
ರೋಹ್ಟಕ್: ಮದುವೆ ಸಮಾರಂಭವೊಂದರಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಪುರುಷರ ಗುಂಪನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆಗೊಳಗಾಗಿದ್ದ ದುಷ್ಕರ್ಮಿಗಳ ಗುಂಪಿನಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್ ಮತ್ತು ಪ್ಯಾರಾ-ಅಥ್ಲೀಟ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹುಮಾಯೂನ್‌ಪುರ ಗ್ರಾಮದ ನಿವಾಸಿ 26 ವರ್ಷದ ರೋಹಿತ್ ಧಂಖರ್ ಕೊಲೆಯಾದ ಯುವ ಪ್ರತಿಭೆ.
ಹರಿಯಾಣದ ರೋಹ್ಟಕ್ ಜಿಲ್ಲೆಯವರಾದ ಇವರು ಶುಕ್ರವಾರ ಭಿವಾನಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತನ್ನ ಸ್ನೇಹಿತ ಜತಿನ್ ಜೊತೆ ಹೋಗಿದ್ದರು. ಜತಿನ್ ಅವರ ಸಂಬಂಧಿಕರ ಮದುವೆ ಇದಾಗಿದ್ದು, ಉಡುಗೊರೆ ನೀಡಿ ಆಶೀರ್ವಾದ ಮಾಡಲು ಹೋಗಿದ್ದರು. ಈ ಮದುವೆ ಸಮಾರಂಭಕ್ಕೆ ಟಿಗದಾನ ಗ್ರಾಮದಿಂದ ತಡರಾತ್ರಿ ದಿಬ್ಬಣ ಬಂದಿತ್ತು. ಆ ದಿಬ್ಬಣದ ಗುಂಪಿನಲ್ಲಿದ್ದ ಕೆಲವು ಪುರುಷರು ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದ್ದು, ಇದನ್ನು ನೋಡಿದ ರೋಹಿತ್ ಆ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದೆ. ನಂತರ ಕಿರುಕುಳ ನೀಡಿದವರು ಅಲ್ಲಿಂದ ಹೊರಟು ಹೋಗಿದ್ದರು. ಆದರೆ ನಂತರ ಅವರು ಪ್ರತೀಕಾರ ತೀರಿಸಲು ಮುಂದಾಗಿದ್ದು, ರೋಹಿತ್ ಮೇಲೆ ಹಲ್ಲೆಗೆ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ: 100 ರೂಪಾಯಿ ಕೇಳಿದ್ರೆ ಗಂಡನೂ ಕೊಡಲ್ಲ ಹೀಗಿರುವಾಗ ನೀವು ಸಿಎಂಗೆ ನಿಷ್ಠರಾಗಿರಬೇಕು: ಸಚಿವನ ವಿವಾದಾತ್ಮಕ ಹೇಳಿಕೆ
ಇತ್ತ ಇದರ ಅರಿವಿಲ್ಲದ ರೋಹಿತ್ ಮತ್ತು ಜತಿನ್ ಸಮಾರಂಭದ ನಂತರ ಮನೆಗೆ ಮರಳಲು ತಮ್ಮ ವಾಹನದಲ್ಲಿ ಹೊರಟಿದ್ದಾರೆ. ಆದರೆ ರೈಲ್ವೆ ಕ್ರಾಸಿಂಗ್‌ನಲ್ಲಿ ಗೇಟ್ ಮುಚ್ಚಿದ್ದರಿಂದ ಅವರ ಕಾರು ನಿಲ್ಲಬೇಕಾಯಿತು. ಇದೇ ಸಮಯವನ್ನು ಬಳಸಿಕೊಂಡ ದುಷ್ಕರ್ಮಿಗಳ ಗುಂಪು ದೊಣ್ಣೆ, ರಾಡ್ ಮತ್ತು ಇತರ ಆಯುಧಗಳಿಂದ ಶಸ್ತ್ರಸಜ್ಜಿತವಾಗಿ ಅಲ್ಲಿಗೆ ಬಂದಿದ್ದಾರೆ. ಸುಮಾರು 20 ಜನರ ಗುಂಪು ಇವರಿಬ್ಬರನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಘಟನೆಯಲ್ಲಿ ಜತಿನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ದುಷ್ಕರ್ಮಿಗಳು ರೋಹಿತ್ ಅವರನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯಿಂದಾಗಿ ಅವರ ದೇಹ ಪೂರ್ತಿ ಗಾಯಗಳಾಗಿದ್ದವು. ಗಗಾಯದ ಗುರುತುಗಳಿಲ್ಲದ ದೇಹದ ಒಂದು ಭಾಗವೂ ಇರಲಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ದುಃಖಿಸಿದ್ದಾರೆ. ದಾಳಿಕೋರರು ಓಡಿಹೋದ ನಂತರ, ಜತಿನ್ ಮರಳಿ ಬಂದು ರೋಹಿತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಅವರ ಬದುಕುಳಿಸಲು ವೈದ್ಯರ ರಾತ್ರಿಯಿಡೀ ಪ್ರಯತ್ನದ ಹೊರತಾಗಿಯೂ, ರೋಹಿತ್ ಅವರು ಶನಿವಾರ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕಸ್ಟಡಿಯಲ್ಲಿದ್ದ ಮಹಿಳೆಗೆ ಡಿಎಸ್‌ಪಿಯಿಂದಲೇ ಲೈಂಗಿಕ ಕಿರುಕುಳ :ಸಹೋದ್ಯೋಗಿ ಅಧಿಕಾರಿಯ ಸಾವಿನ ನಂತರ ಪ್ರಕರಣ ಬೆಳಕಿಗೆ
ಘಟನೆಯ ಬಗ್ಗೆ ಮಾಹಿತಿ ಪಡೆದ ಭಿವಾನಿ ಪೊಲೀಸರು ಪಿಜಿಐಎಂಎಸ್‌ಗೆ ತೆರಳಿದ್ದು, ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ರೋಹಿತ್ ಅವರ ಸೋದರ ಮಾವ ರವಿ ಖಾಸ್ಸಾ ಮತ್ತು ಚಿಕ್ಕಪ್ಪ ಸತೀಶ್ ಧನಖರ್, ಹಲ್ಲೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಇದೊಂದು ಯೋಜಿತ ಕೊಲೆ. ಅವರು ಮಹಿಳೆಯರ ಘನತೆಯ ಪರವಾಗಿ ನಿಂತು ತಮ್ಮ ಜೀವವನ್ನೇ ಬಲಿಕೊಟ್ಟರು ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.
ಹುಮಾಯೂನ್‌ಪುರ ಗ್ರಾಮದ ನಿವಾಸಿ ರೋಹಿತ್ ಧಂಖರ್ ಅವರು ರೋಹ್ಟಕ್‌ನ ಜಿಮ್ಖಾನಾ ಕ್ಲಬ್‌ನಲ್ಲಿ ಸದಸ್ಯರಿಗೆ ತರಬೇತಿ ನೀಡುವಂತಹ ವೃತ್ತಿಪರ ಬಾಡಿಬಿಲ್ಡರ್ ಆಗಿದ್ದರು. 2018 ರಲ್ಲಿ, ಅವರು ಭಾರತದ ಪ್ಯಾರಾ ಒಲಿಂಪಿಕ್ ಸಮಿತಿಯು ಆಯೋಜಿಸಿದ್ದ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಬಲಗಾಲಿನಲ್ಲಿ ಅಂಗವೈಕಲ್ಯವನ್ನು ಹೊಂದಿರುವ ರೋಹಿತ್ 2018 ರಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಅಂತರರಾಷ್ಟ್ರೀಯ ಪದಕ ವಿಜೇತರಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಗಿನ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರನ್ನು ಸನ್ಮಾನಿಸಿದ್ದರು. ಆದರೆ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ನಡೆಸಿದ ಅಮಾನುಷ ಕೃತ್ಯಕ್ಕೆ ಯುವ ಪ್ರತಿಭೆಯೊಂದು ಅರಳುವ ಮೊದಲೇ ಕಮರುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ