ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಸುಲಭದ ಕೆಲಸ ಅಲ್ಲ ಕೆಲ ದಾಖಲೆಗಳ ಪರಿಶೀಲನೆ ಅದು ಇದು ಅಂತ ಕೆಲ ದಿನಗಳಂತೂ ಕಾಯಲೇಬೇಕು. ಆದರೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮಗನ ಕಳೆದುಕೊಂಡ ತಾಯಿಗಾಗಿ ಕೇವಲ 3 ಗಂಟೆಯಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಜಿ ಸಲ್ಲಿಸಿದ ಮೂರು ಗಂಟೆಯಲ್ಲಿ ಪಾಸ್‌ಪೋರ್ಟ್ ತಾಯಿ ಕೈ ಸೇರುವಂತೆ ಮಾಡಿದೆ.
ಬೆಂಗಳೂರು: ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಸುಲಭದ ಕೆಲಸ ಅಲ್ಲ, ಇತ್ತೀಚೆಗೆ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಪ್ರಕ್ರಿಯೆಗಳು ಮೊದಲಿಗಿಂತ ಸುಲಭವಾಗಿದ್ದರೂ ಕೆಲ ದಾಖಲೆಗಳ ಪರಿಶೀಲನೆ ಅದು ಇದು ಅಂತ ಕೆಲ ದಿನಗಳಂತೂ ಕಾಯಲೇಬೇಕು. ಆದರೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಮಗನ ಕಳೆದುಕೊಂಡ ತಾಯಿಗಾಗಿ ಕೇವಲ 3 ಗಂಟೆಯಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಜಿ ಸಲ್ಲಿಸಿದ ಮೂರು ಗಂಟೆಯಲ್ಲಿ ಪಾಸ್‌ಪೋರ್ಟ್ ತಾಯಿ ಕೈ ಸೇರುವಂತೆ ಮಾಡಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಹಿರಿಯ ನಾಗರಿಕ ಮಹಿಳೆಯೊಬ್ಬರ 43 ವರ್ಷದ ಮಗ ದೂರಾದ ಅಮೆರಿಕಾದ ಕೊಲೆರಾಡೋದಲ್ಲಿ ಕೆಲಸದಲ್ಲಿದ್ದು, ಇತ್ತೀಚೆಗೆ ದಿಢೀರ್ ಹೃದಯಘಾತದಿಂದ ಕುಸಿದು ಬಿದ್ದು, ಸಾವನ್ನಪ್ಪಿದ್ದ. ಇತ್ತ ಮಗನ ಕಳೆದುಕೊಂಡ ನೋವಿನಲ್ಲಿದ್ದ ತಾಯಿ ಮಗನನ್ನು ಕೊನೆ ಬಾರಿ ನೋಡುವುದಕ್ಕಾಗಿ ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿ ತಮ್ಮ ಸಂದಿಗ್ಧ ಸ್ಥಿತಿಯನ್ನು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕ ಮಹಿಳೆಯ ನೆರವಿಗೆ ಬಂದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸಿಬ್ಬಂದಿ ಪಾಸ್‌ಪೋರ್ಟ್ ನವೀಕರಣಕ್ಕೆ ಆಗಬೇಕಾದ ಎಲ್ಲಾ ವ್ಯವಸ್ಥೆಯನ್ನು ಶೀಘ್ರದಲ್ಲೇ ಮಾಡಿ ಕೇವಲ ಮೂರು ಗಂಟೆಯಲ್ಲಿ ಪಾಸ್‌ಪೋರ್ಟ್ ತಾಯಿ ಕೈ ಸೇರುವಂತೆ ಮಾಡಿದ್ದಾರೆಎ. ಈ ಮೂಲಕ ಮಗನ ಕಳೆದುಕೊಂಡ ತಾಯಿಯ ನೋವಿಗೆ ಸ್ಪಂದಿಸಿದ್ದಾರೆ.
ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸೋ ಮುನ್ನ ಈ 6 ನಕಲಿ ವೆಬ್‌ಸೈಟ್‌ಗಳ ಬಗ್ಗೆ ಇರಲಿ ಎಚ್ಚರ..!
ಮಗ ತೀರಿ ಹೋದನೆಂದು ತಾಯಿಗೆ ಕರೆ ಬಂದಾಗ ವಾಸ್ತವತೆಯನ್ನು ನಂಬಲು ಸಿದ್ಧರಿಲ್ಲದಿರುವುದರ ಜೊತೆ ಇತ್ತ ತನ್ನ ಪಾಸ್‌ಪೋರ್ಟ್ ಎಕ್ಸಪೈರ್ ಆಗಿರುವುದು ತಿಳಿದು ಮಹಿಳೆ ಮತ್ತಷ್ಟು ಭಯಗೊಂಡಿದ್ದರು. ಹೀಗಾಗಿ ತಮ್ಮ ಪತಿಯೊಂದಿಗೆ ಸೇರಿ ಇದಕ್ಕೊಂದು ಶೀಘ್ರ ಮಾರ್ಗ ಹುಡುಕುವ ಸಲುವಾಗಿ ಅವರು ತಮ್ಮ ಸಂಬಂಧಿಗಳು ಸ್ನೇಹಿತರು ಸೇರಿದಂತೆ ಎಲ್ಲರಿಗೂ ಈ ವಿಚಾರ ತಿಳಿಸಿ ಕನಿಷ್ಟ ಮಗನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿದ್ದಾರೆ. ಈ ದಂಪತಿಗೆ ಇಬ್ಬರಿಗೂ ವೀಸಾ ಇದ್ದರೂ ಪತ್ನಿಯ ಪಾಸ್‌ಪೋರ್ಟ್ ಅವಧಿ ಸ್ವಲ್ಪ ದಿನದ ಹಿಂದಷ್ಟೇ ಮುಗಿದು ಹೋಗಿತ್ತು.
ಆದರೆ ಇವರ ಅದೃಷ್ಟಕ್ಕೆ ಅವರ ಪರಿಚಿತರೊಬ್ಬರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗಳನ್ನು ಶೀಘ್ರವೇ ಸಂಪರ್ಕಿಸಲು ಯಶಸ್ವಿಯಾಗಿ ಇವರ ಸಮಸ್ಯೆಯನ್ನು ಅಧಿಕಾರಿಗಳಿಗೆ ವಿವರಿಸಿದ್ದಾರೆ. ಕೂಡಲೇ ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮಹಿಳೆಗೆ ಪಾಸ್‌ಪೋರ್ಟ್ ಶೀಘ್ರ ನವೀಕರಣಕ್ಕೆ ಸಮಯ ನೀಡಿ ನವೀಕರಣಗೊಳಿಸಿ ನೀಡಿದ್ದಾರೆ. ನಂತರ ಅದೇ ದಿನ ದಂಪತಿ ಮುಂದಿನ ಫ್ಲೈಟ್‌ನಲ್ಲಿ ಅಮೆರಿಕಾಗೆ ತೆರಳಿದ್ದಾರೆ.
ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಅಧಿಕಾರಿಯಾಗಿರುವ ಕೃಷ್ಣ ಎಂಬುವವರು ಈ ಬಗ್ಗೆ ಮಾಹಿತಿ ನೀಡಿದ್ದು, ಕಚೇರಿ ಅಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ಹಿರಿಯ ನಾಗರಿಕ ಜೋಡಿಗೆ ಕೂಡಲೇ ನೆರವಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರತಿ ಪಾಸ್‌ಪೋರ್ಟ್‌ಗೂ ಪೊಲೀಸ್ ವೇರಿಫಿಕೇಷನ್ ಬೇಕೇ ಬೇಕು. ಆದರೆ ಈ ವೇರಿಫಿಕೇಷನ್ ಅನ್ನು ಅವರು ಅಮೆರಿಕಾದಿಂದ ಮರಳಿದ ನಂತರ ಮಾಡುವುದಕ್ಕೆ ನಿರ್ಧರಿಸಲಾಯ್ತು ಎಂದು ಅಧಿಕಾರಿ ಹೇಳಿದ್ದಾರೆ.
ಪುಟ್ಟ ಮಗನ ಕಿತಾಪತಿಗೆ ವಿದೇಶದಲ್ಲಿ ಬಾಕಿಯಾದ ಅಪ್ಪ: ಈ ವೈರಲ್ ಫೋಟೋದ ಹಿನ್ನೆಲೆ ಗೊತ್ತಾ?