
ನವದೆಹಲಿ: ಪೆಹಲ್ಗಾಂ ನರಮೇಧದ ಬಳಿಕ ಭಾರತದ ವಾಯುದಾಳಿಯ ಸಾಧ್ಯತೆಗೆ ಬೆದರಿ ಗುರುವಾರ ಕರಾಚಿ ಕರಾವಳಿಯಲ್ಲಿ ಕ್ಷಿಪಣಿ ಪ್ರಯೋಗ ನಡೆಸಿದ್ದ ನೆರೆಯ
ಪಾಕಿಸ್ತಾನ ಇದೀಗ ಕಾಶ್ಮೀರದ ಗಡಿ ಪ್ರದೇಶದಲ್ಲಿ ಭಾರತದ ಪ್ರದೇಶಗಳ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನಾ ಪಡೆಗಳು ಕೂಡಾ ಸೂಕ್ತ ತಿರುಗೇಟು ನೀಡಿದ ಬಳಿಕ ಪಾಕಿಸ್ತಾನ ತನ್ನ ದಾಳಿ ನಿಲ್ಲಿಸಿದೆ. ಶುಕ್ರವಾರ ಬೆಳಗ್ಗೆ ಪಡೆಗಳು ಅಪ್ರಚೋದಿತವಾಗಿ ಭಾರತದ ಗಡಿಯತ್ತ ಹಲವು ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಭಾರತ ದಾಳಿ ನಡೆಸಿದೆ. ಇದಾದ ಬಳಿಕ ಪಾಕ್ ವಡೆಗಳು ದಾಳಿ ನಿಲ್ಲಿಸಿದವು ಎಂದು ಸೇನಾ ಮೂಲಗಳು ತಿಳಿಸಿದೆ. 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆ, ಕಾಶ್ಮೀರ ಗಡಿಯಲ್ಲಿ ಕದನ ವಿರಾಮದ ಘೋಷಣೆ ಮೂಲಕ ಗುಂಡಿನ ದಾಳಿ ಮತ್ತು ಶೆಲ್ ದಾಳಿ ಸ್ವಗಿತಗೊಳಿಸಲು ಸಮ್ಮತಿಸಿದ್ದವು. ಅದಾದ ಬಳಿಕ ಇದೇ ಮೊದಲ ಭಾರಿಗೆ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಎಂದಿನಂತೆ ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಆರ್ಮಿ ಕಾಲೇಜ್ ಆಫ್ ನರ್ಸಿಂಗ್ ವೆಬ್ ಹ್ಯಾಕ್ ಮಾಡಿದ ಪಾಕಿಸ್ತಾನ ಹ್ಯಾಕರ್‌ಗಳು
ಪಹಲ್ಲಾಂ ದುರಂತ ಬೆನ್ನಲ್ಲೇ ಪಾಕಿಸ್ತಾನ ಮೂಲದ ಹ್ಯಾಕರ್‌ಗಳು ಆರ್ಮಿ ಕಾಲೇಜ್ ಆಫ್ ನರ್ಸಿಂಗ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ, ರುವ ಘಟನೆ ನಡೆದಿದೆ. ಗ್ರಾಫಿಕ್ ದೃಶ್ಯಗಳನ್ನು ವಿರೂಪಗೊಳಿಸಿ ಟೀಮ್ ಇನ್ನೇನ್ ಪಿಕೆ ಗುಂಪು ವೆಬ್ ಸೈಟ್ ಹ್ಯಾಕ್ ಮಾಡಿದ್ದು, ನರ್ಸಿಂಗ್ ಕಾಲೇಜಿನ ಅಧಿಕೃತ ಜಾಲತಾಣ ಪುಟಕ್ಕೆ ಭೇಟಿ ನೀಡಿದಾಗ 'ನೀವು ಹ್ಯಾಕ್ ಆಗಿದ್ದೀರಿ, ಟೀಮ್ ಇನ್ನೇನ್ ಪಿಕೆ' ಎನ್ನುವ ಸಂದೇಶ ಕಾಣಿಸಿದೆ. ಅದರ ಜೊತೆಗೆ ಕೆಳಗಡೆ ಏ.22ರಂದು ಪಹ ಲ್ಯಾಂನಲ್ಲಿ ನಡೆದ ದಾಳಿಯ ಬಗೆಗಿನ ಆಸ್ಪಷ್ಟ ಚಿತ್ರಗಳು ಕೂಡ ಕಾಣಿಸಿವೆ. ಆರ್ಮಿ ಕಾಲೇಜ್ ಆಫ್ ನರ್ಸಿಂಗ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತದ ಸೇನಾ ವ್ಯಾಪ್ತಿಗೆ ಬರುವುದಿಲ್ಲ.
ಪಾಕ್ ಮಂತ್ರಿ ತಪ್ಪೊಪ್ಪಿಗೆ
ಕಳೆದ ಮೂರು ದಶಕಗಳಿಂದ ಪಾಶ್ಚಿಮಾತ್ಯ ದೇಶಗಳು, ಬ್ರಿಟನ್ ಮತ್ತು ಅಮೆರಿಕದ ಮಾತು ಕೇಳಿ ಕೊಳಕು ಕೆಲಸವನ್ನು ಮಾಡಿದ್ದೇವೆ ಎನ್ನುವ ಮೂಲಕ ಪಾಕಿಸ್ತಾನ ಸರ್ಕಾರ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಸಂದರ್ಶನವೊಂದರಲ್ಲಿ ಪಾಕ್ ರಕ್ಷಣಾ ಸಚಿವ ಖ್ವಾಜಾ ಎಂ. ಆಸೀಫ್ ಒಪ್ಪಿಕೊಂಡಿದ್ದಾರೆ.
ನಾವು ಪ್ರತೀಕಾರ ತೆಗೆದುಕೊಳ್ಳಬೇಕು
ಪಹಲ್ಗಾಂನಲ್ಲಿ ಜನರ ಧರ್ಮದ ಬಗ್ಗೆ ಕೇಳಿದ ಬಳಿಕ ಅವರನ್ನು ಸಾಯಿಸಿದ್ದಾರೆ. ಹಿಂದೂಗಳು ಎಂದಿಗೂ ಅಂತಹ ಕೃತ್ಯ ಮಾಡುವುದಿಲ್ಲ. ಇದು ಮತ್ತು ಅಧರ್ಮದ ವಿರುದ್ಧದ ಯುದ್ಧ. ಇದಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಭದ್ರತೆ ಪರಿಶೀಲಿಸಿದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪಹಲ್ಗಾಂ ಭಯೋತ್ಪಾದಕ ದಾಳಿ ಬೆನ್ನಲ್ಲೇ, ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಕಾಶ್ಮೀರಕ್ಕೆ ಭೇಟಿ ಭದ್ರತೆ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ‘ಪಹಲ್ಗಾಂ ದಾಳಿ ಹಿಂದಿರುವ ಪ್ರತಿಯೊಬ್ಬ ಉಗ್ರನನ್ನು ಬೇಟೆಯಾಡಿ, ಆ ಹೇಯ ಕೃತ್ಯಕ್ಕೆ ಭಾರೀ ಬೆಲೆ ತೆರುವಂತೆ ಮಾಡಬೇಕು. ಅಂತೆಯೇ, ಉಗ್ರರು ನಿರ್ಮಿಸಿಕೊಂಡಿರುವ ಮೂಲಸೌಕರ್ಯಗಳನ್ನು ಹೊಸಕಿಹಾಕಬೇಕು’ ಎಂದು ಅಬ್ಬರಿಸಿದ್ದಾರೆ.
‘ಭಾರತೀಯ ಸೇನೆ, ಪೊಲೀಸರು ಮತ್ತು ಸಿಎಪಿಎಫ್(ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ಸಿಬ್ಬಂದಿಯ ಧೈರ್ಯದ ಮೇಲೆ ಜನರಿಗೆ ಪೂರ್ಣ ವಿಶ್ವಾಸವಿದೆ. ಎಲ್ಲಾ ಪಡೆಗಳು ಒಟ್ಟಾಗಿ ದಾಳಿಕೊರರು ಮತ್ತು ಸಂಚುಕೋರರನ್ನು ಗುರುತಿಸಿ ಹೊಡೆದುಹಾಕಬೇಕು’ ಎಂದು ಸೇನೆಯ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಂ ರಕ್ಕಸರಿಗಾಗಿ ಕಾರ್ಯಾಚರಣೆ: ಉಗ್ರಗಾಮಿಗಳ ಬೇಟೆ ಶುರು
ಲಷ್ಕರ್ ಉಗ್ರ ಹಫೀಜ್ ಕೈವಾಡ
ಭಾರತ ಮತ್ತೊಮ್ಮೆ ಪಾಕಿಸ್ತಾನ ಹಾಗೂ ಅದರ ಉಗ್ರರ ವಿರುದ್ಧ ಸಿಡಿದೇಳುವಂತೆ ಮಾಡಿದ ಪಹಲ್ಗಾಂ ದಾಳಿಯ ಹಿಂದೆ, 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಆಗಿರುವ ಲಷ್ಕರ್ ಎ ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ ಸಂಬಂಧ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಪಹಲ್ಗಾಂನಲ್ಲಿ ದಾಳಿ ನಡೆದ ಕೆಲ ಹೊತ್ತಿನಲ್ಲೇ, ಲಷ್ಕರ್‌ನ ಉಪ ಸಂಘಟನೆಯಾದ ದ ರೆಸಿಸ್ಟನ್ಸ್ ಫ್ರಂಟ್ ರಾಕ್ಷಸೀ ಕೃತ್ಯದ ಹೊಣೆ ಹೊತ್ತುಕೊಂಡಿತ್ತು. ಅದರ ಬೆನ್ನುಹತ್ತಿದಾಗ, ಹಫೀಜ್ ಸಯೀದ್ ಮತ್ತು ಆತನ ಬಂಟ ಸೈಫುಲ್ಲಾನ ಪಾತ್ರ ಕಂಡುಬಂದಿದೆ. ಜೊತೆಗೆ ಈ ಹಿಂದೆ ಕಾಶ್ಮೀರದಲ್ಲಿ ನಡೆಸಿದ ಹಲವು ಉಗ್ರ ದಾಳಿಯ ಮಾದರಿಯಲ್ಲೇ ಈ ದಾಳಿಯನ್ನೂ ಕೂಡಾ ಸಂಘಟಿಸಲಾಗಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕುಮ್ಮಕ್ಕಿನಿಂದ ನಡೆಸಲಾದ ಕೃತ್ಯಕ್ಕೆ ವಿದೇಶಿ ಉಗ್ರರನ್ನು ಬಳಸಿಕೊಳ್ಳಲಾಗಿದೆ. ಅವರಿಗೆ ಸ್ಥಳೀಯ ಉಗ್ರ ಬೆಂಬಲಿಗರ ನೆರವು ಪಡೆದುಕೊಳ್ಳಲಾಗಿದೆ. ಈ ಮಾದರಿ ಹಫೀಜ್‌ನ ಉಗ್ರದಾಳಿಗಳಿಗೆ ಹೋಲಿಕೆಯಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಇದನ್ನೂ ಓದಿ: ಪಾಕ್ ಪ್ರಜೆಗಳ ಹುಡುಕಿ ಹೊರದಬ್ಬಿ: ಸಿಎಂಗಳಿಗೆ ಅಮಿತ್ ಶಾ ಫೋನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ