ಆಪರೇಷನ್ ಸಿಂಧೂರ್ ಬಳಿಕ ಭಾರತಕ್ಕೆ ಬಂದ ಪಾಕ್ ಸಚಿವ, ಕುಲಭೂಷಣ್ ಜಾಧವ್ ವಿಚಾರ ಎತ್ತದಿದ್ದಕ್ಕೆ ತನ್ನ ದೇಶದಲ್ಲೇ ಟೀಕೆ!

Published : Nov 25, 2026, 05:20 PM IST
Musadik Malik India visit

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಉದ್ವಿಗ್ನವಾಗಿರುವ ನಡುವೆಯೇ ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಭೇಟಿ ನೀಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ವೇಳೆ ತಮ್ಮ ವಶದಲ್ಲಿರುವ ಕುಲಭೂಷಣ್ ಜಾಧವ್ ಬಗ್ಗೆ ಕೇಳದ್ದಕ್ಕೆ ಪಾಕ್ ಟೀಕಿಸಿದೆ.

ಇಸ್ಲಾಮಾಬಾದ್ / ನವದೆಹಲಿ: ಶಾಂಘೈ ಸಹಕಾರ ಸಂಸ್ಥೆಯ (SCO) ಮೊದಲ ನಾಗರಿಕ ಸಂವಾದ ವೇದಿಕೆಯ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಬಿಲಾವಲ್ ಭುಟ್ಟೋ ಅವರು ನೀಡಿದ್ದ ಭೇಟಿಯ ಬಳಿಕ, ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಬಂದಿರುವ ಮೊದಲ ಭೇಟಿ ಇದಾಗಿದೆ. ದೆಹಲಿಯಲ್ಲಿರುವ ಈ ಅವಧಿಯಲ್ಲಿ ಅವರು ಕೆಲವು ಐತಿಹಾಸಿಕ ತಾಣಗಳಿಗೆ ಭೇಟಿ ನೀಡುವುದರ ಜೊತೆಗೆ ಮಾಧ್ಯಮಗಳೊಂದಿಗೂ ಮಾತನಾಡಿದ್ದಾರೆ. ಸಿಂಧೂ ಜಲ ಒಪ್ಪಂದದಿಂದ ಹಿಡಿದು ಭಾರತ-ಪಾಕಿಸ್ತಾನ ಬಾಂಧವ್ಯದಲ್ಲಿನ ಉದ್ವಿಗ್ನತೆಯವರೆಗಿನ ಹಲವು ವಿಷಯಗಳ ಕುರಿತು ಅವರು ಹೇಳಿಕೆಗಳನ್ನು ನೀಡಿದ್ದಾರೆ.

ಆಪರೇಷನ್ ಸಿಂಧೂರ್ ಬೆಳವಣಿಗೆಯ ಬಳಿಕ ಪಾಕಿಸ್ತಾನದ ಸಚಿವರು ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲ ಬಾರಿಯಾಗಿದೆ. ಉಭಯ ದೇಶಗಳ ನಡುವಿನ ಹದಗೆಟ್ಟ ಸಂಬಂಧವನ್ನು ಸರಿಪಡಿಸಲು ಮಾತುಕತೆಯ ಅಗತ್ಯವಿದೆ ಎಂದು ಮುಸಾದಿಕ್ ಮಲಿಕ್ ಪ್ರತಿಪಾದಿಸಿದ್ದಾರೆ. ಆದರೆ, ಈ ಭೇಟಿಯ ಕುರಿತು ಪಾಕಿಸ್ತಾನದ ಒಳಗೆ ಮಾಧ್ಯಮಗಳು ಹಾಗೂ ವಿಶ್ಲೇಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಭಾರತದೊಂದಿಗೆ ಕುಲಭೂಷಣ್ ಜಾಧವ್ ಹಾಗೂ ಬಲೂಚಿಸ್ತಾನದ ವಿಚಾರಗಳನ್ನು ಅವರು ಪ್ರಸ್ತಾಪಿಸಲಿಲ್ಲ ಎಂಬ ಕಾರಣಕ್ಕೆ ಹಲವು ಪಾಕಿಸ್ತಾನಿ ವಲಯಗಳಲ್ಲಿ ಟೀಕೆಗಳು ಕೇಳಿಬಂದಿವೆ.

ಭಾರತ–ಪಾಕಿಸ್ತಾನ ಸಂಬಂಧ ಸುಧಾರಣೆಯ ನಿರೀಕ್ಷೆಗಳೇನು?

ಈ ಭೇಟಿಯ ಕುರಿತು ಸಂಪಾದಕೀಯ ಬರೆದಿರುವ ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’, "ಮುಸಾದಿಕ್ ಮಲಿಕ್ ಭಾರತದಲ್ಲಿದ್ದಾರೆ, ನಿರೀಕ್ಷೆಯಂತೆಯೇ ಯಾವುದೇ ದೊಡ್ಡ ಪ್ರಗತಿ ಸಾಧನೆಯಾಗಿಲ್ಲವಾದರೂ, ಈ ಭೇಟಿ ಮಹತ್ವದ್ದಾಗಿದೆ. ಭಾರತ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಭೇಟಿಯಾದಾಗಲೆಲ್ಲಾ ಹದಗೆಟ್ಟ ಸಂಬಂಧದ ಬಗ್ಗೆ ಹೊಸ ನಿರೀಕ್ಷೆಗಳು ಮೂಡುತ್ತವೆ" ಎಂದು ಉಲ್ಲೇಖಿಸಿದೆ.

ಪ್ರಸ್ತುತ ಎರಡೂ ದೇಶಗಳ ಸಂಬಂಧ ಹಳಸಿರುವ ಹಂತದಲ್ಲಿದೆ ಎಂದು ಬಣ್ಣಿಸಿರುವ ‘ಡಾನ್’, ಕಳೆದ ವರ್ಷದ ಭಾರತ-ಪಾಕಿಸ್ತಾನ ಸಂಘರ್ಷದ ನಂತರ ದಕ್ಷಿಣ ಏಷ್ಯಾದ ವಾತಾವರಣ ಹದಗೆಟ್ಟಿದೆ ಎಂದು ಹೇಳುತ್ತಾ ಭಾರತದ ಮೇಲೆ ದೂಷಣೆ ಹೊರಿಸಿದೆ. ಇದು ಬಹುಪಕ್ಷೀಯ ಸಭೆಯಾಗಿದ್ದರಿಂದ ತಕ್ಷಣದ ದ್ವಿಪಕ್ಷೀಯ ಪ್ರಗತಿಯನ್ನು ನಿರೀಕ್ಷಿಸಿರಲಿಲ್ಲವಾದರೂ, ಸಂಬಂಧಗಳು ಬಿಗಡಾಯಿಸಿರುವ ನಡುವೆಯೂ ಈ ಭೇಟಿ ನಡೆದಿರುವುದು ಗಮನಾರ್ಹವಾಗಿದೆ ಎಂದು ಪತ್ರಿಕೆ ವಿಶ್ಲೇಷಿಸಿದೆ. ಕೆಲವೊಮ್ಮೆ ಮುಚ್ಚಿದ ಬಾಗಿಲುಗಳ ಹಿಂದೆ ಪರಿಸ್ಥಿತಿ ಸುಧಾರಿಸಲು ಸಣ್ಣ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಯಬಹುದು ಎಂದೂ ಅದು ಅಭಿಪ್ರಾಯಪಟ್ಟಿದೆ.

ಮತ್ತೊಂದೆಡೆ, ಭಾರತೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಮುಸಾದಿಕ್ ಮಲಿಕ್, ಭಯೋತ್ಪಾದನೆ ಮತ್ತು ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನೇರವಾಗಿ ಎದುರಿಸದೆ ಜಾರಿಕೊಂಡಿದ್ದಾರೆ. ತಾವು ಎಸ್‌ಸಿಒ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದು, ಅಧಿಕೃತ ಚರ್ಚೆಗೆ ಆಹ್ವಾನಿಸಿದಾಗ ಭಯೋತ್ಪಾದನೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಈ ವಿಚಾರಗಳಲ್ಲಿ ಪಾಕಿಸ್ತಾನಕ್ಕೂ ತನ್ನದೇ ಆದ ಕಳವಳಗಳಿವೆ ಎಂದು ಅವರು ಹೇಳಿದ್ದಾರೆ.

ಕುಲಭೂಷಣ್ ಜಾಧವ್ ವಿಚಾರ ಪ್ರಸ್ತಾಪಿಸದ ಬಗ್ಗೆ ತವರಿನಲ್ಲಿ ಟೀಕೆ

ದ್ವಿಪಕ್ಷೀಯ ಸಂಬಂಧದಲ್ಲಿ ತಕ್ಷಣದ ಬದಲಾವಣೆ ಕಾಣಿಸದಿದ್ದರೂ, ಇಂತಹ ಭೇಟಿಗಳು ಉದ್ವಿಗ್ನತೆ ಮತ್ತು ಕಟುವಾದ ವಾಕ್ಚಾತುರ್ಯವನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ‘ಡಾನ್’ ಪತ್ರಿಕೆ ಹೇಳಿದೆ. ಆದರೆ, ಪಾಕಿಸ್ತಾನಿ ನಿರೂಪಕ ಶಹಬಾಜ್ ಗಿಲ್ ಅವರು ಮುಸಾದಿಕ್ ಮಲಿಕ್ ಅವರ ಭೇಟಿಯನ್ನು ಟೀಕಿಸಿದ್ದಾರೆ. ಭಾರತೀಯ ಪತ್ರಕರ್ತರು ಭಯೋತ್ಪಾದನೆಯ ವಿಚಾರದಲ್ಲಿ ಅವರನ್ನು ಪ್ರಶ್ನಿಸಿದಾಗ ಮಲಿಕ್ ಸಮರ್ಥವಾಗಿ ಉತ್ತರಿಸಲು ವಿಫಲರಾದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದರೂ, ಮಲಿಕ್ ಅವರು ಬೇಹುಗಾರಿಕೆಯಲ್ಲಿ ಸಿಕ್ಕಿಬಿದ್ದ ಕುಲಭೂಷಣ್ ಜಾಧವ್, ಬಲೂಚಿಸ್ತಾನ ಹಾಗೂ ಖೈಬರ್ ಪಖ್ತುಂಖ್ವಾ ವಿಚಾರಗಳನ್ನು ಎತ್ತಲಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ.

ಕುಲಭೂಷಣ್ ಜಾಧವ್ ಪ್ರಕರಣದ ಹಿನ್ನೆಲೆ

ಭಾರತೀಯ ನಾಗರಿಕ ಹಾಗೂ ನಿವೃತ್ತ ನೌಕಾಪಡೆ ಅಧಿಕಾರಿಯಾದ ಕುಲಭೂಷಣ್ ಸುಧೀರ್ ಜಾಧವ್ ಅವರ ಪ್ರಕರಣವು ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಮುಖ ಕಾನೂನು ಮತ್ತು ರಾಜತಾಂತ್ರಿಕ ವಿವಾದವಾಗಿದೆ. 1970ರಲ್ಲಿ ಸಾಂಗ್ಲಿಯಲ್ಲಿ ಜನಿಸಿ ಇರಾನ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದ ಜಾಧವ್ ಅವರನ್ನು 2016ರ ಮಾರ್ಚ್‌ನಲ್ಲಿ ಬಲೂಚಿಸ್ತಾನದಲ್ಲಿ ಬಂಧಿಸಲಾಗಿದ್ದು, ಬೇಹುಗಾರಿಕೆ ಆರೋಪ ಹೊರಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ, ಬೇಹುಗಾರಿಕೆ ಆರೋಪವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇರಾನ್‌ನಿಂದ ಅವರನ್ನು ಅಪಹರಿಸಲಾಗಿದೆ ಎಂದು ವಾದಿಸಿತ್ತು.

2017ರ ಏಪ್ರಿಲ್ 10ರಂದು ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಜಾಧವ್ ಅವರಿಗೆ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತವು 2017ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಪಾಕಿಸ್ತಾನವು 1963ರ ವಿಯೆನ್ನಾ ಕಾನ್ಸುಲರ್ ಸಂಬಂಧಗಳ ಸಮಾವೇಶವನ್ನು ಉಲ್ಲಂಘಿಸಿ, ಕಾನ್ಸುಲರ್ ಪ್ರವೇಶ ಮತ್ತು ಸರಿಯಾದ ಕಾನೂನು ಪ್ರಕ್ರಿಯೆಯನ್ನು ನಿರಾಕರಿಸಿದೆ ಎಂದು ಭಾರತ ಆರೋಪಿಸಿತ್ತು. 2017ರ ಮೇ 18ರಂದು ಮಧ್ಯಂತರ ಆದೇಶ ನೀಡಿದ್ದ ಅಂತರರಾಷ್ಟ್ರೀಯ ನ್ಯಾಯಾಲಯ, ಅಂತಿಮ ತೀರ್ಪು ಬರುವವರೆಗೆ ಮರಣದಂಡನೆ ಜಾರಿಗೆ ತಡೆ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶಕ್ಕಾಗಿ ಮೋದಿ ತ್ಯಾಗ ಬಹುದೊಡ್ಡದು: ಇಂಥ ಪ್ರಧಾನಿ ಅಗತ್ಯವಿದೆ ಎಂದು ಹಾಡಿ ಹೊಗಳಿದ ಜಿರಳೆ ದೀಪ್ಕೆ- ಆಗಿದ್ದೇನು
ಅಹಂಗಿಂತ ಕೆಲಸವೇ ಮುಖ್ಯ ಎಂದು ತೋರಿಸಿದ ಬಳಗ; ಪರಿಶ್ರಮದ ಪ್ರತೀಕವಾದ ಸಚಿನ್, IPS ಮನೋಜ್ ಕುಮಾರ್, ವಿಕ್ರಾಂತ್ ಮಾಸ್ಸೆ!