
ನವದೆಹಲಿ(ನ.23): ನ.19ರಂದು ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಯೋಧರ ಗುಂಡಿಗೆ ಬಲಿಯಾದ ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಸುಮಾರು 30 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಭಾರತಕ್ಕೆ ಪ್ರವೇಶಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಎನ್ಕೌಂಟರ್ ಬಳಿಕ ಉಗ್ರರ ಬಳಿಯಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಸ್ಫೋಟಕಗಳ ಜೊತೆ ಉಗ್ರರ ಬಳಿ ಲಭ್ಯವಾದ ಮೊಬೈಲ್‌ನ ಸಂದೇಶಗಳು, ಜಿಪಿಎಸ್ ಮಾಹಿತಿ ಮತ್ತು ವೈರ್‌ಲೆಸ್ ಉಪಕರಣಗಳನ್ನು ಭದ್ರತಾ ಸಂಸ್ಥೆಗಳು ಆಳ ತನಿಖೆಗೆ ಒಳಪಡಿಸಿದ ವೇಳೆ ಉಗ್ರರ ಹಾದಿಯ ಕುರಿತ ಸಾಕಷ್ಟುಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಇನ್ನೊಂದು ವಿಶೇಷವೆಂದರೆ ಹತರಾದ ಎಲ್ಲಾ ನಾಲ್ವರಿಗೂ ಕಮಾಂಡೋ ತರಬೇತಿ ನೀಡಲಾಗಿತ್ತು. ಜೊತೆಗೆ ಎಲ್ಲಾ ನಾಲ್ವರು ಆತ್ಮಾಹುತಿ ದಾಳಿಕೋರರಾಗಿದ್ದರು.
26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್ ಸೋದರನೇ ರೂವಾರಿ?
ರೌಫ್ ರೂವಾರಿ:
ಭದ್ರತಾ ಸಂಸ್ಥೆಗಳ ಪ್ರಕಾರ, ಉಗ್ರರನ್ನು ಭಾರತಕ್ಕೆ ಕಳುಹಿಸುವ ಸಂಚು ರೂಪಿಸಿದ್ದು ಜೈಷ್ ಸಂಘಟನೆಯ ನಾಯಕ ಅಜರ್ ಮಸೂದ್‌ನ ಸೋದರ ಮುಫ್ತಿ ರೌಫ್ ಅಸ್ಗರ್. ಯೋಜನೆ ಕಾರ್ಯರೂಪಕ್ಕೆ ತರುವ ಹೊಣೆ ಹೊತ್ತಿದ್ದು ಜೈಷ್‌ನ ಕಮಾಂಡರ್ ಕಾಸಿಂ ಜನ್. ಈತ 2016ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರ ದಾಳಿಯ ಮುಖ್ಯ ರೂವಾರಿ ಕೂಡಾ ಹೌದು. ಭಾರತಕ್ಕೆ ಉಗ್ರರನ್ನು ಒಳನುಸುಳಿಸುವುದೇ ಈತನ ಪ್ರಮುಖ ಕೆಲಸ.
ರವಾನೆ:
ಭಾರತದ ಗಡಿಗೆ ಹೊಂದಿಕೊಂಡಿರುವ ಪಾಕಿಸ್ತಾನ ಶಕರ್‌ಗಢ ಪಟ್ಟಣದ ಹೊರವಲಯದಲ್ಲಿ ಜೈಷ್ ಉಗ್ರ ಸಂಘಟನೆಯ ತರಬೇತಿ ಕ್ಯಾಂಪ್ ಇದೆ. ಇಲ್ಲಿ ನಾಲ್ವರಿಗೂ ಕಮಾಂಡೋ ತರಬೇತಿ ಕೊಟ್ಟಬಳಿಕ ದೀಪಾವಳಿ ಅಮಾವಾಸ್ಯೆಯ ಸಮಯದಲ್ಲಿ ಕಾಶ್ಮೀರದ ಕಡೆಗೆ ಕಳುಹಿಸಲಾಗಿತ್ತು. ಅಲ್ಲಿಂದ ದುರ್ಗಮ ಅರಣ್ಯವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ ಉಗ್ರರು, ಕಾಶ್ಮೀರದ ಸಾಂಬಾ ವಲಯದಲ್ಲಿ ಬರುವ ಮವಾ ಎಂಬ ಗ್ರಾಮದ ಮೂಲಕ ಭಾರತ ಪ್ರವೇಶಿಸಿದ್ದಾರೆ. ಗಡಿಯಲ್ಲಿ ಭಾರೀ ಕಣ್ಗಾವಲು ಇರುವ ಕಾರಣ ಸುಮಾರು 150 ಮೀಟರ್ ಉದ್ದ ಕಳ್ಳ ಸುರಂಗದ ಮೂಲಕ ಇವರೆಲ್ಲಾ ಭಾರತದ ಗಡಿಯೊಳಗೆ ನುಗ್ಗಿಬಂದಿದ್ದಾರೆ. ಹೀಗೆ ಜಮ್ಮುವಿನ ಸಾಂಬಾಕ್ಕೆ ಬಂದ ಉಗ್ರರು ಮುಂದೆ ಅಲ್ಲಿಂದ ತಮ್ಮನ್ನು ಕರೆದೊಯ್ಯಲು ಸಿದ್ಧವಾಗಿದ್ದ ಲಾರಿ ಏರಲು ಜಟ್ವಾಲ್ ಎಂಬ ಪಟ್ಟಣಕ್ಕೆ ನಡೆದೇ ಬಂದಿದ್ದಾರೆ. ಅಂದರೆ ಶಕರ್‌ಗಡ ಮತ್ತು ಜಟ್ವಾಲ್ ನಡುವಿನ 30 ಕಿ.ಮೀ ದೂರವನ್ನು ಉಗ್ರರು ನಡೆದೇ ಬಂದಿದ್ದಾರೆ.
26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್ ಸಂಚು?: ಉಗ್ರರ ಹತ್ಯೆಯಿಂದ ಪ್ಲಾನ್ ಬಹಿರಂಗ!
ಹೀಗೆ ಬಂದ ಉಗ್ರರು ಮಧ್ಯರಾತ್ರಿ 2.30ರ ವೇಳೆಗೆ ಜಟ್ವಾಲ್‌ನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಲಾರಿ ಏರಿ ಕಾಶ್ಮೀರದ ಕಡೆಗೆ ಹೊರಟಿದ್ದಾರೆ. ಆದರೆ ಉಗ್ರರ ಆಗಮನದ ಕುರಿತು ಖಚಿತ ಮಾಹಿತಿ ಹೊಂದಿದ್ದ ಭದ್ರತಾ ಪಡೆಗಳು ಮುಂಜಾನೆ 4.45ರ ವೇಳೆಗೆ ಬಾನ್ ಟೋಲ್‌ಗೇಟ್ ಬಳಿ ಅಡ್ಡಗಟ್ಟಿದ್ದಾರೆ. ಈ ವೇಳೆ ಲಾರಿ ಚಾಲಕ ಇಳಿದು ಪರಾರಿಯಾದರೆ, ಅಪಾಯದ ಅರಿವಾದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶರಣಾಗುವಂತೆ ನೀಡಿದ ಎಚ್ಚರಿಕೆಯನ್ನು ಉಗ್ರರು ತಿರಸ್ಕರಿಸಿದ ಕಾರಣ ತಾವೂ ಪ್ರತಿ ದಾಳಿ ನಡೆಸಿ ನಾಲ್ವರನ್ನೂ ಹತ್ಯೆಗೈದಿದ್ದಾರೆ.
ಕತ್ತಲ ರಾತ್ರಿ ಪ್ರಯಾಣ:
ಗಡಿಯಲ್ಲಿ ಭಾರತೀಯ ಯೋಧರು ಭಾರೀ ಕಣ್ಗಾವಲು ಇಟ್ಟಿರುವ ಕಾರಣ ದೀಪಾವಳಿ ಅಮಾವಾಸ್ಯೆ ಸಮಯವನ್ನೇ ಉಗ್ರರು ಆಯ್ದುಕೊಂಡು ಭಾರತ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಿನ್‌ಪಾಯಿಂಟ್ ಸ್ಟ್ರೈಕ್ ನಡೆಸಿಲ್ಲ: ಸೇನೆ ಸ್ಪಷ್ಟನೆ!
ಉಗ್ರರು ನುಸುಳಿದ್ದ ಸುರಂಗ ಪತ್ತೆ
ಜೈಷ್ ಉಗ್ರರು ಭಾರತ ನುಸುಳಲು ಬಳಸಿದ್ದ ಸುರಂಗವನ್ನು ಭಾರತೀಯ ಭದ್ರತಾ ಪಡೆಗಳು ಶೋಧಿಸುವಲ್ಲಿ ಯಶಸ್ವಿಯಾಗಿವೆ. ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕಾಶ್ಮೀರದ ಸಾಂಬಾ ವಲಯದಲ್ಲಿ ಮೂರು ದಿನಗಳ ಶೋಧ ಕಾರ್ಯಾಚರಣೆ ಬಳಿಕ 150 ಮೀಟರ್ ಉದ್ದದ ಈ ಸುರಂಗ ಪತ್ತೆಯಾಗಿದೆ ಎಂದು ಡಿಜಿಪಿ ದಿಲ್ಬಾಂಗ್ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನದ ಗಡಿಯಲ್ಲಿ ಭಾರೀ ಬಂದೋಬಸ್‌್ತ ಇರುವ ಕಾರಣ ಇಷ್ಟುಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಾರತದ ಗಡಿ ನಸುಳಲು ಸಾಧ್ಯವೇ ಇಲ್ಲ. ಹೀಗಾಗಿ ಪಾಕಿಸ್ತಾನದ ಉಗ್ರರು ಗುಪ್ತ ಸುರಂಗವೊಂದರ ಮೂಲಕ ಭಾರತ ಪ್ರವೇಶಿಸಿರಬಹುದು ಎಂದು ಗುಪ್ತಚರ ಇಲಾಖೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೂ ಬಿಎಸ್‌ಎಫ್ ಯೋಧರು ಮತ್ತು ಪೊಲೀಸರ ನಿರಂತರ ಶ್ರಮದ ಪರಿಣಾಮ ಸುರಂಗ ಶೋಧ ಕಾರಾರಯಚರಣೆ ಯಶಸ್ವಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ