ವಿಪಕ್ಷಗಳ ಮೈತ್ರಿ ಸಭೆಗೆ ಮತ್ತೊಂದು ವಿಘ್ನ, ಬೆಂಗಳೂರು ಮೀಟಿಂಗ್ ಮುಂದೂಡಿಕೆ!

By Chethan KumarFirst Published Jul 3, 2023, 1:11 PM IST
Highlights

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ರಚನೆಯಾಗಿರುವ ವಿಪಕ್ಷಗಳ ಮೈತ್ರಿ ಹಲವು ಅಡೆ ತಡೆ ನಿವಾರಿಸಿಕೊಂಡು 2ನೇ ಸಭೆಗೆ ಸಜ್ಜಾಗಿತ್ತು. ಆದರೆ ಈ ಸಭೆಗೆ ಮತ್ತೊಂದು ವಿಘ್ನ ಎದುರಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಜುಲೈ 13-14ರಂದು ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ.
 

ನವದೆಹಲಿ(ಜು.03) ಬಿಜೆಪಿ ಹಾಗೂ ಮೋದಿ ಸೋಲಿಸಲು ಒಗ್ಗಟ್ಟಿನ ಮಂತ್ರ ಪಠಿಸಿರುವ ವಿಪಕ್ಷಗಳು ಮಹಾ ಮೈತ್ರಿ ಮಾಡಿಕೊಂಡಿದೆ. ಬಿಹಾರದಲ್ಲಿ ಮೊದಲ ಸಭೆ ನಡೆಸಲಾಗಿದ್ದು 15ಕ್ಕೂ ಹೆಚ್ಚು ಪಕ್ಷಗಳು ಪಾಲ್ಗೊಂಡಿತ್ತು. ಮಹಾ ಸಭೆಗೂ ಮೊದಲು ಹಾಗೂ ಬಳಿಕ ಮೈತ್ರಿ ಪಕ್ಷಗಳ ನಡುವೇ ಬಿರುಕು ಮೂಡಿತ್ತು. ಆದರೂ ಅಡೆ ತಡೆ ನಿವಾರಿಸಿಕೊಂಡು ಸಭೆಯಲ್ಲಿ ಪಾಲ್ಗೊಂಡಿತ್ತು.  ಇದೇ ಸಭೆಯಲ್ಲಿ ಜುಲೈ 13 ಹಾಗೂ 14 ರಂದು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಎರಡನೇ ಸಭೆಗೆ ಮತ್ತೊಂದು ವಿಘ್ನ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿಗೆ ಎನ್‌ಸಿಪಿ ಎರಡು ಹೋಳಾಗಿದೆ. ಅಜಿತ್ ಪವಾರ್ ಎನ್‌ಡಿಎ ಕೂಟ ಸೇರಿಕೊಂಡು ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಬೆಳವಣಿಗೆಯಿಂದ ವಿಪಕ್ಷಗಳ ಮೈತ್ರಿ ಸಭೆಗೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ಜುಲೈ 13 ಹಾಗೂ 14 ರಂದು ಆಯೋಜಿಸಲಾಗಿದ್ದ ಸಭೆಯನ್ನು ಮುಂದೂಡಲಾಗಿದೆ.

ಸಂಸತ್ತಿನ ಮಳೆಗಾಲದ ಅಧಿವೇಶನದ ಬಳಿಕ ಎರಡನೇ ಸಭೆ ದಿನಾಂಕ ಘೋಷಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಕರ್ನಾಟಕ ಹಾಗೂ ಬಿಹಾರದ ಮಳೆಗಾಲ ಅಧಿವೇಶನ ಕೂಡ ಆರಂಬಗೊಂಡಿದೆ. ಹೀಗಾಗಿ ಸಭೆಗೆ ಮುಂದೂಡಲಾಗಿದೆ ಎಂದು ವಿಪಕ್ಷಗಳ ಒಕ್ಕೂಟ ಹೇಳಿದೆ. ಶೀಘ್ರದಲ್ಲೇ ಮುಂದಿನ ಸಭೆ ದಿನಾಂಕ ಘೋಷಣೆ ಮಾಡಲಾಗುವುದು ಎಂದಿದೆ.

ವಿಪಕ್ಷ ಮೈತ್ರಿ ಅಗತ್ಯವಿಲ್ಲ, ಬಂಗಾಳದಲ್ಲಿ ಬಿಜೆಪಿ ಮಣಿಸಲು ನಾವೇ ಸಾಕು; ಟಿಎಂಸಿ ಬಾಂಬ್!

ವಿಪಕ್ಷಗಳ ಮೈತ್ರಿಯಲ್ಲಿ ಮೊದಲೇ ಬಿರುಕು ಮೂಡಿತ್ತು. ಸಭೆಯಲ್ಲೇ ಆಮ್ ಆದ್ಮಿ ಪಾರ್ಟಿ ಅಸಮಾಧಾನ ವ್ಯಕ್ತಪಡಿಸಿತ್ತು. ಇತ್ತ ಟಿಎಂಸಿ ಕೂಡ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟಿದೆ. ಇದೀಗ ಎನ್‌ಸಿಪಿ ಒಡೆದು ಹೋಳಾಗಿದೆ. ವಿಪಕ್ಷ ಮೈತ್ರಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಎನ್‌ಸಿಪಿಯಲ್ಲಿ ನಾಯಕರೇ ಇಲ್ಲದಾಗಿದೆ. ಎನ್‌ಸಿಪಿಯ 53 ಶಾಸಕರ ಪೈಕಿ, ಸಚಿವರಾದ 9 ಶಾಸಕರು ಸೇರಿ 13 ಶಾಸಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡು ಅಜಿತ್‌ಗೆ ಬೆಂಬಲ ಸಾರಿದ್ದಾರೆ. ಆದರೆ 53 ಶಾಸಕರ ಪೈಕಿ 40 ಜನರ ಬೆಂಬಲ ತಮಗಿದೆ ಎಂದು ಅಜಿತ್‌ ಬಣ ಹೇಳಿದ್ದು, ರಾಜ್ಯಪಾಲರಿಗೆ ಪತ್ರ ಕೂಡ ರವಾನಿಸಿದೆ ಎಂದು ಮೂಲಗಳು ಹೇಳಿವೆ.

ಹೀಗೆ ಬಂಡೆದ್ದವರಲ್ಲಿ ಶರದ್‌ ಪವಾರ್‌ ಅತ್ಯಾಪ್ತರಾದ ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್‌ ಪಟೇಲ್‌, ಛಗನ್‌ ಭುಜಬಲ್‌, ದಿಲೀಪ್‌ ವಾಲ್ಸೆ ಪಾಟೀಲ್‌ ಕೂಡ ಪ್ರಮುಖರು. ಇದು ಭಾರೀ ಅಚ್ಚರಿ ಮೂಡಿಸಿದೆ. ಬಂಡಾಯವೆದ್ದವರ ಪೈಕಿ ಅಜಿತ್‌ ಪವಾರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದರೆ, ಉಳಿದ 8 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೋದಿ ವಿರುದ್ಧ ಮಹಾಮೈತ್ರಿ ಒಂದೇ ವಾರದಲ್ಲಿ ಠುಸ್‌ಪಟಾಕಿ

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಶಾಸಕರ ಅಗತ್ಯವಿದೆ. ಬಿಜೆಪಿ (110) ಹಾಗೂ ಶಿಂಧೆ ಶಿವಸೇನೆ ಬಣ (40)ದ ಸರ್ಕಾರ 150 ಶಾಸಕರನ್ನು ಹೊಂದಿದೆ. ಇದೀಗ ಅಜಿತ್‌ ಪವಾರ್‌ ಹೇಳುತ್ತಿರುವಂತೆ 40 ಶಾಸಕರು ಬೆಂಬಲ ನೀಡಿದರೆ, ಸರ್ಕಾರದ ಬಲ 190ಕ್ಕೆ ಏರಲಿದೆ. ಪ್ರತಿಪಕ್ಷಗಳ ಬಣದಲ್ಲಿ 98 ಶಾಸಕರು ಉಳಿದಂತಾಗಲಿದೆ.
 

click me!