
ನವದೆಹಲಿ: ಒಂದು ಕಡೆ ಭಾರತದ ದಾಳಿ ತಡೆಯುವಂತೆ ಪಾಶ್ಚಿಮಾತ್ಯ ದೇಶಗಳ ಕೈಕಾಲು ಹಿಡಿಯುತ್ತಿರುವ ಪಾಕಿಸ್ತಾನ, ಇನ್ನೊಂದು ಕಡೆ ಭಾರತಕ್ಕೆ ಮತ್ತೆ ಅಣ್ವಸ್ತ್ರಗಳ ಧಮ್ಕಿ ಹಾಕಿದೆ. ತನ್ನ ಮೇಲೇನಾದರೂ ದಾಳಿ ನಡೆಸಿದರೆ ಅಥವಾ ನೀರಿನ ಹರಿವು ತಡೆದರೆ ಅಣ್ವಸ್ತ್ರಗಳೂ ಸೇರಿ ಎಲ್ಲಾ ರೀತಿಯ ಅಸ್ತ್ರಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.
ರಷ್ಯಾದ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಸ್ಕೋದಲ್ಲಿರುವ ಪಾಕಿಸ್ತಾನದ ಹಿರಿಯ ರಾಯಭಾರಿ ಮುಮ್ಮದ್ ಖಾಲಿದ್ ಜಮಾಲಿ, ‘ಭಾರತದ ದಾಳಿ ಕುರಿತು ನಮ್ಮ ಬಳಿ ವಿಶ್ವಾಸಾರ್ಹ ಮಾಹಿತಿ ಇದೆ. ಭಾರತವು ಪಾಕಿಸ್ತಾನದ ನಿರ್ದಿಷ್ಟ ಪ್ರದೇಶಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸುವುದು ಸ್ಪಷ್ಟ. ಭಾರತದಿಂದ ಸೋರಿಕೆಯಾದ ಮಾಹಿತಿಗಳಿಂದ ಇದು ಸ್ಪಷ್ಟವಾಗಿದೆ. ಭಾರತವೇನಾದರೂ ದಾಳಿ ನಡೆಸಿದರೆ ನಾವು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಎರಡೂ ಅಸ್ತ್ರಗಳನ್ನು ಬಳಸಿಕೊಂಡು ಪ್ರತಿ ದಾಳಿ ನಡೆಸುತ್ತೇವೆ’ ಎಂದರು.
ಪಾಕಿಸ್ತಾನದ ಉನ್ನತಾಧಿಕಾರಿಗಳು ಈ ರೀತಿ ಅಣ್ವಸ್ತ್ರದ ಬೆದರಿಕೆ ಹಾಕುವುದು ಇದೇ ಮೊದಲಲ್ಲ. ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಪ್ರತೀಕಾರದ ದಾಳಿ ನಡೆಸಬಹುದು ಎಂಬ ಭೀತಿಯಿಂದ ಪಾಕಿಸ್ತಾನದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಲವು ಬಾರಿ ಈಗಾಗಲೇ ಅಣ್ವಸ್ತ್ರ ದಾಳಿಯ ಬೆದರಿಕೆಯೊಡ್ಡಿದ್ದಾರೆ. ಈ ಮೂಲಕ ಭಾರತವನ್ನು ಕೆರಳಿಸುವ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಭಾರತದಲ್ಲಿ ಇಮ್ರಾನ್ ಖಾನ್, ಭುಟ್ಟೋ ಎಕ್ಸ್ ಖಾತೆಗೆ ನಿರ್ಬಂಧ
ಪಹಲ್ಗಾಂ ನರಮೇಧದ ಬಳಿಕ ಭಾರತದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಸೇರಿದಂತೆ ಹಲವು ನಾಯಕರ ಸಾಮಾಜಿಕ ಜಾಲತಾಣ ಖಾತೆಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಾಲ್ ಭುಟ್ಟೋ ಎಕ್ಸ್ ಖಾತೆಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ನಡುವೆ ಭಾರತ ವಿರೋಧಿ ಮತ್ತು ದುರುದ್ದೇಶಪೂರಿತ ವಿಷಯವನ್ನು ಈ ಇಬ್ಬರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ಈಗಾಗಲೇ ಪಾಕಿಸ್ತಾನ ಸರ್ಕಾರದ ಅಧಿಕೃತ ಖಾತೆ, ರಕ್ಷಣ ಸಚಿವ ಖ್ವಾಜಾ ಆಸಿಫ್ ಸೇರಿದಂತೆ ಹಲವು ಪಾಕಿಸ್ತಾನಿಯರ ಅಧಿಕೃತ ಎಕ್ಸ್ ಖಾತೆಯನ್ನು ನಿರ್ಬಂಧಿಸಿದೆ.
ಪಂಜಾಬ್ ಕಂಟೋನ್ಮೆಂಟಲ್ಲಿ ಬ್ಯ್ಲಾಕೌಟ್ ಡ್ರಿಲ್
ಯುದ್ಧದ ಸ್ಥಿತಿಯಲ್ಲಿನ ಪರಿಸ್ಥಿತಿಯನ್ನು ಎದುರಿಸುವ ತಾಲೀಮಿನ ಭಾಗವಾಗಿ, ಪಂಜಾಬ್‌ನ ಫಿರೋಜ್‌ಪುರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಅರ್ಧ ಗಂಟೆ ರಾತ್ರಿ 9 ರಿಂದ 9.30 ರವರೆಗೆ ವಿದ್ಯುತ್ ಕಡಿತ ಮಾಡಿ ‘ಬ್ಲ್ಯಾಕೌಟ್ ಡ್ರಿಲ್’ ನೆಡೆಸಲಾಗಿದೆ. ಯುದ್ಧದ ಸಂದರ್ಭದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಭದ್ರತಾ ದೃಷ್ಟಿಯಿಂದ ವಿದ್ಯುತ್ ತೆಗೆಯಲಾಗುತ್ತದೆ. ಆದ್ದರಿಂದ ಪೂರ್ವಾಭ್ಯಾಸ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಹಡಗುಗಳಿಗೆ ನಿರ್ಬಂಧ
ಭಾರತವು ಪಾಕಿಸ್ತಾನದ ಹಡಗುಗಳಿಗೆ ತನ್ನ ಬಂದರು ಪ್ರವೇಶಿಸಲು ನಿರ್ಬಂಧ ಹೇರಿದ ಬೆನ್ನಲ್ಲೇ ಇದೀಗ ಪಾಕ್ ಕೂಡ ಪ್ರತೀಕಾರದ ಕ್ರಮಕ್ಕೆ ಮುಂದಾಗಿದೆ. ಭಾರತದ ಹಡಗುಗಳಿಗೆ ತನ್ನ ಬಂದರು ಪ್ರವೇಶ ನಿಷೇಧಿಸಿ ಪಾಕಿಸ್ತಾನ ಆದೇಶ ಹೊರಡಿಸಿದೆ. ‘ಪ್ರಸಕ್ತ ಸ್ಥಿತಿಯ ಹಿನ್ನೆಲೆಯಲ್ಲಿ ಭಾರತದ ಧ್ವಜ ಹೊಂದಿರುವ ಹಡಗುಗಳು ನಮ್ಮ ಬಂದರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅಲ್ಲದೆ, ಯಾವುದೇ ಪಾಕಿಸ್ತಾನಿ ಹಡಗುಗಳು ಭಾರತದ ಬಂದರಿನಲ್ಲಿ ಲಂಗರು ಹಾಕಕೂಡದು’ ಎಂದು ಪಾಕಿಸ್ತಾನ ಹಡಗು ಸಚಿವಾಲಯ ಹೇಳಿದೆ.
ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಶನಿವಾರವಷ್ಟೇ ಪಾಕಿಸ್ತಾನದ ವಿರುದ್ಧ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಿತ್ತು. ಪಾಕಿಸ್ತಾನದ ವಸ್ತುಗಳ ನೇರ ಮತ್ತು ಪರೋಕ್ಷ ಆಮದು, ಅಂಚೆ ಮತ್ತು ಕೊರಿಯರ್ ಸೇವೆಗೆ ನಿರ್ಬಂಧ ಹಾಗೂ ಪಾಕ್ ಹಡಗುಗಳಿಗೆ ಭಾರತದ ಬಂದರು ಪ್ರವೇಶಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ