
ಮುಂಬೈ: ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಂತೆ ಮಹಾರಾಷ್ಟ್ರದಲ್ಲೂ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಎಂಬ ಯೋಜನೆಯಡಿ ಅಲ್ಲಿನ ಬಿಜೆಪಿ ಶಿವಸೇನಾ ಸಮ್ಮಿಶ್ರ ಸರ್ಕಾರ ರಾಜ್ಯದ ಮಹಿಳೆಯರಿಗೆ 1500 ರೂಪಾಯಿಗಳನ್ನು ನೀಡ್ತಿರೋದು ಗೊತ್ತೆ ಇದೆ. ಹೀಗಿರುವಾಗ ಅಲ್ಲಿನ ಸಚಿವ ಹಾಗೂ ಬಿಜೆಪಿ ನಾಯಕ ಹೇಳಿಕೆಯೊಂದನ್ನು ನೀಡಿದ್ದು ವಿವಾದ ಸೃಷ್ಟಿಸಿದೆ. ಹಾಗಿದ್ರೆ ಅವರು ನೀಡಿದ ಹೇಳಿಕೆ ಏನು?
ಮಹಾರಾಷ್ಟ್ರದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಮಹಾರಾಷ್ಟ್ರ ಸಚಿವ ಜಯಕುಮಾರ್ ಗೋರ್ ಅವರು, ಮಹಿಳೆಯರಿಗೆ 100 ರೂಪಾಯಿ ಕೇಳಿದ್ರೆ ಅವರ ಗಂಡಂದಿರೇ ಕೊಡುವುದಿಲ್ಲ, ಹೀಗಿರುವಾಗ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯ ಲಾಭ ಪಡೆಯುತ್ತಿರುವ ಮಹಿಳಾ ಮತದಾರರು ಮುಂಬರುವ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ನಿಷ್ಠರಾಗಿ ಉಳಿಯಬೇಕೆಂದು ಹೇಳಿದ್ದಾರೆ.
ಸೋಲಾಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಜಯಕುಮಾರ್ ಗೋರ್ ಅವರು, ಮಹಿಳೆಯರಿಗೆ ಯಾರೇ ಹಣವನ್ನು ನೀಡಿದರೂ ಸ್ವೀಕರಿಸುವಂತೆ ಸಲಹೆ ನೀಡಿದರು. ಆದರೆ ಈ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿಯಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ಮಾಸಿಕ 1,500 ರೂ.ಗಳ ಸ್ಟೈಫಂಡ್ ಜಮಾ ಆಗುವುದನ್ನು ಸದಾ ನೆನಪಿನಲ್ಲಿಡಿ ಎಂದಿದ್ದಾರೆ.
ನಿಮಗೆ ನಿಮ್ಮ ಗಂಡಂದಿರು ಕೂಡ 100 ರೂ. ಕೂಡ ಕೊಡುವುದಿಲ್ಲ. ಆದರೆ ದೇವಭಾವು (ಫಡ್ನವೀಸ್) ಲಡ್ಕಿ ಬಹಿನ್ ಯೋಜನೆಯನ್ನು ಪರಿಚಯಿಸಿದರು ಮತ್ತು ನಿಮಗೆ 1,500 ರೂ. ನೀಡಿದರು. ಅವರು ಅಧಿಕಾರದಲ್ಲಿ ಇಲ್ಲದೇ ಹೋದರೆ ಈ ಹಣವು ನಿಮ್ಮ ಖಾತೆಗಳಿಗೆ ಬರುವುದು ನಿಲ್ಲುತ್ತದೆ ಎಂದು ಅವರು ಅಲ್ಲಿ ಸೇರಿದ್ದ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದಾರೆ.
ಇದನ್ನೂ ಓದಿ: ಕಸ್ಟಡಿಯಲ್ಲಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ಡಿಎಸ್‌ಪಿ ಅಮಾನತಿಗೆ ಗೃಹ ಇಲಾಖೆ ಆದೇಶ
ಮಹಾರಾಷ್ಟ್ರದಲ್ಲಿ 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳಿಗೆ ಡಿಸೆಂಬರ್ 2 ರಂದು ಅಂದರೆ ನಾಳೆ ಚುನಾವಣೆ ನಡೆಯಲಿದೆ., ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆಯಲಿದೆ. 1.07 ಕೋಟಿಗೂ ಹೆಚ್ಚು ಮತದಾರರು ಪುರಸಭೆಗೆ 6859 ಸದಸ್ಯರನ್ನು ಮತ್ತು 288 ಪುರಸಭೆಯ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಹೀಗಾಗಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡುತ್ತಾ ಜಯಕುಮಾರ್ ಗೋರ್ ಹೀಗೆ ಹೇಳಿದ್ದಾರೆ.
1,500 ರೂ.ಗಳನ್ನು ಮರೆಯಬೇಡಿ. ಅವರಿಗೆ ನಿಷ್ಠರಾಗಿರಿ
ನೀವು ಯಾರಿಂದ ಬೇಕಾದರೂ ಹಣ ತೆಗೆದುಕೊಳ್ಳಿ ಅದು ಅಪ್ರಸ್ತುತ. ಆದರೆ ಅವರಿಗೆ ಮತ ಹಾಕಬೇಡಿ. ನೀವು ಮತ ಹಾಕುವಾಗ, ದೇವಭಾವು ನೀಡಿದ 1,500 ರೂ.ಗಳನ್ನು ಮರೆಯಬೇಡಿ. ಅವರಿಗೆ ನಿಷ್ಠರಾಗಿರಿ ಎಂದು ಗೋರ್ ಹೇಳಿದ್ದಾರೆ. ಇಂದು ರಕ್ಷಾ ಬಂಧನದ ಸಮಯದಲ್ಲೂ ಸಹೋದರರು ಸಹ ತಮ್ಮ ಸಹೋದರಿಯರಿಗೆ ಹಣವನ್ನು ಉಡುಗೊರೆಯಾಗಿ ನೀಡುವಾಗ ತಮ್ಮ ಪತ್ನಿಯರ ಅನುಮೋದನೆ ಪಡೆಯುತ್ತಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಯಮನಾದ ಮರ್ಸಿಡಿಸ್: ಬದುಕಿನ ಬಂಡಿ ಎಳೆಯಲು ಊರು ಬಿಟ್ಟು ಬಂದ 23ರ ಹರೆಯದ ಯುವಕ ಸಾವು
ತಮ್ಮ ಮಹಾಯುತಿ ಮಿತ್ರಪಕ್ಷಗಳನ್ನು ಟೀಕಿಸಿದ ಸಚಿವರು, ಆಡಳಿತ ಪಕ್ಷದ ಕೆಲವು ಪಕ್ಷಗಳು ಖಜಾನೆ ತಮ್ಮ ಬಳಿಯೇ ಇದೆ ಎಂದು ಹೇಳಿಕೊಂಡರೂ, ಅಂತಿಮ ಅನುಮೋದನೆ ಬಿಜೆಪಿಯ ಬಳಿಯೇ ಇದೆ ಎಂದು ಇದೇ ವೇಳೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ