* ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗಳು
* ಈಗಲೂ ಆಫ್ಘನ್‌ನಲ್ಲಿ ಪಾಕ್ ಉಗ್ರ ಸಂಘಟನೆಗಳ ತರಬೇತಿ
* ತಾಲಿಬಾನ್, ಉಗ್ರ ಸಂಘಟನೆಗಳ ನಡುವಿನ ನಂಟು ಬಯಲು
* ಭಾರತದ ರಾಯಭಾರಿ ತಿರುಮೂರ್ತಿ ಬಿಡುಗಡೆಗೊಳಿಸಿದ ವರದಿ
ವಿಶ್ವಸಂಸ್ಥೆ(ಮೇ.31): ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗಳು ಅಪ್ಘಾನಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ತರಬೇತಿ ಶಿಬಿರವನ್ನು ನಿರ್ವಹಿಸುತ್ತಿದ್ದು, ಕೆಲವು ಶಿಬಿರಗಳು ತಾಲಿಬಾನ್‌ನ ನಿಯಂತ್ರಣದಲ್ಲಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ತಾಲಿಬಾನ್ ನಿರ್ಬಂಧಗಳ ಸಮಿತಿಯ ಅಧ್ಯಕ್ಷರೂ ಆಗಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಈ ವರದಿ ಬಿಡುಗಡೆಗೊಳಿಸಿದ್ದಾರೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಅಪ್ಘಾನಿಸ್ತಾನದ ನಂಗರ್‌ಹಾರ್‌ನಲ್ಲಿ 8 ಉಗ್ರ ತರಬೇತಿ ಶಿಬಿರಗಳಿದ್ದು, ಅವುಗಳಲ್ಲಿ 3 ನೇರವಾಗಿ ತಾಲಿಬಾನ್ ನಿಯಂತ್ರಣದಲ್ಲಿವೆ. ಮಸೂರ್ ಅಜರ್‌ನಿಂದ ನಿಯಂತ್ರಿಸಲ್ಪಟ್ಟಜೈಷ್ ಉಗ್ರ ಸಂಸ್ಥೆಯು ಸೈದ್ಧಾಂತಿಕವಾಗಿ ತಾಲಿಬಾನ್ ನಿಕಟವಾಗಿದೆ ಎಂದು ವರದಿ ಹೇಳಿದೆ.
ತೆಹ್ರಿಕ್-ಇ ತಾಲಿಬಾನ್-ಪಾಕಿಸ್ತಾನ ಅಪ್ಘಾನಿಸ್ತಾನದಲ್ಲಿ ವಿದೇಶಿ ಉಗ್ರರನ್ನು ಒಳಗೊಂಡಿರುವ ಅತಿದೊಡ್ಡ ಘಟಕವಾಗಿದೆ. ಇಲ್ಲಿ ಸುಮಾರು 3000 ರಿಂದ 4000 ಸಶತ್ರಸಜ್ಜಿತ ಉಗ್ರರಿದ್ದಾರೆ ಎಂದು ವರದಿ ತಿಳಿಸಿದೆ.
ಟಿಕ್‌ಟಾಕ್ ಸ್ಟಾರ್ ಕೊಂದಿದ್ದ 2 ಉಗ್ರರು ಸೇರಿ 4 ಲಷ್ಕರ್ ಉಗ್ರರ ಹತ್ಯೆ
ಜಮ್ಮು-ಕಾಶ್ಮೀರದ ಪುಲ್ವಾಮಾ ಹಾಗೂ ಶ್ರೀನಗರದಲ್ಲಿ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಟಿಕ್‌ಟಾಕ್ ಸ್ಟಾರ್ ಅಮ್ರೀನ್ ಭಟ್ ಅವರ ಹತ್ಯೆ ಮಾಡಿದ ಇಬ್ಬರು ಉಗ್ರರು ಸೇರಿ ಲಷ್ಕರ್-ಎ-ತೊಯ್ಬಾದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಪುಲ್ವಾಮಾದ ಅವಂತಿಪೊರಾದಲ್ಲಿ ಗುರುವಾರ ರಾತ್ರಿ ನಡೆಸಿದ ಎನ್‌ಕೌಂಟರ್‌ನಲ್ಲಿ ಟಿಕ್‌ಟಾಕ್ ಸ್ಟಾರ್ ಅಮ್ರೀನ್ ಭಟ್ ಅವರನ್ನು ಹತ್ಯೆಗೈದ ಇಬ್ಬರು ಉಗ್ರರು ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಎಲ್‌ಇಟಿ ಕಮಾಂಡರ್ ಲತೀಫ್ ಎಂಬ ವ್ಯಕ್ತಿಯ ಆದೇಶದ ಮೇರೆಗೆ, ಮೃತ ಶಾಹೀದ್ ಮುಶ್ತಾಖ್ ಭಟ್ ಹಾಗೂ ಫರ್ಹಾನ್ ಹಬೀಬ್ ಅಮ್ರೀನ್ ಹತ್ಯೆ ಮಾಡಿದ್ದರು ಎನ್ನಲಾಗಿದೆ.
ಶ್ರೀನಗರದಲ್ಲಿ ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಇಬ್ಬರು ಎಲ್‌ಇಟಿ ಉಗ್ರರು ಬಲಿಯಾಗಿದ್ದಾರೆ. ಕಳೆದ 3 ದಿನಗಳಲ್ಲಿ ಕಾಶ್ಮೀರದಲ್ಲಿ ಒಟ್ಟು 10 ಉಗ್ರರು ಭದ್ರತಾ ಪಡೆಗಳ ದಾಳಿಗೆ ಬಲಿಯಾಗಿದ್ದಾರೆ. ಅಮ್ರೀನ್ ಭಟ್ ಅವರ ಹತ್ಯೆಯ ಪ್ರಕರಣವನ್ನು 24 ಗಂಟೆಗಳ ಒಳಗಾಗಿ ಭೇದಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.