
ನವದೆಹಲಿ(ಏ.21): ತೀರ್ಥಯಾತ್ರೆಗೆ ತೆರಳುವ ಭಾರತೀಯರನ್ನು ಭೇಟಿ ಮಾಡಲು ಮತ್ತು ಅವರ ಜೊತೆ ಸಂಪರ್ಕ ಸಾಧಿಸಿ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಲುವಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕರ್ತಾರ್‌ಪುರ್ ಕಾರಿಡಾರ್‌ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿದಂತೆ ಭಾರತ ಅವಶ್ಯಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೇ ಪಾಕಿಸ್ತಾನದೊಡನೆ ಮಾತಕತೆ ನಡೆಸಲಿವೆ ಎಂದು ಅವು ಹೇಳಿವೆ.
ಈ ಕಾರಿಡಾರ್ ಅನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ, ಈ ಮಾರ್ಗದಲ್ಲಿ ಯಾವುದೇ ಉದ್ಯಮ ಸಭೆಯನ್ನು ಭಾರತ ಈಗಾಗಲೇ ವಿರೋಧಿಸಿದೆ. ಇದರ ಹೊರತಾಗಿಯೂ ಇಲ್ಲಿಗೆ ಬರುವ ಭಕ್ತರನ್ನು ಸೆಳೆಯಲು ಪಾಕಿಸ್ತಾನ ನಾನಾ ತಂತ್ರ ರೂಪಿಸಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಚ್ಚಲಾಗಿದ್ದ ಈ ಕಾರಿಡಾರ್‌ನ್ನು ಕಳೆದ ನವೆಂಬರ್‌ನಲ್ಲಿ ಪುನಾರಂಭಿಸಲಾಗಿತ್ತು. 2019ರಲ್ಲಿ ಈ ಯೋಜನೆಗೆ ಉಭಯ ದೇಶಗಳು ಒಪ್ಪಿಗೆ ನೀಡಿದ್ದವು. ಸಿಖ್ ಸಂಸ್ಥಾಪಕ ಗುರು ಗುರುನಾನಕ್ ಅವರ ಅಂತಿಮ ಸ್ಥಳವಾದ ಕರ್ತಾರ್‌ಪುರ್‌ಗೆ ಭೇಟಿ ನೀಡಲು ಎಲ್ಲಾ ಧರ್ಮದವರಿಗೆ ಈ ಯೋಜನೆಯಂತೆ 4.5 ಕಿ.ಮೀ ದೂರದ ರಸ್ತೆಯನ್ನು ವೀಸಾ ಮುಕ್ತಗೊಳಿಸಲಾಗಿತ್ತು. ಈ ಕಾರಿಡಾರ್ ಭಾರತದ ಗುರುದಾಸ್ ಪುರ್ ಸಾಹಿಬ್‌ನಿಂದ ಕರ್ತಾರ್‌ಪುರ್‌ಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ಕರ್ತಾರ್‌ಪುರದಲ್ಲಿ ಇರುವ 6 ತಾಸಲ್ಲೇ ಭಾರತೀಯರಿಗೆ ಪಾಕ್ ಉಗ್ರ ತರಬೇತಿ!
ಕರ್ತಾರ್‌ಪುರ ಕಾರಿಡಾರ್ ಮೂಲಕ ಗುರುದ್ವಾರಕ್ಕೆ ತೆರಳುವವರನ್ನು ಸಂಜೆ ಮರಳುವ ವೇಳೆ ತರಬೇತಿ ಹೊಂದಿ ಭಯೋತ್ಪಾದಕರಾಗಿ ಪಾಕಿಸ್ತಾನ ಹಿಂದಿರುಗಿಸುವ ಸಾಧ್ಯತೆ ಇದೆ ಎಂದು ಪಂಜಾಬ್ ಪೋಲಿಸ್ ಮುಖ್ಯಸ್ಥ ದಿನಕರ್ ಗುಪ್ತ ಕಳವಳ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ತಾರ್‌ಪುರ ಕಾರಿಡಾರ್ ಮೂಲಕ ಬೆಳಿಗ್ಗೆ ಸಾಮಾನ್ಯ ಮಂದಿಯಾಗಿ ಪ್ರವೇಶ ಮಾಡುವವರು, ಸಂಜೆ ಮರಳುವ ವೇಳೆ ತರಬೇತಿ ಹೊಂದಿದ ಉಗ್ರರಾಗಿ ಮರಳುತ್ತಾರೆ. ಅಲ್ಲಿ ನೀವು ಮೂರರಿಂದ ಆರು ಗಂಟೆ ಇದ್ದರೆ, ಫೈರಿಂಗ್ ಹಾಗೂ ಸ್ಪೋಟಕ ತಯಾರಿಕಾ ತರಬೇತಿಯನ್ನು ನೀಡಿ ಕಳುಹಿಸುತ್ತಾರೆ. ಹಾಗಾಗಿಯೇ ಕಾರಿಡಾರ್ ಅನ್ನು ವರ್ಷಪೂರ್ತಿ ತೆರೆದಿಡಲಾಗುವುದಿಲ್ಲ. ನೆರೆ ರಾಷ್ಟ್ರದ ಕೆಲವು ಶಕ್ತಿಗಳು ಯಾತ್ರಿಗಳ ಮೇಲೆ ಪ್ರಭಾವ ಬೀರುತ್ತಿದೆ. ಹಾಗಾಗಿ ಈ ಕಾಡಿಡಾರ್ ದೇಶದ ಭದ್ರತೆಗೆ ಯಾವತ್ತಿಗೂ ಸವಾಲೇ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ