Assembly Elections Result: ಇವಿಎಂ ದುರ್ಬಳಕೆಯಾಗಿದೆ: ವಿಧಿವಿಜ್ಞಾನ ಪರೀಕ್ಷೆ ನಡೆಯಲಿ: ಮಮತಾ ಬ್ಯಾನರ್ಜಿ!

By Kannadaprabha NewsFirst Published Mar 12, 2022, 10:19 AM IST
Highlights

ಜಿದ್ದಾಜಿದ್ದಿಯಿಂದ ಕೂಡಿದ್ದ ಹಾಗೂ ಲೋಕಸಭೆ ಚುನಾವಣೆಯ ಸೆಮಿಫೈನಲ್‌ನಂತೆ ಬಿಂಬಿತವಾಗಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 
 

ನವದೆಹಲಿ (ಮಾ. 12): ಜಿದ್ದಾಜಿದ್ದಿಯಿಂದ ಕೂಡಿದ್ದ ಹಾಗೂ ಲೋಕಸಭೆ ಚುನಾವಣೆಯ ಸೆಮಿಫೈನಲ್‌ನಂತೆ ಬಿಂಬಿತವಾಗಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಚುನಾವಣೆ ಎದುರಿಸಿದ 5 ರಾಜ್ಯಗಳ ಪೈಕಿ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಆ ನಾಲ್ಕೂ ರಾಜ್ಯಗಳಲ್ಲೂ ವಿಜಯ ಪತಾಕೆ ಹಾರಿಸಿದೆ. ಇದರೊಂದಿಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹವಾ ಇನ್ನೂ ಇದೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.

ವಿಧಿವಿಜ್ಞಾನ ಪರೀಕ್ಷೆ ನಡೆಯಲಿ: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಶೇಕಡಾವಾರು ಪ್ರಮಾಣ ಶೇ.20 ರಿಂದ ಶೇ.37ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಅಖೀಲೇಶ್‌ ಸರ್ಕಾರ ರಚಿಸಿದಾಗ ಮತಗಳಿಕೆ ಪ್ರಮಾಣ ಶೇ.36 ರಷ್ಟಿತ್ತು. ಇದು ಇವಿಎಂ ದುರ್ಬಳಕೆಯಾಗಿದ್ದನ್ನು ಸೂಚಿಸುತ್ತದೆ. ಹೀಗಾಗಿ ಅಖೀಲೇಶ್‌ ಯಾದವ್‌ ನಿರಾಶರಾಗದೇ ಎವಿಎಂ ಯಂತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕು.
ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

ಎಸ್‌ಪಿ ಸೀಟಲ್ಲಿ ಹೆಚ್ಚಳ: ಸಮಾಜವಾದಿ ಪಕ್ಷದ ಸ್ಥಾನಗಳನ್ನು ಎರಡುವರೆ ಪಟ್ಟು ಹೆಚ್ಚಿಸಿದಕ್ಕಾಗಿ ಉತ್ತರಪ್ರದೇಶದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಬಿಜೆಪಿಯ ಸೀಟುಗಳೂ ಕಡಿತವಾಗುತ್ತಿರುವುದನ್ನುನಾವು ತೋರಿಸಿಕೊಟ್ಟಿದ್ದೇವೆ. ಬಿಜೆಪಿ ಸೀಟುಗಳ ಕಡಿತವು ಇದೇ ರೀತಿ ಮುಂದುವರೆಯಲಿದೆ. 
-ಅಖಿಲೇಶ್‌ ಯಾದವ, ಎಸ್‌ಪಿ ನಾಯಕ

ಇದನ್ನೂ ಓದಿ: ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

2024ರಲ್ಲೇ ನೈಜ ಹೋರಾಟ: ಭಾರತಕ್ಕಾಗಿ ನಿಜವಾದ ಚುನಾವಣಾ ಹೋರಾಟವು 2024ರಲ್ಲಿ ನಡೆಯಲಿದೆ. ಯಾವುದೇ ರಾಜ್ಯ ಚುನಾವಣೆ ಫಲಿತಾಂಶದಿಂದ ಅದು ನಿರ್ಧರಿಸಲ್ಪಡುವುದಿಲ್ಲ. ಕೇವಲ ವಿರೋಧಿಗಳ ಮೇಲೆ ಮಾನಸಿಕ ಪ್ರಾಬಲ್ಯ ಸ್ಥಾಪಿಸಲು ರಾಜ್ಯ ಚುನಾವಣೆ ಗೆಲುವಿನ ಸುತ್ತ ಉನ್ಮಾದ ಸೃಷ್ಟಿಸಲಾಗುತ್ತಿದೆ. ಈ ಸುಳ್ಳು ನಿರೂಪಣೆಯ ಭಾಗವಾಗಬೇಡಿ.
-ಪ್ರಶಾಂತ ಕಿಶೋರ್‌, ಚುನಾವಣಾ ತಂತ್ರಗಾರ

ಹೊಸ ವ್ಯವಸ್ಥೆಗೆ ನಾಂದಿ: ಜನತೆಯ ಧ್ವನಿಯು ದೇವರ ಧ್ವನಿಯಾಗಿದೆ. ನಾನಿದನ್ನು ಅರ್ಥೈಸಿಕೊಂಡಿದ್ದೇನೆ. ಪಂಜಾಬಿನ ಜನತೆಯು ಕೈಗೊಂಡ ನಿರ್ಣಯವು ಉತ್ತಮವಾಗಿದ್ದು, ಹೊಸ ವ್ಯವಸ್ಥೆಗೆ ನಾಂದಿ ಹಾಡಲಿದೆ. ಜನರು ಬದಲಾವಣೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
-ನವಜೋತ್‌ ಸಿಧು, ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ

ಮತ್ತೆ ವಿಶ್ವಾಸ ಗಳಿಸುತ್ತೇವೆ: ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ ಪಕ್ಷದ ಏಳು ಬೀಳನ್ನು ಕಂಡಿದ್ದೇನೆ. ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗೆ ದುರದೃಷ್ಟಕರವಾಗಿದೆ. ಆದರೂ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಹೋರಾಡಬಲ್ಲ ಏಕೈಕ ಪಕ್ಷ ನಾವಾಗಿದ್ದೇವೆ. ಜನರ ವಿಶ್ವಾಸವನ್ನು ಮರಳಿ ಗಳಿಸುತ್ತೇವೆ.
-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿಪಕ್ಷ ನಾಯಕ

ಇದನ್ನೂ ಓದಿ: ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನವೂ ‘ಕೈ’ ತಪ್ಪುವ ಆತಂಕ!

‘ಬಿಜೆಪಿ ಬಿ ಟೀಂ’ ಸೋಲಿಗೆ ಕಾರಣ:  ‘ಮಾಧ್ಯಮಗಳು ‘ಬಿಜೆಪಿ ಬಿಟೀಂ’ ಎಂದು ಬಿಂಬಿಸಿದ್ದೇ ಬಿಎಸ್‌ಪಿಗೆ ಮಾರಕವಾಯಿತು. ಮುಸ್ಲಿಂ ಸಮುದಾಯದವರು, ಬಿಜೆಪಿ ವಿರೋಧಿ ಮತದಾರರು ಸಮಾಜವಾದಿ ಪಕ್ಷದತ್ತ ಹೊರಳಿದರು. ಇನ್ನೊಂದೆಡೆ ಮೇಲ್ಜಾತಿ, ಹಿಂದುಳಿದ ವರ್ಗದವರು ಹಾಗೂ ಇನ್ನಿತರ ಸಮುದಾಯಗಳು ಸಮಾಜವಾದಿ ಪಕ್ಷವು ಮರಳಿ ಅಧಿಕಾರಕ್ಕೆ ಬಂದರೇ ರಾಜ್ಯದಲ್ಲಿ ‘ಜಂಗಲ್‌ ರಾಜ’ ಆರಂಭವಾಗಬಹುದು ಎಂಬ ಭಯದಲ್ಲಿ ಪಕ್ಷದ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡಿದರು.’
-ಮಾಯಾವತಿ, ಬಿಎಸ್‌ಪಿ ನಾಯಕಿ

ಮಾಯಾಗೆ ಪದ್ಮ, ಒವೈಸಿಗೆ ರತ್ನ: ಯುಪಿ ಬಿಜೆಪಿಯದ್ದೇ ರಾಜ್ಯವಾಗಿರುವುದರಿಂದ ಭಾರಿ ಜಯ ಗಳಿಸಿಕೊಂಡಿದೆ. ಆದರೂ ಅಖಿಲೇಶ್‌ಯಾದವ್‌ ಅವರ ಸ್ಥಾನಗಳು ಮೂರು ಪಟ್ಟು ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ 42 ಸ್ಥಾನಗಳನ್ನು ಗೆದ್ದಿದ್ದ ಪಕ್ಷ ಈ ಬಾರಿ 125 ಸ್ಥಾನಗಳನ್ನು ಗೆದ್ದಿದೆ. ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಮಾಯಾವತಿ ಮತ್ತು ಒವೈಸಿ ಸಹಕಾರ ನೀಡಿದ್ದಾರೆ. ಹಾಗಾಗಿ ಅವರಿಗೆ ಕಡ್ಡಾಯವಾಗಿ ಪದ್ಮ ವಿಭೂಷಣ ಮತ್ತು ಭಾರತ ರತ್ನ ನೀಡಬೇಕು.
-ಸಂಜಯ್‌ ರಾವುತ್‌, ಶಿವಸೇನೆ ನಾಯಕ

click me!