ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಗೂಢಚಾರನನ್ನು ಬಂಧಿಸಲಾಗಿದೆ. ಆರೋಪಿ ಪಠಾಣ್ ಖಾನ್ ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದನೆಂದು ತಿಳಿದುಬಂದಿದೆ.
ಜೈಸಲ್ಮೇರ್ (ಮಾ.25): ಭಾರತೀಯ ಸೇನಾಪಡೆಯ ಫೋಟೊ ಮತ್ತು ವಿಡಿಯೋಗಳನ್ನು ಗೌಪ್ಯವಾಗಿ ತೆಗೆದು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಪಾಕಿಸ್ತಾನಿ ಗೂಡಾಚಾರನನ್ನು ಕಾರ್ಯಾಚರಣೆ ನಡೆಸಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ.
ಬಂಧಿತ ಗೂಢಚಾರ 40 ವರ್ಷದ ಪಠಾಣ್ ಖಾನ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಂದ ಭಾರತೀಯ ಸೇನಾ ಪ್ರದೇಶದ ಸೂಕ್ಷ್ಮ ಸ್ಥಳಗಳ ವಿಡಿಯೋ ಫೋಟೋಗಳನ್ನು ಗೌಪ್ಯವಾಗಿ ತೆಗೆದು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಎಂಬ ಆರೋಪ ಪಠಾಣ್ ಖಾನ್ ಮೇಲಿದೆ. ಆರೋಪಿಯ ಕುಟುಂಬಸ್ಥರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು ಭದ್ರತಾ ಪಡೆಗಳು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಜೈಸಲ್ಮೇರ್-ಪಾಕಿಸ್ತಾನ ಗಡಿ!
ಜೈಸಲ್ಮೇರ್‌ನ ಗಡಿ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಭದ್ರತಾ ಪಡೆಗಳು ಇಲ್ಲಿ ಯಾವಾಗಲೂ ತೀವ್ರ ಕಟ್ಟೆಚ್ಚರ ವಹಿಸಿವೆ. ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿ ಜೈಸಲ್ಮೇರ್ ಮತ್ತು ಬಾರ್ಮರ್‌ಗೆ ಹೊಂದಿಕೊಂಡಿರುವುದರಿಂದ, ಡ್ರೋನ್ ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಇತ್ಯಾದಿಗಳ ಅಪಾಯ ಯಾವಾಗಲೂ ಇರುತ್ತದೆ. ಈ ಕಾರಣದಿಂದಾಗಿ, ಸೇನೆ ಮತ್ತು ಬಿಎಸ್‌ಎಫ್ ಇಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತವೆ. ಇದೇ ಕಾರಣಕ್ಕೆ ಜೈಸಲ್ಮೇರ್ ಅನ್ನು ಬೇಹುಗಾರಿಕೆಯ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳು ಯಾವಾಗಲೂ ನಡೆಯುತ್ತಿವೆ.
ಈ ಹಿಂದೆ ಬಿಕಾನೇರ್‌ನಲ್ಲಿ ಒಬ್ಬ ಗೂಢಚಾರ ಪತ್ತೆಯಾಗಿದ್ದ. ಅವನು ಸ್ಥಳೀಯನಾಗಿ ರೈಲು ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದುಕೊಂಡು ಬೇಹುಗಾರಿಕೆ ನಡೆಸುತ್ತಿದ್ದಆರೋಪದ ಮೇಲೆ ಬಂಧಿಸಲಾಗಿತ್ತು. ತನಿಖಾ ಸಂಸ್ಥೆ ವಿಚಾರಣೆ ನಡೆಸಿದಾಗ, ಭವಾನಿ ಸಿಂಗ್ ಹೆಸರಿನ ಆರೋಪಿ ಮಹಾಜನ್ ರೈಲ್ವೆ ನಿಲ್ದಾಣದಲ್ಲಿ ಪಾಯಿಂಟ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಲೇ ಪಾಕಿಸ್ತಾನದ ಐಎಸ್‌ಐಗೆ ಗುಪ್ತಚರ ಮಾಹಿತಿಯನ್ನು ಒದಗಿಸುತ್ತಿದ್ದ ಎಂದು ತನಿಖೆ ಬಳಿಕ ತಿಳಿದುಬಂತು.
ಪಾಕಿಸ್ತಾನಿ ಯುವತಿಯರಿಂದ ಹನಿಟ್ರ್ಯಾಪ್:
ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನಿ ಮಹಿಳಾ ಏಜೆಂಟ್ ಜೊತೆ ಸಂಪರ್ಕ ಸಾಧಿಸಿದ್ದ ಆರೋಪಿ. ನಂತರ ಹನಿಟ್ರ್ಯಾಪ್‌ಗೆ ಬಲಿಯಾಗಿ ಹಣದ ಆಮಿಷಕ್ಕೆ ಒಳಗಾಗಿ, ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಭಾರತೀಯ ಸೇನೆಯ ಚಟುವಟಿಕೆಗಳ ಬಗ್ಗೆ ರಹಸ್ಯ ಮಾಹಿತಿಯನ್ನು ಏಜೆಂಟ್‌ಗೆ ನೀಡಲು ಪ್ರಾರಂಭಿಸಿದ್ದ. ಭದ್ರತಾ ಸಂಸ್ಥೆಗಳಿಂದ ಸಿಕ್ಕಿಬಿದ್ದ ನಂತರ, ಅವನು ಒಂದೊಂದಾಗಿ ಹಲವು ರಹಸ್ಯಗಳನ್ನು ಬಹಿರಂಗಪಡಿದ್ದ. ಇದೀಗ ಜೈಸಲ್ಮೇರ್‌ನಲ್ಲೂ ಪಾಕ್ ಬೇಹುಗಾರನ ಬಂಧಿಸಿರುವ ಭದ್ರತಾ ಪಡೆ. ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿಗಳು ಹೊರ ಬರಲಿವೆ.