
ನವದೆಹಲಿ(ಮೇ.31): ಕೇಂದ್ರದಲ್ಲಿ ತಮ್ಮ ಅಧಿಕಾರ ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶಾದ್ಯಂತ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಯೋಜಿಸಿರುವ ‘ಗರೀಬ್ ಕಲ್ಯಾಣ ಸಮ್ಮೇಳನ’ದಲ್ಲಿ ಪಾಲ್ಗೊಂಡು, ಅಲ್ಲಿಂದಲೇ ಅವರು ದೇಶದೆಲ್ಲೆಡೆ ಏರ್ಪಡಿಸಿರುವ ಜನಸಂಪರ್ಕ ಕಾರ್ಯಕ್ರಮಗಳಲ್ಲಿ ಆನ್‌ಲೈನ್‌ನಲ್ಲಿ ಭಾಗವಹಿಸಲಿದ್ದಾರೆ.
ಗರೀಬ್ ಕಲ್ಯಾಣ ಸಮ್ಮೇಳನದ ಅಂಗವಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯಗಳ ಸಚಿವರು, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ತಮ್ಮ ರಾಜ್ಯ ಹಾಗೂ ಕಾರ್ಯಕ್ಷೇತ್ರದಲ್ಲಿ ಬೆಳಿಗ್ಗೆ 9.45ರಿಂದ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ. ರಾಜ್ಯ ರಾಜಧಾನಿಗಳು, ಜಿಲ್ಲಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ನಂತರ ಸುಮಾರು 11 ಗಂಟೆಯ ವೇಳೆಗೆ ಇವರೆಲ್ಲರ ಜೊತೆ ಪ್ರಧಾನಿ ಮೋದಿ ಆನ್‌ಲೈನ್‌ನಲ್ಲಿ ಸಂವಾದ ನಡೆಸಲಿದ್ದಾರೆ. ಅವರು ಹಿಮಾಚಲ ಪ್ರದೇಶದಲ್ಲಿ ಆಯೋಜಿಸಿರುವ ರಾರಯಲಿಯಲ್ಲಿ ಪಾಲ್ಗೊಂಡು, ಅಲ್ಲಿಂದಲೇ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಇದೇ ವೇಳೆ, ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿಎಂ-ಕಿಸಾನ್) ಯೋಜನೆಯಡಿ 11ನೇ ಕಂತಿನ 21000 ಕೋಟಿ ರು.ಗಳನ್ನು ರೈತರ ಖಾತೆಗೆ ನೇರವಾಗಿ ಅವರು ಜಮೆ ಮಾಡಲಿದ್ದಾರೆ. ಒಟ್ಟು 10 ಕೋಟಿ ರೈತರಿಗೆ ಈ ಹಣ ವರ್ಗಾವಣೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ