ಹಿಮಾಚಲದ ಡಿಸಿಎಂಗೆ ಪತ್ನಿ ವಿಯೋಗ: ಹೃದಯಘಾತಕ್ಕೆ ಪ್ರೊಫೆಸರ್ ಸಿಮಿ ಅಗ್ನಿಹೋತ್ರಿ ಬಲಿ

By Anusha KbFirst Published Feb 10, 2024, 12:59 PM IST
Highlights

ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರಿಗೆ ಪತ್ನಿ ವಿಯೋಗವಾಗಿದೆ. ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುಕೇಶ್ ಅವರ ಪತ್ನಿ ಸಿಮಿ ಅಗ್ನಿಹೋತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಶಿಮ್ಲಾ: ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರಿಗೆ ಪತ್ನಿ ವಿಯೋಗವಾಗಿದೆ. ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುಕೇಶ್ ಅವರ ಪತ್ನಿ ಸಿಮಿ ಅಗ್ನಿಹೋತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸ್ವತಃ ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ  ಮುಕೇಶ್ ಅಗ್ನಿಹೋತ್ರಿ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಪ್ರೀತಿಯ ಪ್ರೊಫೆಸರ್ ನಮ್ಮನ್ನು ಅಗಲಿ ಹೊರಟು ಹೋದರು ಎಂದು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

ನಿನ್ನೆ ಮನೆಯಲ್ಲಿದ್ದಾಗ ಉಸಿರಾಡುವುದಕ್ಕೆ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಸಿಮಿ ಅಗ್ನಿಹೋತ್ರಿ ಅವರನ್ನು ಕುಟುಂಬ ಸದಸ್ಯರು ಮೊಹಾಲಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ಸಾಗಿಸಿದ್ದರು. ಆದರೆ ಅಲ್ಲಿ ಅವರನ್ನು ಉಳಿಸಿಕೊಳ್ಳುವುದಕ್ಕೆ ವೈದ್ಯರ ಪರಿಶ್ರಮದ ಹೊರತಾಗಿಯೂ ಅವರು ಸಾವನ್ನಪ್ಪಿದ್ದಾರೆ. ಹಠಾತ್ ಹೃದಯಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 

Latest Videos

ಪತ್ನಿಯ ಈ ಕೊನೆಕ್ಷಣದ ವೇಳೆ ಪತಿ ಮುಕೇಶ್ ಅಗ್ನಿಹೋತ್ರಿ ಅವರು ಶಿಮ್ಲಾದಲ್ಲಿ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಕೂಡಲೇ ವಿಚಾರ ತಿಳಿದು ಅವರು ಆಸ್ಪತ್ರೆಗೆ ಬಂದರಾದರು ಅಷ್ಟರಲ್ಲಾಗಲೇ ಸಿಮಿ ಅವರು ಉಸಿರು ಚೆಲ್ಲಿದ್ದರು. 1992ರ ಏಪ್ರಿಲ್ 8 ರಂದು ಈ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ಸಿಮಿ ಅವರು ಹಿಮಾಚಲ ಪ್ರದೇಶ ಯುನಿವರ್ಸಿಟಿಯ ಕಾನೂನು ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಿಮಿ ಅವರ ಈ ಹಠಾತ್ ನಿಧನ ಹಿಮಾಚಲ ಪ್ರದೇಶದಲ್ಲಿ ಆಘಾತಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು, ಸ್ನೇಹಿತರು ಬಂಧುಗಳು ರಾಜಕೀಯ ನಾಯಕರು ಸಂತಾಪಗಳ ಮಳೆ ಸುರಿಸುತ್ತಿದ್ದಾರೆ. ಸಿಮಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಪತಿಯ ರಾಜಕೀಯ ಏಳ್ಗೆಗೆ ಬೆನ್ನೆಲುಬಾಗಿ ನಿಂತ ಬಗ್ಗೆ ಜನ ಶ್ಲಾಘಿಸುತ್ತಿದ್ದಾರೆ. 

ಸಿಮಿ ಅಗ್ನಿಹೋತ್ರಿ ಅವರು ಇಹಲೋಕ ತೊರೆದು ಭಗವಂತನಲ್ಲಿ ವಿಲೀನಗೊಂಡಿದ್ದಾರೆ ಎಂದು ನಾವು ಬಹಳ ದುಃಖದಿಂದ ನಿಮಗೆ ತಿಳಿಸುತ್ತಿದ್ದೇವೆ. ಅವರ ಪಾರ್ಥಿವ ಶರೀರವನ್ನು ನಮ್ಮ ಮೂಲ ಗ್ರಾಮವಾದ ಗೊಂಡಪುರ ಜೈಚಂದ್‌ನಲ್ಲಿರುವ ನಮ್ಮ ಖಾಸಗಿ ನಿವಾಸ ಆಸ್ತಾ ಕುಂಜ್‌ನಲ್ಲಿ ಅಂತಿಮ ದರ್ಶನಕ್ಕಾಗಿ ಮಧ್ಯಾಹ್ನ 1:00 ಗಂಟೆಯವರೆಗೆ ಇಡಲಾಗುವುದು. ಅಂತಿಮ ವಿಧಿವಿಧಾನಗಳನ್ನು ಮಧ್ಯಾಹ್ನ 02:00 ಗಂಟೆಗೆ ಮೋಕ್ಷ್ ಧಾಮ್ ಗೊಂಡಪುರ್ ಜೈಚಂದ್ (ಹರೋಲಿ) ಯಲ್ಲಿ ನೆರವೇರಿಸಲಾಗುವುದು ಎಂದು ಮುಕೇಶ್ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

click me!