ಕೇಂದ್ರ ಸಂಪುಟದಲ್ಲಿ ಹಲವು ಬದಲಾವಣೆ ಜೊತೆಗೆ ವಿವಿಧ ರಾಜ್ಯಗಳಲ್ಲಿನ ಪಕ್ಷದ ಅಧ್ಯಕ್ಷ ಹುದ್ದೆ, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ಸಂಘಟನಾತ್ಮಕ ಹುದ್ದೆಗಳಲ್ಲೂ ಬದಲಾವಣೆ ಆಗಬಹುದು ಎಂದು ಮೂಲಗಳು ಹೇಳಿವೆ.
ನವದೆಹಲಿ (ಜುಲೈ 3, 2023): ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂಬ ಗುಸುಗುಸು ಎದ್ದಿರುವ ನಡುವೆಯೇ, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಂತ್ರಿಮಂಡಲದ ಸಭೆ ಕರೆದಿದ್ದಾರೆ. ಅಂದರೆ ಸಂಪುಟ/ರಾಜ್ಯ ದರ್ಜೆ ಸೇರಿ ಎಲ್ಲಾ 79 ಸಚಿವರ ಜತೆ ಸಭೆ ನಡೆಸಲಿದ್ದಾರೆ. ದಿಲ್ಲಿಯ ಪ್ರಗತಿ ಮೈದಾನದಲ್ಲಿ ಜಿ20 ಶೃಂಗ ನಡೆಯಲಿರುವ ಸ್ಥಳದಲ್ಲಿ ಸಭೆ ಕರೆಯಲಾಗಿದೆ. ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಕಾರಣ ಮಂತ್ರಿಮಂಡಲದಲ್ಲಿ ಹಲವು ಬದಲಾವಣೆ ಆಗಬಹುದು.
ಕೇಂದ್ರ ಸಂಪುಟದಲ್ಲಿ ಹಲವು ಬದಲಾವಣೆ ಜೊತೆಗೆ ವಿವಿಧ ರಾಜ್ಯಗಳಲ್ಲಿನ ಪಕ್ಷದ ಅಧ್ಯಕ್ಷ ಹುದ್ದೆ, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ಸಂಘಟನಾತ್ಮಕ ಹುದ್ದೆಗಳಲ್ಲೂ ಬದಲಾವಣೆ ಆಗಬಹುದು ಎಂದು ಮೂಲಗಳು ಹೇಳಿವೆ.
ಇದನ್ನು ಓದಿ: ಪ್ರತಿ ವರ್ಷ ಪ್ರತಿ ರೈತನಿಗೆ 50 ಸಾವಿರ, ಇದುವೇ ಮೋದಿ ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಟಾಂಗ್
ಇನ್ನೊಂದು ಮಹತ್ವದ ವಿಚಾರವೆಂದರೆ ಶರದ್ ಪವಾರ್‌ರ ಎನ್‌ಸಿಪಿ ಬಣವೊಂದು ಭಾನುವಾರ ಮಹಾರಾಷ್ಟ್ರ ಸರ್ಕಾರ ಸೇರಿಕೊಂಡಿದೆ. ಈ ಬಣದಲ್ಲಿ ಎನ್‌ಸಿಪಿ ಕಾರ್ಯಾಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಕೂಡ ಇದ್ದಾರೆ. ಅವರಿಗೆ ಕೇಂದ್ರ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಬಹುದು ಎಂಬ ಗುಲ್ಲು ಹರಡಿದೆ.
ಇತ್ತೀಚೆಗೆ ಸಿಕ್ಕಿತ್ತು ಸುಳುಹು:
ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಪ್ರಧಾನಿ ಮೋದಿ ಬುಧವಾರ ತಡರಾತ್ರಿ ಸಭೆ ನಡೆಸಿದ್ದರು. ಆಗಲೇ ಸಂಪುಟ ಪುನಾರಚನೆ ಸುಳಿವು ಸಿಕ್ಕಿತ್ತು.
ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್
ಈ ವರ್ಷಾಂತ್ಯಕ್ಕೆ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಜೊತೆಗೆ 2024ರಲ್ಲಿ ಲೋಕಸಭಾ ಚುನಾವಣೆ ಇದೆ. ಹೀಗಾಗಿ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ವಿವಿಧ ರಾಜ್ಯಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ