
ನವದೆಹಲಿ (ಏ.25): ಅಮೆರಿಕ ಹಾಗೂ ಸೌದಿ ಅರೇಬಿಯಾ ಸಂಘಟಿತವಾಗಿ ಮಾಡಿದ ಪ್ರಯತ್ನದಿಂದಾಗಿ ಸೂಡಾನ್‌ನಲ್ಲಿ ಅಂತರ್ಯುದ್ಧ ಮುಂದಿನ 72 ಗಂಟೆಗಳ ಕಾಲ ನಿಲ್ಲಲಿದೆ. ಕದನ ವಿರಾಮ ಘೋಷಣೆಯಾದ ಬೆನ್ನಲ್ಲಿಯೇ ಭಾರತ ಕಾರ್ಯಪ್ರವೃತ್ತವಾಗಿದ್ದು, ಆಪರೇಷನ್ ಕಾವೇರಿ ಹೆಸರಿನಲ್ಲಿ 4 ಸಾವಿರ ಭಾರತೀಯರನ್ನು ಸಂಘರ್ಷಪೀಡಿತ ಸೂಡಾನ್‌ನಿಂದ ಹೊರತರಲಿದೆ. ಇದರ ಮೊದಲ ಹಂತವಾಗಿ 278 ಜನರನ್ನು ದೇಶಕ್ಕೆ ವಾಪಾಸ್ ಕರೆತರಲಾಗುತ್ತಿದೆ. ನವದೆಹಲಿಯಲ್ಲಿ ಈ ಕುರಿತಾಗಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಮೊದಲ ಬ್ಯಾಚ್‌ನಲ್ಲಿ, 278 ಭಾರತೀಯರನ್ನು ದೇಶಕ್ಕೆ ಮರಳಿ ಕರೆತರಲಾಗುತ್ತಿದೆ. ಇದಕ್ಕಾಗಿ ನೌಕಾಪಡೆಯ ಹಡಗು ಐಎನ್‌ಎಸ್ ಸುಮೇಧಾ ಪೋರ್ಟ್ ಸೂಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ತೆರಳಿದೆ. ಅಲ್ಲಿಂದ ಈ ನಾಗರಿಕರನ್ನು ಏರ್ ಲಿಫ್ಟ್ ಮಾಡಲಾಗುತ್ತದೆ ಎಂದಿದ್ದಾರೆ.ಸುಡಾನ್‌ನಲ್ಲಿ ಅರೆಸೈನಿಕ ಪಡೆ (ಆರ್‌ಎಸ್‌ಎಫ್) ಮತ್ತು ಸೇನೆಯ ನಡುವಿನ ಯುದ್ಧ ಕಳೆದ 10 ದಿನಗಳಿಂದ ನಡೆಯುತ್ತಿದೆ. ಎರಡೂ ಪಡೆಗಳು ಕೂಡ ದೇಶದಲ್ಲಿ ಅಧಿಕಾರ ಹಿಡಿಯಲು ಬಯಸುತ್ತಿದ್ದು, ಈವರೆಗೂ ಯುದ್ಧದಲ್ಲಿ 416 ಜನರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ.
ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಹಡಗಿನಲ್ಲಿ ಜನರು ಕುಳಿತಿರುವ ಚಿತ್ರ ಕೂಡ ಬಿತ್ತರವಾಗಿದೆ. ಅವರನ್ನು ಮೊದಲು ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ಕರೆತರಲಾಗುತ್ತದೆ. ಮತ್ತೆ ಅಲ್ಲಿಂದ ಏರ್ ಲಿಫ್ಟ್ ಮಾಡಲಾಗುವುದು. ಪೋರ್ಟ್ ಸುಡಾನ್‌ನಲ್ಲಿ ಐಎನ್‌ಎಸ್ ಸುಮೇಧಾ ಹತ್ತಲು ಜನರು ತಯಾರಿ ನಡೆಸುತ್ತಿರುವ ಚಿತ್ರಗಳನ್ನೂ ಕೂಡ ಪ್ರಕಟಿಸಲಾಗಿದೆ
ಎರಡು ದಿನಗಳ ಕಾಲ ನಡೆದ ಮಾತುಕತೆಯ ಫಲವೇ ಕದನ ವಿರಾಮ: ಸತತ ಎರಡು ದಿನಗಳ ಕಾಲ ನಡೆದ ಮಾತುಕತೆಯ ಫಲವೇ ಈ ಕದನ ವಿರಾಮ. ಈ 72 ಗಂಟೆಗಳಲ್ಲಿ ಉಭಯ ಪಕ್ಷಗಳ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸಲಾಗುವುದು. ಅದೇ ಸಮಯದಲ್ಲಿ, ಉಳಿದ ದೇಶಗಳು ತಮ್ಮ ನಾಗರಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಯುಎನ್ ಪ್ರಕಾರ, ಈ ಹೋರಾಟದಲ್ಲಿ ಇದುವರೆಗೆ 427 ಜನರು ಸಾವನ್ನಪ್ಪಿದ್ದಾರೆ ಮತ್ತು 3700 ಜನರು ಗಾಯಗೊಂಡಿದ್ದಾರೆ.
ಲಿಖಿತ ಪ್ರಕಟಣೆಯಲ್ಲಿ, ಸುಡಾನ್‌ನಿಂದ ಜನರನ್ನು ಸ್ಥಳಾಂತರಿಸುವ ಹೋರಾಟ ಮತ್ತು ನಾಗರಿಕರ ಸಲುವಾಗಿ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಆರ್‌ಎಸ್‌ಎಫ್ ತಿಳಿಸಿದೆ. ಈ ಸಮಯದಲ್ಲಿ ಜನರು ಆಸ್ಪತ್ರೆಗಳು ಮತ್ತು ಅಗತ್ಯವಿರುವ ಸ್ಥಳಗಳಿಗೆ ಭೇಟಿ ನೀಡಬಹುದು. ಏಪ್ರಿಲ್ 19 ರಂದು, ಎರಡೂ ಕಡೆಯವರು ಕದನ ವಿರಾಮವನ್ನು ಘೋಷಣೆ ಮಾಡಿದ್ದರು. ಇದರ ಹೊರತಾಗಿಯೂ ದಾಳಿಗಳು ಮುಂದುವರಿದವು. ಸುಡಾನ್‌ನಿಂದ ಹೊರಗಿನವರನ್ನು ಕರೆದೊಯ್ಯುವ ಪಡೆಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿದರು. ರಾತ್ರಿಯಿಂದ ಪ್ರಾರಂಭವಾದ ಕದನ ವಿರಾಮದಿಂದಾಗಿ ಅನೇಕ ದೇಶಗಳು ತಮ್ಮ ಜನರನ್ನು ಸ್ಥಳಾಂತರಿಸುವ ಕೆಲಸವನ್ನು ವೇಗವಾಗಿ ಮಾಡಲು ಸಾಧ್ಯವಾಗಿದೆ. ಇಲ್ಲಿಯವರೆಗೆ ಸ್ಪೇನ್, ಜೋರ್ಡಾನ್, ಇಟಲಿ, ಫ್ರಾನ್ಸ್, ಡೆನ್ಮಾರ್ಕ್ ಮಾತ್ರ ತಮ್ಮ ಜನರನ್ನು ಸುಡಾನ್‌ನಿಂದ ಸ್ಥಳಾಂತರಿಸಲು ಸಾಧ್ಯವಾಗಿದೆ.
ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಶನ್ ಕಾವೇರಿ ಆರಂಭ!
ರಾಜ್ಯದ ನಾಗರೀಕರಿಗೆ ಸಾರಿಗೆ ವ್ಯವಸ್ಥೆ: ಸುಡಾನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವಂತ ಸ್ಥಳಗಳಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ರಾಜ್ಯದಲ್ಲಿನಿವಾಸಿಗಳು ಯಾವ ಊರಿನವರೆಂದು ತಿಳಿದು ಸ್ವಂತ ಸ್ಥಳಗಳಿಗೆ ತಲುಪಿಸಲು ನೋಡಲ್ ಅಧಿಕಾರಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸುಡಾನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ಸು ಕರೆತರಲು ಭಾರತ ಸರ್ಕಾರ ನಿರ್ಧಾರ ಮಾಡಿದೆ.
ಸೂಡಾನ್‌ನಲ್ಲಿ ಕನ್ನಡಿಗರ ರಕ್ಷಣೆಗೆ ಡೀಸೆಲ್ ಕೊರತೆ!
ಇದರ ಬೆನ್ನಲ್ಲೇ ನಾಗರಿಕರನ್ನು ಏರ್‌ಪೋರ್ಟ್‌ನಿಂದ ಅವರ ಸ್ವಂತ ಸ್ಥಳಗಳಿಗೆ ನಿಗಮದ ಬಸ್ಸುಗಳಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಎಸ್ ಅವರನ್ನ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸುಡಾನ್‌ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ವಾಸಿಗಳು ಬೆಂಗಳೂರು, ವಿಮಾನ ನಿಲ್ದಾಣಕ್ಕೆ ಆಗಮಿಸಿದಲ್ಲಿ ಅಲ್ಲಿಂದ ಅವರ ಸ್ವಂತ ವಾಸಸ್ಥಳಗಳಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ