Russia Ukraine War: ಒಂದ್ಹೊತ್ತು ಊಟ..! ಕುಡಿಯೋಕೆ ಮಂಜುಗಡ್ಡೆ ನೀರು..!: ಸುಮಿಯಿಂದ ಮರಳಿದ ಕನ್ನಡಿಗರ ಅನುಭವ!

Published : Mar 12, 2022, 10:48 AM IST
Russia Ukraine War: ಒಂದ್ಹೊತ್ತು ಊಟ..! ಕುಡಿಯೋಕೆ ಮಂಜುಗಡ್ಡೆ ನೀರು..!: ಸುಮಿಯಿಂದ ಮರಳಿದ ಕನ್ನಡಿಗರ ಅನುಭವ!

ಸಾರಾಂಶ

*ಐದಾರು ದಿನದ ಬಳಿಕ ನೀರು ಸಿಗುವುದೂ ಕಷ್ಟವಾಯ್ತು: ಹಾಸನದ ಸಂಜನಾ *ವಿದೇಶಾಂಗ ಸಚಿವಾಲಯ ಆರಂಭಿಸಿದ್ದ ದೂರವಾಣಿ ಸಂಖ್ಯೆಗೆ ಕರೆ ಕಿರಿಕಿರಿ  

ನವದೆಹಲಿ (ಮಾ. 12): ‘ಒಂದ್ಹೊತ್ತು ಊಟ..! ಕುಡಿಯೋಕೆ ಮಂಜುಗಡ್ಡೆಯ ನೀರು..!’ ಇದು ಉಕ್ರೇನಿನ ಸುಮಿಯಲ್ಲಿ ಸಿಕ್ಕಿಕೊಂಡಿದ್ದ ಕನ್ನಡಿಗರ ಸ್ಥಿತಿ. ಆಪರೇಷನ್‌ ಗಂಗಾ ಮಿಷನ್‌ ಅಡಿ ಏರ್‌ಲಿಫ್ಟ್‌ ಆಗಿ ದೆಹಲಿ ತಲುಪಿದ ಕನ್ನಡತಿ ಹಾಸನ ಮೂಲದ ಸಂಜನಾ, ‘ಕನ್ನಡಪ್ರಭ’ ಜೊತೆ ಮಾತಾಡುತ್ತಾ ಬಾಂಬ್‌ ದಾಳಿಯಲ್ಲಿ ನಲುಗಿದ ದಿನಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧ ಶುರುವಾದ ಕೂಡಲೇ ನಾವು ಕಾರ್ಕೀವ್‌ ನಗರ ತೊರೆದೆವು. ಕೆಲವು ಉತ್ತರ ಭಾರತದ ಸ್ನೇಹಿತರ ಜೊತೆ ರಷ್ಯಾ ಗಡಿ ಮಾರ್ಗವಾಗಿ ಹೋಗಲು ಸುಮಿಗೆ ಹೋದೆವು. ಅದರೇ ಅಲ್ಲಿ ಯುದ್ಧ ಭೀಕರವಾಗಿ ಶುರುವಾಗಿತು. ನಮ್ಮ ಏಜೆನ್ಸಿಯವರ ಸಹಕಾರದಿಂದ ಸುಮಿಯಲ್ಲಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಉಳಿದುಕೊಂಡೆವು.

ಮೊದಲು ಐದಾರು ದಿನ ಸಮಸ್ಯೆಗಳು ಕಾಣಲಿಲ್ಲ. ಆದರೆ ದಿನ ಕಳೆದಂತೆ ಕುಡಿಯಲು ನೀರು ಕೂಡ ಸಿಗುವುದು ಕಷ್ಟವಾಯ್ತು. ಇದು ಉಕ್ರೇನ್‌ನಲ್ಲಿ ದಟ್ಟವಾಗಿ ಮಂಜು ಬೀಳುವ ಕಾಲವಾಗಿದ್ದರಿಂದ ಬೇರೆ ದಾರಿ ಇಲ್ಲದೆ ಅಲ್ಲಿದ್ದ ಮಂಜುಗಡ್ಡೆಗಳನ್ನು ನೀರಾಗಿ ಪರಿವರ್ತಿಸಿಕೊಂಡು ಕುಡಿದು ದಿನ ಕಳೆದೆವು.

ಇನ್ನು ಊಟ ಕೂಡ ಅಷ್ಟೇ ದಿನಕ್ಕೆ ಒಂದೇ ಹೊತ್ತು ಎನ್ನುವಂತಾಗಿತ್ತು. ಅಲ್ಲಿದ್ದ 15 ದಿನವೂ ಬರೀ ಬಾಂಬ್‌ ಶಬ್ದ. ಏಜೆನ್ಸಿಯವರು ಅಲರ್ಟ್‌ ಮಾಡಿದಾಗ ಬಂಕರ್‌ಗೆ ಹೋಗುತ್ತಿದ್ದೆವು. ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗದಲ್ಲಿ ಸುಮಿಯಿಂದ ಗಡಿ ತಲುಪಿದೆವು. ಬಳಿಕ ನಮ್ಮ ರಾಯಭಾರಿ ಕಚೇರಿಯ ಅಧಿಕಾರಿಗಳು ಚೆನ್ನಾಗಿ ನೋಡಿಕೊಂಡರು ಎಂದು ಸಂಜನಾ ವಿವರಿಸಿದರು.

ಇದನ್ನೂ ಓದಿ: ಉಕ್ರೇನ್‌ ರಾಜಧಾನಿ ವಶಕ್ಕೆ ರಷ್ಯಾ ಸಜ್ಜು; ಕೀವ್‌ ನಗರದ ಸುತ್ತ ಭಾರಿ ಸೇನೆ ಜಮಾವಣೆ!

ಕ್ಯಾರೇ ಎನ್ನಲಿಲ್ಲ ಏಜೆನ್ಸಿಯವರು:  ಸಿ-17 ಏರ್‌ ಬಸ್‌ ಮೂಲಕ ದೆಹಲಿ ತಲುಪಿದ ಆರು ಮಂದಿ ಕನ್ನಡಿಗರು, ಏಜೆನ್ಸಿಯವರಿಗೆ ಹಿಡಿಶಾಪ ಹಾಕಿದರು. ನಮಗೆ ಇದು ಮೊದಲು ವರ್ಷ. ಎಲ್ಲವೂ ಹೊಸದು. ಕನಿಷ್ಠ ನೀವು ಹೇಗಿದ್ದೀರಿ ಅಂತಲೂ ವಿಚಾರಿಸಲಿಲ್ಲ. ಬೆಂಗಳೂರಿನಿಂದ ಹಿಡಿದು ಉಕ್ರೇನ್‌ ತನಕ ನಮ್ಮನ್ನು ಕರೆದುಕೊಂಡ ಹೋದ ಏಜೆನ್ಸಿಯವರು ಇದ್ದಾರೆ.

ಪ್ರತಿ ಹಂತದಲ್ಲೂ ದುಡ್ಡು, ದುಡ್ಡು ಅಂತ ಕಟ್ಟಿಸಿಕೊಂಡಿದ್ದರು. ಯುದ್ಧದ ವೇಳೆ ಕನಿಷ್ಠ ಸೌಜನ್ಯತೆ ತೋರಲಿಲ್ಲ. ಗಡಿಯಿಂದ ನಮ್ಮ ರಾಯಭಾರಿ ಕಚೇರಿಯ ಅಧಿಕಾರಿಗಳು ನಮ್ಮನ್ನು ಸುರಕ್ಷಿತವಾಗಿ ದೆಹಲಿ ತಲುಪುವಂತೆ ನೋಡಿಕೊಂಡರು ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಉಕ್ರೇನ್‌ ಹೆಲ್ಪ್‌ಲೈನ್‌ಗೆ ಕ್ರೆಡಿಟ್‌ ಕಾರ್ಡ್‌, ಸಾಲದ ಏಜೆಂಟ್‌ ಹಾವಳಿ: ಯುದ್ಧಪೀಡಿತ ಉಕ್ರೇನಿನಲ್ಲಿ ಸಿಲುಕಿದ ಭಾರತೀಯರನ್ನು ತೆರವುಗೊಳಿಸಲು ವಿದೇಶಾಂಗ ಸಚಿವಾಲಯವು ಆರಂಭಿಸಿದ ಸಹಾಯವಾಣಿಗಳಿಗೆ ಕ್ರೆಡಿಟ್‌ ಕಾರ್ಡ್‌ ಮಾರಾಟಗಾರರು, ಸಾಲದ ಏಜೆಂಟರಿಂದ ವಿಪರೀತ ಕಾಲ್‌ಗಳು ಬರುತ್ತಿದ್ದವು ಎಂಬ ವಿಷಯ ಬೆಳಕಿಗೆ ಬಂದಿದೆ.

ಭಾರತೀಯ ವಿದ್ಯಾರ್ಥಿಗಳ ನೆರವಿಗಾಗಿ ಆರಂಭಿಸಿದ ಸಹಾಯವಾಣಿಯಲ್ಲಿ ಭಾರೀ ಸಂಖ್ಯೆಯಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟರು, ಕ್ರೆಡಿಟ್‌ ಕಾರ್ಡ್‌ ಮಾರಾಟಗಾರರು, ವೈಯಕ್ತಿಕ ಸಾಲದ ಮಾರಾಟಗಾರರು, ಮಾತ್ರವಲ್ಲದೇ ಜ್ಯೋತಿಷಿಗಳ ಸಲಹೆ ಕೇಳಲು ಜನರು ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ಉಕ್ರೇನ್‌ ಮೇಲೆ ವಿಷಾನಿಲ ದಾಳಿಗೆ ರಷ್ಯಾ ರಹಸ್ಯ ಯೋಜನೆ?

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತುರ್ತು ಸಂಖ್ಯೆಗಳನ್ನು ಟೀವಿ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ತೋರಿಸಲಾಗಿತ್ತು. ಸಾಮಾನ್ಯವಾಗಿ ಜಾಹೀರಾತುಗಳಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಸಂಪರ್ಕಿಸಲು ನೀಡುವ ಸಂಖ್ಯೆಯೆಂದು ತಿಳಿದ ಹಲವರು ವಿವಾಹದ ವಿಚಾರ, ಉದ್ಯೋಗ ಮೊದಲಾದ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ತಿಳಿದುಕೊಳ್ಳಲು ಜ್ಯೋತಿಷಿಗಳ ಬದಲಾಗಿ ವಿದೇಶಾಂಗ ಸಚಿವಾಲಯದ ಕಂಟ್ರೋಲ್‌ ರೂಮಿಗೆ ಕರೆಮಾಡಿದ್ದಾರೆ. 

ಅಷ್ಟೇ ಅಲ್ಲದೇ ನೊಯ್ಡಾ ಹಾಗೂ ಗ್ರೇಟರ್‌ ನೊಯ್ಡಾದ ವಸತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ರಿಯಲ್‌ ಎಸ್ಟೇಟ್‌ ಏಜೆಂಟರ ಬದಲಾಗಿ ಸಹಾಯವಾಣಿಗಳಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಉಕ್ರೇನಿನಲ್ಲಿ ಸಿಲುಕಿದವರನ್ನು ಆಪರೇಶನ್‌ ಗಂಗಾ ಮೂಲಕ ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬಂದಿದ್ದಕ್ಕಾಗಿ ಧನ್ಯವಾದ ಸಲ್ಲಿಸಲು ಹಲವರು ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆ.16ರಂದು ಆರಂಭಿಸಲಾಗಿದ್ದ ಹೆಲ್ಪ್‌ಲೈನ್‌ಗೆ 16000ಕ್ಕೂ ಹೆಚ್ಚು ಕರೆ ಮಾಡಲಾಗಿತ್ತು. ಜೊತೆಗೆ 9000ಕ್ಕೂ ಹೆಚ್ಚು ಇ ಮೇಲ್‌ಗಳನ್ನು ರವಾನಿಸಲಾಗಿತ್ತು.

ಉಕ್ರೇನ್‌ನಿಂದ 45 ಲಕ್ಷ ಜನರ ವಲಸೆ ಆತಂಕ: ರಷ್ಯಾ ಯುದ್ಧ ಆರಂಭಿಸಿದ ಬಳಿಕ ಉಕ್ರೇನ್‌ನಿಂದ ಕನಿಷ್ಠ 25 ಲಕ್ಷ ಜನರು ದೇಶ ತೊರೆದು ವಲಸೆ ಹೋಗಿದ್ದಾರೆ ಎಂದು ಅಂತರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ. ಅಂಕಿ ಅಂಶಗಳ ಪ್ರಕಾರ ಯುದ್ಧ ಪ್ರಾರಂಭವಾದಗಿನಿಂದ ಇದುವರೆಗೆ 25 ಲಕ್ಷ ದೇಶ ತೊರೆದಿದ್ದು, ಈ ಪೈಕಿ 15 ಲಕ್ಷ ಜನರು ನೆರೆಯ ಪೋಲೆಂಡ್‌ಗೆ ಮತ್ತು ಉಳಿದ 10 ಲಕ್ಷ ಜನರು ಅಕ್ಕಪಕ್ಕದ ದೇಶಗಳಿಗೆ ಮೊರೆ ಹೋಗಿದ್ದಾರೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ