
ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿ ಹಿಂದಿನ ಉದ್ದೇಶ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವುದೇ ಆಗಿದೆ. ಹೀಗಾಗಿ ಭಯೋತ್ಪಾದನೆಯನ್ನು ಮಣಿಸಬೇಕಿದ್ದರೆ ಭಾರತ ಒಗ್ಗಟ್ಟಾಗಬೇಕಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇದೊಂದು ಘೋರ ದುರಂತ, ನಾನು ಇಲ್ಲಿ ಏನಾಗುತ್ತಿದೆ, ಯಾವ ರೀತಿಯಲ್ಲಿ ನೆರವು ನೀಡಬಹುದು ಎಂದು ಗಮನಿಸಲು ಕಾಶ್ಮೀರಕ್ಕೆ ಬಂದಿದ್ದೇನೆ. ಜಮ್ಮು ಮತ್ತು ಕಾಶ್ಮೀರಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. ಅವರೆಲ್ಲ ದೇಶಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
ಪಹಲ್ಗಾಮ್ ದಾಳಿ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀನಗರದ ಬದಾಮಿಬಾಗ್ ಕಂಟೋನ್ಮೆಂಟ್‌ನಲ್ಲಿರುವ ಸೇನೆಯ 92ನೇ ಬೇಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಸರ್ಕಾರದ ಜೊತೆ ನಿಲ್ಲುತ್ತೇವೆ
ನಾನು ಒಬ್ಬ ಗಾಯಾಳುವನ್ನು ಭೇಟಿಯಾದೆ, ಉಳಿದವರು ವಾಪಸಾಗಿರುವ ಹಿನ್ನೆಲೆಯಲ್ಲಿ ಅವರ ಜತೆ ಮಾತುಕತೆ ಸಾಧ್ಯವಾಗಲಿಲ್ಲ. ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡವರ ಜತೆಗೆ ನನ್ನ ಅಭಿಮಾನ ಮತ್ತು ಪ್ರೀತಿ ಸದಾ ಇರಲಿದೆ. ಇಂದು ಇಡೀ ದೇಶ ಒಂದಾಗಿ ನಿಂತಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಇದೇ ವೇಳೆ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳು ಒಂದಾಗಿ ಪಹಲ್ಗಾಮ್ ಘಟನೆಯನ್ನು ಖಂಡಿಸಿವೆ. ಜತೆಗೆ ಸರ್ಕಾರದ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಈ ನಡುವೆ, ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಘಟನೆಯ ಕುರಿತು ವಿವರಣೆ ನೀಡಿದರು. ಈ ವೇಳೆ ನಾನು ಮತ್ತು ನಮ್ಮ ಪಕ್ಷ ನಿಮ್ಮ ಜತೆಗಿರಲಿದೆ ಎಂಬ ಭರವಸೆಯನ್ನು ಅವರಿಗೆ ನೀಡಿದ್ದಾಗಿ ರಾಹುಲ್ ತಿಳಿಸಿದರು.
ಘಟನೆ ಬಳಿಕ ದೇಶದ ಕೆಲವೆಡೆ ಕಾಶ್ಮೀರಿಗರಿಗೆ ಕಿರುಕುಳ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಒಂದಾಗಿ ನಿಂತು ಇಂಥ ಕೃತ್ಯದ ವಿರುದ್ಧ ಹೋರಾಡಬೇಕಿದೆ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶ ಮಾಡಬೇಕಿದೆ ಎಂದು ಹೇಳಿದರುಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು ವ್ಯಾಪಾರಿಗಳು, ವಿದ್ಯಾರ್ಥಿ ನಾಯಕರು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಭೇಟಿಯಾಗಿ ಸಮಸ್ಯೆ ಆಲಿಸಿದರು.
ಇದನ್ನೂ ಓದಿ: 20000 ಯೋಧರ ದಾಳಿಗೆ 1000 ನಕ್ಸಲರು ತತ್ತರ: ಮಾತುಕತೆಗೆ ಪ್ರಸ್ತಾಪ
ಪ್ರವಾಸಿಗರಿಲ್ಲದೇ ಕಾಶ್ಮೀರದ ತಾಣಗಳು ಬಿಕೋ
ಭಾರತದ ಮುಕುಟದಂತಿರುವ ಪ್ರಾಕೃತಿಕ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಣಗಳು ಕಳೆದ 2 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಏ.22ರಂದು ಕೆಲವೇ ನಿಮಿಷಗಳಲ್ಲಿ ನಡೆದ ಭೀಕರ ಉಗ್ರದಾಳಿಯಿಂದಾಗಿ, ಕೇವಲ ಎರಡು ದಿನಗಳಲ್ಲಿ ಕಾಶ್ಮೀರದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ, ಮಿನಿ ಸ್ವಿಜರ್ಲೆಂಡ್ ಎಂದೇ ಖ್ಯಾತವಾಗಿದ್ದ ಪಹಲ್ಗಾಂ ಕಣಿವೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ದಾಲ್ ಸರೋವರದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.
ಪ್ರವಾಸಿಗರನ್ನು ಹೊತ್ತೊಯ್ಯಬೇಕಿದ್ದ ವಿಮಾನಗಳು ಖಾಲಿಯಾಗಿ ಹಾರುತ್ತಿದ್ದು, ಮರಳುವಾಗ ಜೀವಭಯದಿಂದ ಕಾಶ್ಮೀರ ತೊರೆಯುತ್ತಿರುವ ಕುಟುಂಬಗಳನ್ನು ಹೊತ್ತುಬರುತ್ತಿವೆ. ಅನುದಿನ ಅಜಾನ್ ಮೊಳಗುತ್ತಿದ್ದ ಮಸೀದಿಗಳ ಧ್ವನಿವರ್ದಕಗಳಲ್ಲಿ ಬಂದ್‌ಗೆ ಕರೆ ಕೊಡುತ್ತಿವೆ.
ಪ್ರವಾಸಿಗರನ್ನೇ ನಂಬಿಕೊಂಡಿದ್ದ ಕಾಶ್ಮೀರದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪದ್ಮಶ್ರೀ ವಿಜೇತ ಕುಶಲಕರ್ಮಿ ಗುಲಾಂ ರಸೂಲ್ ಖಾನ್, ‘ಇಲ್ಲಿನ ವಾತಾವರಣವನ್ನು ಕೆಡಿಸುತ್ತಿರುವವರನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಬೇಕು. ಇಲ್ಲಿನ ಜನ ಪ್ರವಾಸೋದ್ಯಮದ ಮೇಲೆಯೇ ಅವಲಂಬಿತರಾಗಿದ್ದಾರೆ’ ಎಂದು ದುಃಖದಿಂದ ನುಡಿದಿದ್ದಾರೆ.
ಇದನ್ನೂ ಓದಿ: ಪಹಲ್ಗಾಂ ರಕ್ಕಸರಿಗಾಗಿ ಕಾರ್ಯಾಚರಣೆ: ಉಗ್ರಗಾಮಿಗಳ ಬೇಟೆ ಶುರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ