
ನವದೆಹಲಿ : ನಮ್ಮ ಉದ್ದೇಶಿತ ರಾಜಕೀಯ-ಮಿಲಿಟರಿ ಗುರಿ ಈಡೇರಿದ ಬಳಿಕ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಆರಂಭಿಸಿದ್ದ ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತೇ ಹೊರತು ಯಾವುದೇ ಒತ್ತಡದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಒಂದು ವೇಳೆ ಪಾಕ್ ಮತ್ತೆ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಈ ಕಾರ್ಯಾಚರಣೆ ಪುನಾರಂಭವಾಗಲಿದೆ ಎಂದೂ ಹೇಳಿದ್ದಾರೆ.
ಈ ಮೂಲಕ ಅಮೆರಿಕದ ಒತ್ತಡದಿಂದಾಗಿ ಕದನ ವಿರಾಮ ಘೋಷಿಸಲಾಯಿತು ಎಂಬ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಆಪರೇಷನ್ ಸಿಂದೂರ ವಿಚಾರವಾಗಿ ನಡೆದ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳ ಮೇಲಿನ ಮಿಲಿಟರಿ ದಾಳಿ ಪರಿಣಾಮಕಾರಿಯಾಗಿತ್ತು ಮತ್ತು ಸಮನ್ವಯದಿಂದ ಕೂಡಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಆಪರೇಷನ್ ಸಿಂದೂರದಲ್ಲಿ 9 ಉಗ್ರ ನೆಲೆಗಳು ಸಂಪೂರ್ಣವಾಗಿ ನಾಶವಾದವು ಮತ್ತು ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನಮ್ಮ ದಾಳಿಯಿಂದಾದ ಹಾನಿಗಳ ಕುರಿತು ಸೂಕ್ತ ಸಾಕ್ಷ್ಯವೂ ಇದೆ’ ಎಂದು ಸಿಂಗ್ ತಿಳಿಸಿದರು.
‘ಇಡೀ ಕಾರ್ಯಾಚರಣೆ 22 ನಿಮಿಷಕ್ಕೂ ಹೆಚ್ಚುಕಾಲದ್ದಾಗಿತ್ತು ಮತ್ತು ಈ ಕಾರ್ಯಾಚರಣೆ ಮೂಲಕ ಪಹಲ್ಗಾಂ ದಾಳಿಗೆ ಸೂಕ್ತ ಪ್ರತೀಕಾರ ತೀರಿಸಲಾಯಿತು. ಕಾರ್ಯಾಚರಣೆ ಕಾರ್ಯಗತಗೊಳಿಸುವ ಮುನ್ನ ನಮ್ಮ ಸೇನಾಪಡೆಗಳು ಅಮಾಯಕ ನಾಗರಿಕರಿಗೆ ಯಾವುದೇ ತೊಂದರೆಯಾಗದೆ, ಕೇವಲ ಉಗ್ರರಿಗಷ್ಟೇ ಗರಿಷ್ಠ ಹಾನಿಯಾಗುವ ರೀತಿಯಲ್ಲಿ ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದವು‘ ಎಂದರು.
‘ಈ ಕಾರ್ಯಾಚರಣೆಯನ್ನು ಯಾರದ್ದೋ ಒತ್ತಡದಿಂದ ಸ್ಥಗಿತಗೊಳಿಸಲಾಯಿತು ಎಂಬುದು ಆಧಾರರಹಿತ. ಪಾಕ್ ಮಿಲಿಟಿರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಸೇನೆ ಕಾರ್ಯಾಚರಣೆ ನಿಲ್ಲಿಸಿತು’ ಎಂದರು. ಈ ಮೂಲಕ ಭಾರತ-ಪಾಕ್ ಕದನ ವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪರೋಕ್ಷವಾಗಿ ತಳ್ಳಿಹಾಕಿದರು.
ನಮ್ಮ ಆಸ್ತಿಗೆ ಹಾನಿಯಾಗಿಲ್ಲ:
‘ಈ ಕಾರ್ಯಾಚರಣೆ ವೇಳೆ ನಮ್ಮ ಯಾವುದೇ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ, ಪಾಕಿಸ್ತಾನಕ್ಕೆ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದ ಅವರು, ಆಪರೇಷನ್ ಸಿಂದೂರ ಎಂಬುದು ನಮ್ಮ ಸಾಮರ್ಥ್ಯದ ಸಂಕೇತ. ನಮ್ಮ ನಾಗರಿಕರಿಗೆ ಯಾರೇ ಹಾನಿ ಮಾಡಿದರೂ ನಾವು ಸುಮ್ಮನಿರಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿತು’ ಎಂದು ಹೇಳಿದರು.-
ಪಾಕಿಸ್ತಾನದ ಎಷ್ಟು ವಿಮಾನ ನಾಶ ಮಾಡಲಾಗಿದೆ ಎಂದು ನೀವು ಕೇಳಿಲ್ಲ!
ಆಪರೇಷನ್ ಸಿಂದೂರ ಕಾರ್ಯಾಚರಣೆ ಚರ್ಚೆ ವೇಳೆ ಭಾರತದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂಬ ಪ್ರತಿಪಕ್ಷಗಳ ಕೆಲ ಸಂಸದರ ಪ್ರಶ್ನೆಗೆ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕೆಲ ಸಂಸದರು ಭಾರತದ ಎಷ್ಟು ವಿಮಾನಗಳು ನಷ್ಟವಾಗಿವೆ ಎಂದು ಕೇಳುತ್ತಿದ್ದಾರೆ. ಆದರೆ ಅವರ ಈ ಪ್ರಶ್ನೆಗಳು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿನಿಧಿಸುಂತೆ ಕಾಣುತ್ತಿಲ್ಲ. ಅದರ ಬದಲು ಅವರು, ನಮ್ಮ ಸೇನಾಪಡೆಗಳು ವೈರಿದೇಶದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಿವೆ ಎಂದು ಕೇಳಬೇಕಿತ್ತು’ ಎಂದರು.
‘ಭಾರತವು ಭಯೋತ್ಪಾದಕರ ಶಿಬಿರ ನಾಶಪಡಿಸಿದೆಯೇ ಎಂದು ಸಂಸದರು ಕೇಳಿದ್ದರೆ, ನನ್ನ ಉತ್ತರ ಹೌದು ಎಂದಾಗಿರುತ್ತಿತ್ತು. ಕಾರ್ಯಾಚರಣೆಯಲ್ಲಿ ನಮ್ಮ ವೀರಯೋಧರು ಸಾವಿಗೀಡಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರೆ, ಅದಕ್ಕೆ ನನ್ನ ಉತ್ತರ ‘ಇಲ್ಲ’ ಎಂಬುದಾಗಿದೆ’ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ