ಆಪರೇಷನ್ ಸಿಂದೂರ್‌ ಹೆಸರೇ ಸ್ಪೂರ್ತಿ: ಮೇ 7ರಂದು ಜನಿಸಿದ ಹಲವು ಮಕ್ಕಳಿಗೆ ಸಿಂದೂರದ ಹೆಸರು

Published : May 09, 2025, 03:30 PM IST
ಆಪರೇಷನ್ ಸಿಂದೂರ್‌ ಹೆಸರೇ ಸ್ಪೂರ್ತಿ: ಮೇ 7ರಂದು ಜನಿಸಿದ ಹಲವು ಮಕ್ಕಳಿಗೆ ಸಿಂದೂರದ ಹೆಸರು

ಸಾರಾಂಶ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂದೂರ್ ಭಾರತೀಯರಿಗೆ ಸ್ಫೂರ್ತಿಯಾಗಿದೆ. ಬಿಹಾರದ ದಂಪತಿಯೊಂದು ತಮ್ಮ ನವಜಾತ ಶಿಶುವಿಗೆ ಸಿಂದೂರಿ ಎಂದು ನಾಮಕರಣ ಮಾಡಿದ್ದಾರೆ. 

ಪಾಟ್ನಾ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್‌ಗೆ ಭಾರತದ ಎಲ್ಲಾ ನಾಗರಿಕರು ಸಂತೋಷ ವ್ಯಕ್ತಪಡಿಸಿದ್ದು,  ಈ ಹೆಸರೇ ಈಗ ಅನೇಕರಿಗೆ ಸ್ಪೂರ್ತಿಯಾಗಿದೆ. ನಿನ್ನೆಯಷ್ಟೇ ಈ ಆಪರೇಷನ್ ಸಿಂದೂರ್‌ಗಾಗಿ ರಿಲಯನ್ಸ್‌ ಸೇರಿದಂತೆ ಹಲವು ಉದ್ಯಮ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು ಎಂದು ವರದಿಯಾಗಿತ್ತು. ನಂತರದಲ್ಲಿ ಈ ಬಗ್ಗೆ ರಿಲಯನ್ಸ್ ಸ್ಪಷ್ಟನೆಯನ್ನು ನೀಡಿತ್ತು. ಭಾರತೀಯ ಸೇನೆಯ ಶೌರ್ಯದ ಪ್ರಬಲ ಸಂಕೇತವಾಗಿರುವ  ಮತ್ತು ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿರುವ ಆಪರೇಷನ್ ಸಿಂದೂರ್‌ ಹೆಸರನ್ನು ಟ್ರೇಡ್‌ಮಾರ್ಕ್ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈಗ ಬಿಹಾರದ ದಂಪತಿಯೂ ಕೂಡ ಈ ಹೆಸರಿನ ಬಗ್ಗೆ ತೀವ್ರ ಅಭಿಮಾನ ವ್ಯಕ್ತಪಡಿಸಿ ತಮ್ಮ ಮಗಳಿಗೆ ಸಿಂದೂರಿ ಎಂದು ನಾಮಕರಣ ಮಾಡಿದ್ದಾರೆ. 

ಆಪರೇಷನ್ ಸಿಂದೂರಿ ಹೆಸರಿನಲ್ಲಿ ಭಾರತದ ಭದ್ರತಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದರು. ಈ ಕಾರ್ಯಾಚರಣೆಗೆ ಇಟ್ಟ ಹೆಸರೇ ಈಗ ಎಲ್ಲರ ಸೆಳೆಯುತ್ತಿದೆ. ಈಗ ಬಿಹಾರದ ದಂಪತಿಯಾದ 30 ವರ್ಷದ ಸಂತೋಷ್ ಕುಮಾರ್ ಮಂಡಲ್  ಹಾಗೂ ರಾಕಿ ಕುಮಾರಿ ಎಂಬುವವರು ತಮ್ಮ ಮಗಳಿಗೆ ಸಿಂದೂರಿ ಎಂದು ನಾಮಕರಣ ಮಾಡಿದ್ದಾರೆ.  ಈ ದಂಪತಿ ಬಿಹಾರದ ಕಾತಿಹಾರ್ ಜಿಲ್ಲೆಯ ಕುರ್ಸೆಲಾ ಬ್ಲಾಕ್‌ನ ಬಾಲ್ತಿ ಮಹೇಶ್‌ಪುರ್‌ ನಿವಾಸಿಗಳಾಗಿದ್ದಾರೆ. ಸೇನೆ ಪಾಕ್ ಉಗ್ರರನ್ನು ಗುರಿಯಾಗಿಸಿ  ದಾಳಿ ನಡೆಸಿದ ದಿನದಂತೆ ಅವರಿಗೆ ಹೆಣ್ಣು ಮಗು ಜನಿಸಿತ್ತು.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ನಡೆಸಿದ ದಿನವೇ ನಮ್ಮ ಮಗು ಜನಿಸಿತು. ಸೇನೆಯ ಈ ಕಾರ್ಯದಿಂದ  ಇಡೀ ದೇಶದ ಜನರಿಗೆ ಇದು ಹೆಮ್ಮೆಯ ವಿಚಾರವಾಗಿದೆ. ಹೀಗಾಗಿ ಮೇ 7 ರಂದು ಜನಿಸಿದ ತಮ್ಮ 2ನೇ ಮಗಳಿಗೆ ಸಿಂದೂರಿ ಎಂದು ಹೆಸರಿಟ್ಟಿದ್ದಾಗಿ ಸಂತೋಷ್ ಹೇಳಿದ್ದಾರೆ. 

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಂತೋಷ್ ಅವರ ಪತ್ನಿ ರಾಖಿಯನ್ನು ಮೇ 7 ರಂದು ಮುಂಜಾನೆ ಕತಿಹಾರ್ ಸೇವಾ ಸದನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಿ ಸೆಕ್ಷನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ನವಜಾತ ಶಿಶುವಿಗೆ ಈ ರೀತಿ ಹೆಸರಿಡಲು ಪ್ರೇರಣೆ ಏನು ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಸಂತೋಷ್, ಪಹಲ್ಗಾಮ್ ಹತ್ಯಾಕಾಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ಬೆಳಗಿನ ಜಾವ ನಡೆಸಿದ ವಾಯುದಾಳಿಯ ಬಗ್ಗೆ ನನಗೆ ತಿಳಿಯಿತು. ಅದು ನನ್ನೊಳಗೆ ದೇಶಭಕ್ತಿಯ ಭಾವನೆಯನ್ನು ತುಂಬಿತು.

ಹೀಗಾಗಿ ನನ್ನ ನವಜಾತ ಮಗಳಿಗೆ ಆ ಹೆಸರಿಡಲು ನಿರ್ಧರಿಸಿದೆ.  ಹಾಗೂ ನಾನು ಆ ವಿಚಾರವನ್ನು ನನ್ನ ಹೆಂಡತಿಯೊಂದಿಗೆ ಹಂಚಿಕೊಂಡೆ, ಅವಳು ಕೂಡ ಅದನ್ನು ಒಪ್ಪಿದಳು. ಆದ್ದರಿಂದ ಮಗುವಿಗೆ ಸಿಂಧೂರಿ ಎಂದು ಹೆಸರಿಡಲಾಯಿತು. ಮುಗ್ಧ ಜನರ ಸಾವಿಗೆ ನಾವು ಸೇಡು ತೀರಿಸಿಕೊಂಡ ಮೇ 7 ಅನ್ನು ರಾಷ್ಟ್ರವು ಎಂದಿಗೂ ಮರೆಯುವುದಿಲ್ಲ. ನಾವು ಪ್ರತಿ ವರ್ಷ 'ಆಪರೇಷನ್ ಸಿಂಧೂರ್' ಜೊತೆಗೆ ಸಿಂಧೂರಿ ಜನ್ಮದಿನವನ್ನು ಆಚರಿಸುತ್ತೇವೆ ಎಂದು ಅವರು ಹೇಳಿದರು. 

ಬರೀ ಇಷ್ಟೇ ಅಲ್ಲ, ಮುಂದೆ ಮಗು ಸಿಂದೂರಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಗೆ ಸೇರಲು ಆಕೆಯನ್ನು ಪ್ರೋತ್ಸಾಹಿಸಲು ಬಯಸಿರುವುದಾಗಿ ಈ ದಂಪತಿ ಹೇಳಿದ್ದಾರೆ. ನಾವು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೂ, ನಮ್ಮ ಕನಸನ್ನು ನನಸಾಗಿಸಲು ನಾವು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ಬೆಂಬಲವನ್ನು ಯಾವಾಗಲೂ ಶ್ಲಾಘಿಸುತ್ತೇವೆ. ಈ ಕುಟುಂಬವು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದೆ ಅದು ಜೀವನೋಪಾಯದ ಏಕೈಕ ಮಾರ್ಗವಾಗಿದೆ. ಬಾಲ್ತಿ ಮಹೇಶಪುರ ಗ್ರಾಮದ ಬಹುಪಾಲು ನಿವಾಸಿಗಳಿಗೆ ಕೃಷಿಯೇ ಜೀವನೋಪಾಯದ ಮೂಲವಾಗಿದೆ ಎಂದು ಸಂತೋಷ್‌  ಹೇಳಿದ್ದಾರೆ.

ಹಾಗೆಯೇ ಕೇವಲ ಈ ದಂಪತಿ ಮಾತ್ರವಲ್ಲ, ಇನ್ನೂ ಅನೇಕ ಕುಟುಂಬಗಳಿಗೆ ಈ ಆಪರೇಷನ್ ಸಿಂದೂರ್ ಹೆಸರು ಸ್ಪೂರ್ತಿ ನೀಡಿದೆ.  ಹಾಗೆಯೇ ಮುಜಫರ್‌ಪುರ ಜಿಲ್ಲೆಯ ಕನ್ಹಾರ ಗ್ರಾಮದ ನಿವಾಸಿ ಹಿಮಾಂಶು ರಾಜ್ ಎಂಬುವವರು ಕೂಡ ತಮ್ಮ ಮಗಳಿಗೆ ಸಿಂದೂರಿ ಎಂದು ಹೆಸರಿಟ್ಟಿದ್ದಾರೆ. ಹಾಗೆಯೇ ಮುಜಫರ್‌ಪುರದ ಜಾಫರ್‌ಪುರದ ಮೂಲದ ಪವನ್ ಸೋನಿ ತಮ್ಮ ನವಜಾತ ಪುತ್ರನಿಗೆ ಸಿಂದೂರ್ ಎಂದು ಹೆಸರಿಟ್ಟಿದ್ದಾರೆ. ಹಾಗೆಯೇ ಮುಜಫರ್‌ಪುರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೇ 7 ರಂದು ಶಿಶುಪಾಲನಾ ಕೇಂದ್ರದಲ್ಲಿ 12 ಮಕ್ಕಳು ಜನಿಸಿದ್ದು, ಆ ಕೇಂದ್ರಕ್ಕೆ ನಂತರ ಆಪರೇಷನ್ ಸಿಂದೂರ್ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..