಡಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯ ಸಮಾರೋಪಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕರು ಸರ್ವಪಕ್ಷ ಸಭೆಗೆ ಗೈರಾಗಿದ್ದರು.

ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆ ಮುಕ್ತಾಯ, ಜಂಟಿ ಅಧಿವೇಶನ ಕುರಿತು ನಾಳೆ ರಾಷ್ಟ್ರಪತಿ ಭಾಷಣ

ಅದಾನಿ ವಿವಾದ ಚರ್ಚೆಗೆ ಪಟ್ಟು:

ಸರ್ವಪಕ್ಷ ಸಭೆಯಲ್ಲಿ ಆಮ್‌ ಆದ್ಮಿ (Aam Aadmi Party)ಮುಂತಾದ ಪಕ್ಷಗಳು ಉದ್ಯಮಿ ಗೌತಮ್‌ ಅದಾನಿ (Gautam Adani) ಷೇರು ಮಾರುಕಟ್ಟೆಯಲ್ಲಿ ಹಗರಣ ನಡೆಸಿದ್ದಾರೆಂಬ ಅಮೆರಿಕದ ಕಂಪನಿಯೊಂದರ ಆರೋಪದ ಬಗ್ಗೆ ಸಂಸತ್‌ ಅಧಿವೇಶನದಲ್ಲಿ ಚರ್ಚೆ ನಡೆಸಬೇಕೆಂದು ಆಗ್ರಹಿಸಿದವು. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ದೇಶಾದ್ಯಂತ ಜಾತಿ ಆಧರಿತ ಆರ್ಥಿಕ ಗಣತಿ ನಡೆಸಬೇಕೆಂದು ಒತ್ತಾಯಿಸಿತು. ಅದಕ್ಕೆ ಟಿಆರ್‌ಎಸ್‌, ಟಿಎಂಸಿ, ಬಿಜೆಡಿ ಮುಂತಾದ ಪಕ್ಷಗಳು ಬೆಂಬಲ ಸೂಚಿಸಿದವು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಮಂಗಳವಾರದಿಂದ ಆರಂಭವಾಗುವ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವು ನಿಯಮಕ್ಕೆ ಅನುಗುಣವಾಗಿ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಿದ್ಧವಿದೆ. ಕಲಾಪ ಸುಗಮವಾಗಿ ನಡೆಯಲು ನಾವು ಎಲ್ಲ ವಿರೋಧ ಪಕ್ಷಗಳ ಸಹಕಾರ ಕೋರಿದ್ದೇವೆ ಎಂದು ಹೇಳಿದರು.

ನಾಳೆ ಆರ್ಥಿಕ ಸಮೀಕ್ಷೆ ಮಂಡನೆ;ಬಜೆಟ್ ಗೂ ಇದಕ್ಕೂ ಏನ್ ಸಂಬಂಧ?

ಜ.31ರಿಂದ ಏ.6ರವರೆಗೆ ಬಜೆಟ್‌ ಅಧಿವೇಶನ ಎರಡು ಕಂತುಗಳಲ್ಲಿ ನಡೆಯಲಿದೆ. ಫೆ.14ರ ನಂತರ ಬಜೆಟ್‌ ದಾಖಲೆಗಳನ್ನು ಪರಿಶೀಲಿಸಲು ಒಂದು ತಿಂಗಳ ಕಾಲ ಅಧಿವೇಶನಕ್ಕೆ ವಿರಾಮವಿರಲಿದೆ. ಬಜೆಟ್‌ ಅಧಿವೇಶನದಲ್ಲಿ ಒಟ್ಟಾರೆ 27 ದಿನಗಳ ಕಲಾಪ ನಿಗದಿಯಾಗಿದೆ.

click me!