ಕೋವಿಶೀಲ್ಡ್‌ ಭಾರತದ ಮೊದಲ ಕೊರೋನಾ ಲಸಿಕೆ?

By Kannadaprabha NewsFirst Published Dec 27, 2020, 8:26 AM IST
Highlights

ಬ್ರಿಟನ್‌ನಿಂದ ಮುಂದಿನ ವಾರ ಅನುಮತಿ ಸಾಧ್ಯತೆ | ಬೆನ್ನಲ್ಲೇ ಭಾರತದಲ್ಲೂ ಬಳಕೆಗೆ ಸಮ್ಮತಿ ಸಂಭವ

ಪಿಟಿಐ ನವದೆಹಲಿ(ಡಿ.27): ಬ್ರಿಟನ್‌ನ ‘ಕೋವಿಶೀಲ್ಡ್‌’ ಕೊರೋನಾ ಲಸಿಕೆಗೆ ಭಾರತ ಶೀಘ್ರ ತುರ್ತು ಬಳಕೆಗಾಗಿ ಅನುಮೋದನೆ ನೀಡುವ ಸಾಧ್ಯತೆ ಇದೆ. ಇದಕ್ಕೆ ಅನುಮತಿ ಸಿಕ್ಕರೆ ಭಾರತದಲ್ಲಿ ಅಧಿಕೃತವಾಗಿ ಬಳಕೆಯಾಗಲಿರುವ ಮೊದಲ ಕೋವಿಡ್‌ ಲಸಿಕೆ ಎನ್ನಿಸಿಕೊಳ್ಳಲಿದೆ.

‘ಕೋವಿಶೀಲ್ಡ್‌’ ಲಸಿಕೆಯನ್ನು ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಲಸಿಕೆ ತಯಾರಿಕಾ ಕಂಪನಿಯಾದ ಆಸ್ಟ್ರಾಜೆನೆಕಾ ಸಿದ್ಧಪಡಿಸುತ್ತಿವೆ. ಇವುಗಳೊಂದಿಗೆ ಭಾರತದ ದೊಡ್ಡ ಲಸಿಕೆ ಉತ್ಪಾದಕ ಕಂಪನಿ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಲಸಿಕೆ ತಯಾರಿಸುತ್ತಿದೆ. ಲಸಿಕೆಯ ತುರ್ತು ಬಳಕೆ ಅನುಮತಿ ಕೋರಿ ಭಾರತ ಸರ್ಕಾರಕ್ಕೆ ಸೀರಂ ಈಗಾಗಲೇ ಅರ್ಜಿ ಸಲ್ಲಿಸಿದೆ.

ಭಾರತಕ್ಕೆ ನುಗ್ಗಲು ಹೊಸ ದಾರಿ ಹುಡುಕ್ತಿದೆ ಪಾಕ್: ಗುಜರಾತ್‌, ರಾಜಸ್ಥಾನದ ಮೂಲಕ ಪ್ರವೇಶ ಯತ್ನ

ಕೋವಿಶೀಲ್ಡ್‌ಗೆ ಬ್ರಿಟನ್‌ ಮುಂದಿನ ವಾರ ಅನುಮತಿ ನೀಡುವ ನಿರೀಕ್ಷೆಯಿದೆ. ಒಮ್ಮೆ ಬ್ರಿಟನ್‌ ಅನುಮತಿಸಿತು ಎಂದರೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರವು, ಲಸಿಕೆಯ ಎಲ್ಲ ಸುರಕ್ಷತೆಯನ್ನು ಅಳೆದುತೂಗಿ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿಸುವ ಸಾಧ್ಯತೆ ಇದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಭಾರತ್‌ ಬಯೋಟೆಕ್‌ ‘ಕೋವ್ಯಾಕ್ಸಿನ್‌’ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಿದೆ. ಈಗಾಗಲೇ ಅಮೆರಿಕ, ಬ್ರಿಟನ್‌, ಬಹ್ರೇನ್‌ನಲ್ಲಿ ಅನುಮೋದನೆ ಗಿಟ್ಟಿಸಿರುವ ‘ಫೈಝರ್‌’ ಲಸಿಕೆಯ ಸುರಕ್ಷತೆ ಭಾರತದಲ್ಲಿ ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ಕೋವಿಶೀಲ್ಡ್‌ಗೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿದ್ದು, ಭಾರತದ ಮೊದಲ ಕೊರೋನಾ ಲಸಿಕೆ ಎನ್ನಿಸಿಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೂಪಾಂತರಗೊಂಡ ವೈರಸ್‌ ಭಾರತದಲ್ಲಿ ಮಾರ್ಚ್‌ನಲ್ಲೇ ಇತ್ತು: ಜೀನೋಮಿಕ್ಸ್

ಲಸಿಕೆಯ ಸುರಕ್ಷತೆ ಬಗ್ಗೆ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸೀರಂ ಈಗಾಗಲೇ ಮಾಹಿತಿ ಸಲ್ಲಿಸಿದೆ. ಸೀರಂ ಈಗಾಗಲೇ 40 ದಶಲಕ್ಷ ಲಸಿಕೆಗಳನ್ನು ಉತ್ಪಾದಿಸಿ ಇಟ್ಟುಕೊಂಡಿದೆ ಎಂದು ಇತ್ತೀಚೆಗೆ ಗೊತ್ತಾಗಿತ್ತು.

click me!