
ಪುಣೆ: ನಲ್ವತ್ತೆಂಟು ಗಂಟೆಗಳಲ್ಲಿ ಭಾರತದ ಹೆಡೆಮುರಿಕಟ್ಟಬೇಕೆಂದು ಯೋಜಿಸಿ ಭಾರತ ದಾಳಿ ನಡೆಸಿತ್ತು. ಆದರೆ ಭಾರತದ ದಾಳಿಗೆ ಬೆದರಿ ಕೇವಲ 8 ಗಂಟೆಗಳಲ್ಲಿ ಕದನ ವಿರಾಮದ ಪ್ರಸ್ತಾಪ ಮುಂದಿಟ್ಟಿತು ಎಂದು ಸೇನಾಪಡೆಗಳ ಮುಖ್ಯಸ್ಥ ಜ.ಅನಿಲ್ ಚೌಹಾಣ್ ಹೇಳಿದ್ದಾರೆ. ಮಂಗಳವಾರ ಇಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾಕ್ ದಾಳಿಯಿಂದಾದ ನಷ್ಟಗಳ ಕುರಿತು ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ಮೇ 10ರ ಮುಂಜಾನೆ 1 ಗಂಟೆಗೆ ಭಾರತವನ್ನು 48 ಗಂಟೆಗಳಲ್ಲಿ ಮೊಣಕಾಲೂರುವಂತೆ ಮಾಡುವ ಉದ್ದೇಶ ಇಟ್ಟುಕೊಂಡು ಪಾಕಿಸ್ತಾನವು ತನ್ನ ದಾಳಿ ಆರಂಭಿಸಿತು. ಆದರೆ, ನಾವು 8 ಗಂಟೆಗೇ ಅವರು ಗಂಟುಮೂಟೆ ಕಟ್ಟುವಂತೆ ಮಾಡಿದೆವು. ಬಳಿಕ ನಿಮ್ಮೊಂದಿಗೆ ಮಾತನಾಡಬೇಕಿದೆ ಎಂದು ಕದನ ವಿರಾಮ ಪ್ರಸ್ತಾಪ ಮುಂದಿಟ್ಟರು. ಅವರು ಮುಂದಿಟ್ಟ ಕದನವಿರಾಮದ ಪ್ರಸ್ತಾಪವನ್ನು ನಾವು ಒಪ್ಪಿದೆವು. ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರಿದರೆ ಭಾರೀ ಹಾನಿಯಾಗುವ ಆತಂಕದಿಂದ ಅವರು ಇಂಥ ಪ್ರಸ್ತಾಪ ಇಟ್ಟಿದ್ದರು ಎಂದು ಜ.ಚೌಹಾಣ್ ಹೇಳಿದರು.
ಯುದ್ಧನಷ್ಟದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಯುದ್ಧದ ಸಂದರ್ಭದಲ್ಲಿನ ತಾತ್ಕಾಲಿಕ ನಷ್ಟಗಳು ವೃತ್ತಿಪರ ಸೇನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂಥ ತಾತ್ಕಾಲಿಕ ಹಿನ್ನಡೆಗಳಿಗಿಂತ ಒಟ್ಟಾರೆ ಫಲಿತಾಂಶವೇ ಸೇನೆಗೆ ಮುಖ್ಯವಾಗುತ್ತದೆ. ನಷ್ಟ ಮತ್ತು ಅಂಕಿ-ಸಂಖ್ಯೆಗಳ ಕುರಿತು ಮಾತನಾಡಲು ನಾನು ಸರಿಯಾದ ವ್ಯಕ್ತಿಯಲ್ಲ ಎಂದರು.
ಪಾಕ್ ವಿರುದ್ಧ ಭಾರತಕ್ಕೆ ‘ಇನ್ನಿಂಗ್ಸ್ ಜಯ’: ಚೌಹಾಣ್
ಭಾರತೀಯ ಪಡೆಗಳು ನಡೆಸಿದ ಆಪರೇಷನ್ ಸಿಂದೂರದ ವಿಜಯವನ್ನು ಸಿಡಿಎಸ್ ಅನಿಲ್ ಚವಾಣ್ ಅವರು ಕ್ರಿಕೆಟ್ ವಿಜಯದ ರೀತಿ ಹೋಲಿಸಿದ್ದಾರೆ. ಸಿಂದೂರದ ವಿಜಯವು ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿದೆ ಎಂದು ಗುಣಗಾನ ಮಾಡಿದ್ದಾರೆ.ಪುಣೆಯಲ್ಲಿ ಮಾತನಾಡಿದ ಅವರು, ‘ಆಪರೇಷನ್ ಸಿಂದೂರ ಇನ್ನು ನಿಂತಿಲ್ಲ. ಇದು ಕೇವಲ ಕದನವಿರಾಮವಷ್ಟೇ. ಬಳಿಕ ನಾನೇ ವಿವರವಾದ ಉತ್ತರ ನೀಡುತ್ತೇನೆ. ಇದೇ ವೇಳೆ ಕ್ರಿಕೆಟ್‌ನ ಟೆಸ್ಟ್ ಪಂದ್ಯಕ್ಕೆ ಹೋಲಿಸಿದರೆ ಇನ್ನಿಂಗ್ಸ್‌ನಿಂದ ಗೆದ್ದಾಗ, ಅದರಲ್ಲಿ ಎಷ್ಟು ವಿಕೆಟ್, ಬಾಲ್ಸ್ ಉಳಿಕೆ ಇತ್ಯಾದಿ ಪ್ರಶ್ನೆಗಳು ಬರುವುದಿಲ್ಲ ಎಂದು ಹೇಳಿದರು.
ಇಂದು ಮೋದಿ ಮಂತ್ರಿ ಪರಿಷತ್ ಸಭೆ
ನರೇಂದ್ರ ಮೋದಿ ಸರ್ಕಾರದ ಮಂತ್ರಿ ಪರಿಷತ್ ಸಭೆ ಬುಧವಾರ ಆಯೋಜನೆಗೊಂಡಿದೆ. ಪಾಕಿಸ್ತಾನದ ಮೇಲಿನದ ಭಾರತದ ಆಪರೇಷನ್ ಸಿಂದೂರದ ಬಳಿಕ ಮೊದಲ ಸಭೆ ಇದಾಗಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಂಪುಟ ಸಹದ್ಯೋಗಿಗಳಿಗೆ ಆಪರೇಷನ್ ಸಿಂದೂರ ಕುರಿತು ಸಭೆಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ. ಇದೇ ವೇಳೆ, ಮೋದಿ-3 ಸರ್ಕಾರಕ್ಕೆ ಜೂ.9ರಂದು 1 ವರ್ಷವಾಗಲಿದ್ದು, ಈ ವೇಳೆ ವರ್ಷಾಚರಣೆ ಬಗ್ಗೆ ಕಾರ್ಯತಂತ್ರ ಹೆಣೆಯುವ ಬಗ್ಗೆಯೂಚರ್ಚೆ ನಡೆಯುವ ಸಂಭವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ