Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್‌ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!

By Santosh NaikFirst Published Jan 25, 2023, 9:24 PM IST
Highlights

2023ರ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟ ಮಾಡಿದೆ. ಹಿರಿಯ ರಾಜಕಾರಣಿ, ಮುತ್ಸದ್ಧಿ ಎಸ್‌ಎಂ ಕೃಷ್ಣ ಸೇರಿದಂತೆ 6 ಮಂದಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದರೆ, ಹಿರಿಯ ಸಾಹಿತಿ ಎಸ್‌ಎಲ್‌ ಭೈರಪ್ಪ, ಲೇಖಕಿ ಹಾಗೂ ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಹೆಸರು ಮಾಡಿರುವ ಸುಧಾ ಮೂರ್ತಿ ಸೇರಿದಂತೆ 9 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ನವದೆಹಲಿ (ಜ.25): 74ನೇ ಗಣರಾಜ್ಯೋತ್ಸವಕ್ಕೆ ಮುನ್ನ ಸರ್ಕಾರ ಬುಧವಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಿದೆ. 6 ಮಂದಿಗೆ ಪದ್ಮವಿಭೂಷಣ, 9 ಮಂದಿಗೆ ಪದ್ಮಭೂಷಣ ಹಾಗೂ 91 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ. ಹಿರಿಯ ರಾಜಕಾರಣಿ ಹಾಗೂ ಬೆಂಗಳೂರು ನಗರವನ್ನು ಸಿಲಿಕಾನ್‌ ಸಿಟಿಯನ್ನಾಗಿ ಮಾಡಿದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರಿಗೆ ಸಾರ್ವಜನಿಕ ಸೇವೆ ವಿಭಾಗದಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಕೇಂದ್ರ ಗೌರವಿಸಿದೆ. ಅವರೊಂದಿಗೆ ಒಆರ್‌ಎಸ್‌ನ ಹರಿಕಾರ  ಪಶ್ಚಿಮ ಬಂಗಾಳದ ಡಾ. ದಿಲೀಪ್ ಮಹಾಲನಬಿಸ್‌ , ಆರ್ಕಿಟೆಕ್ಟರ್‌ ವಿಭಾಗದಲ್ಲಿ ಗುಜರಾತ್‌ನ ಬಾಲಕೃಷ್ಣ ದೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಸೇರಿದೆ. ಉಳಿದಂತೆ ಕಲೆ ವಿಭಾಗದಲ್ಲಿ ಮಹಾರಾಷ್ಟ್ರದ ಜಾಕಿರ್‌ ಹುಸೇನ್‌, ವಿಜ್ಞಾನ ಹಾಗೂ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಭಾರತೀಯ ಮೂಲದ ಅಮೆರಿಕನ್‌ ಶ್ರೀನಿವಾಸ್‌ ವರ್ಧನ್‌ ಅವರಿಗೂ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮಭೂಷಣ ಪ್ರಶಸ್ತಿಯನ್ನು ಸರ್ಕಾರ 9 ಮಂದಿಗೆ ನೀಡಿದೆ. ಕರ್ನಾಟಕದಿಂದ ಪ್ರಮುಖವಾಗಿ ಹಿರಿಯ ಲೇಖಕ 91 ವರ್ಷದ ಎಸ್‌ಎಲ್‌ ಭೈರಪ್ಪ ಅವರಿಗೆ ನೀಡಲಾಗಿದೆ. 2016ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜರಾಗಿದ್ದ ಲೇಖಕಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ನ ಚೇರ್ಮನ್‌ ಸುಧಾ ಮೂರ್ತಿ ಅವರಿಗೆ ಕೇಂದ್ರ ಪದ್ಮಭೂಷಣ ನೀಡಿದೆ. ಅದರೊಂದಿಗೆ ಉದ್ದಿಮೆ ವಲಯದಲ್ಲಿ ಮಹಾರಾಷ್ಟ್ರದ ಕುಮಾರ ಮಂಗಲಂ ಬಿರ್ಲಾ, ವಿಜ್ಞಾನ ಮತ್ತು ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ದೀಪಕ್‌ ಧರ್‌, ಸುಮನ್‌ ಕಲ್ಯಾಣಪುರ್‌ (ಕಲೆ),  ಕಲಾ ಕ್ಷೇತ್ರದಲ್ಲಿ ತಮಿಳುನಾಡಿದ ವಾಣಿ ಜಯರಾಂ, ಆಧ್ಯಾತ್ಮ ಕ್ಷೇತ್ರದಲ್ಲಿ ತೆಲಂಗಾಣದ ಸ್ವಾಮಿ ಚಿನ್ನ ಜೀಯರ್‌, ಕಮಲೇಶ್‌ ಡಿ ಪಾಟೀಲ್‌ ಮತ್ತು  ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೆಹಲಿಯ ಕಪಿಲ್‌ ಕಪೂರ್‌ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.

ಕರ್ನಾಟಕದ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರು:  ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ, ಕಲೆಯ (ಜಾನಪದ ನೃತ್ಯ) ನರ್ತಕಿ ಈ ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಉಳಿಸಲು ಸಹಾಯ ಮಾಡಿದ ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಿಕ್ಕಬಳ್ಳಾಪುರದ ಹಿರಿಯ ತಮಟೆ ವಾದಕ ಮುನಿವೆಂಕಟಪ್ಪ,, ಕಲೆ (ಜಾನಪದ ಸಂಗೀತ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ವಾದ್ಯ ತಮಟೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಅವಿರತವಾಗಿ ಇಂದಿಗೂ ಶ್ರಮಿಸುತ್ತಿದ್ದಾರೆ. ವಿಜ್ಞಾನ ಹಾಗೂ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಖಾದರ ವಲ್ಲಿ ದೂದೇಕುಲ ಅವರು ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲೆ ಕ್ಷೇತ್ರದಲ್ಲಿ ಷಾ ರಶೀದ್‌ ಅಹ್ವದ್‌ ಖ್ವಾದ್ರಿ, ಪುರಾತತ್ವ ವಿಭಾಗದಲ್ಲಿ ಎಸ್‌. ಸುಬ್ಬರಾಮನ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಮುಟ್ಟಾಳೆ ನೋಡಿ ಏನು ಅಂತ ಕೇಳಿದ್ರು: ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ

ಈ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್/ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಗಳಿಂದ ನೀಡಲಾಗುತ್ತದೆ. 2023 ರ ವರ್ಷಕ್ಕೆ, 106 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ.

Padma Awards: ದೇಶದ ಹೆಮ್ಮೆಯ ಕ್ರೀಡಾ ಸಾಧಕರಿಗೆ ಪದ್ಮ ಗೌರವ ಪ್ರದಾನ

ಈ ಪಟ್ಟಿಯು 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರು ಮತ್ತು ಪಟ್ಟಿಯು ವಿದೇಶಿಯರು ವರ್ಗದಿಂದ 2 ವ್ಯಕ್ತಿಗಳು ಮತ್ತು 7 ಮರಣೋತ್ತರ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡಿದೆ.

 

 

click me!