ವಿದೇಶದಿಂದ ಬರುವವರಿಗೆ 365 ಕಡೆ ಕ್ವಾರಂಟೈನ್, 6500 ಕೊಠಡಿ ಬುಕ್!

By Kannadaprabha NewsFirst Published May 7, 2020, 9:02 AM IST
Highlights

ವಲಸಿಗರ ಹೊತ್ತ ಮೊದಲ ವಿಮಾನ ಇಂದು ಆಗಮನ| ಬೆಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ವಲಸಿಗರು, 250 ಆಗಮಿಸುವ ಸಾಧ್ಯತೆ| ಏರ್‌ಪೋರ್ಟ್‌ನಲ್ಲೇ ತಪಾಸಣೆ| ಸೋಂಕು ಕಂಡು ಬಂದ್ರೆ ಆಸ್ಪತ್ರೆಗೆ ಶಿಫ್ಟ್‌| ಎಲ್ಲರಿಗೂ ಕಡ್ಡಾಯ ಕ್ವಾರಂಟೈನ್‌

ದೊಡ್ಡಬಳ್ಳಾಪುರ/(ಮೇ.07): ಕೊರೋನಾ ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಕ್ಕಿಹಾಕಿಕೊಂಡು ಭಾರತಕ್ಕೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿದ್ದ ಅನಿವಾಸಿ ಭಾರತೀಯರನ್ನು ಹೊತ್ತ ಮೊದಲ ವಿಮಾನ ಗುರುವಾರ ಮಧ್ಯರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಮೊದಲ ವಿಮಾನದಲ್ಲಿ 250 ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಇವರನ್ನು ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 356 ಕಟ್ಟಡಗಳನ್ನು ಕ್ವಾರಂಟೈನ್‌ಗಾಗಿ ಗುರುತಿಸಲಾಗಿದೆ.

ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲೇ ಆರೋಗ್ಯ ತಪಾಸಣೆ ನಡೆಯಲಿದೆ. ತಜ್ಞ ವೈದ್ಯರು ತಪಾಸಣೆಗೊಳಪಡಿಸಲಿದ್ದಾರೆ. ಸೋಂಕಿತರು, ಸೋಂಕಿನ ಲಕ್ಷಣಗಳಿರುವವರನ್ನು ಕೂಡಲೇ ಬೆಂಗಳೂರಿನ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮತ್ತೆ ಮಹಾ ಕೊರೋನಾ ಸ್ಫೋಟ: ದೇಶಾದ್ಯಂತ ಒಟ್ಟು 3018 ಹೊಸ ಕೇಸು!

ಪ್ರಯಾಣಿಕರನ್ನು ಎ, ಬಿ, ಸಿ ಮತ್ತು ಡಿ ಹೀಗೆ ವಿವಿಧ ಕೆಟಗೆರಿಯಂತೆ ಪ್ರತ್ಯೇಕಿಸಲಾಗುವುದು. ‘ಎ’ ಕೆಟಗರಿಯಲ್ಲಿ ಸೋಂಕಿತರು ಇರಲಿದ್ದು, ಇವರನ್ನು ಆಸ್ಪತ್ರೆಗಳಲ್ಲಿ ಐಸೋಲೇಟ್‌ ಮಾಡಲಾಗುವುದು, ‘ಬಿ’ ಕೆಟಗರಿಯಲ್ಲಿ 60 ವರ್ಷ ಮೀರಿದ ವ್ಯಕ್ತಿಗಳು, ‘ಸಿ’ ಮತ್ತು ‘ಡಿ’ ಕೆಟಗರಿಯಲ್ಲಿ 60 ವರ್ಷಕ್ಕಿಂತ ಕೆಳಗಿನ ಹಾಗೂ ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ ಎಂದರು.

ಕ್ವಾರಂಟೈನ್‌ ಕಡ್ಡಾಯ: ಬಿ, ಸಿ ಮತ್ತು ಡಿ ಕೆಟಗೆರಿಯ ಎಲ್ಲ ಪ್ರಯಾಣಿಕರನ್ನೂ ಕಡ್ಡಾಯ 14 ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ವಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಸ್ಥಳದ ಆಯ್ಕೆ ಅವಕಾಶ ನೀಡಲಾಗಿದೆ. ಎಲ್ಲರಿಗೂ ಸರ್ಕಾರದಿಂದ ಉಚಿತ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಕ್ವಾರಂಟೈನ್‌ನಲ್ಲಿ ಉಳಿಯಲು ಬಯಸದವರಿಗೆ ಶುಲ್ಕ ಪಾವತಿಸಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲೂ ಅವಕಾಶ ಇದೆ ಎಂದರು.

2 ಜಿಲ್ಲೆಗಳಲ್ಲಿ ಕ್ವಾರಂಟೈನ್‌: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವವರನ್ನು ಬೆಂಗಳೂರು ನಗರ, ಗ್ರಾಮಾಂತರ ಭಾಗಗಳಲ್ಲಿ ಕ್ವಾರಂಟೈನ್‌ ನಡೆಸಲಾಗುವುದು. ಈಗಾಗಲೇ ಬೆಂಗಳೂರು ನಗರದಲ್ಲಿ ವಿವಿಧ ಹೋಟೆಲ್‌, ರೆಸಾರ್ಟ್‌ಗಳ ಸುಮಾರು 6500 ಕೊಠಡಿಗಳನ್ನು ಕಾಯ್ದಿರಿಸಲು ಸೂಚಿಸಲಾಗಿದೆ. ಉಳಿದಂತೆ ಕ್ವಾರಂಟೈನ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 356 ಕಟ್ಟಡ ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಕ್ವಾರಂಟೈನ್‌ ಮಾಡಲ್ಲ. ಅನಿವಾರ‍್ಯ ಪರಿಸ್ಥಿತಿ ಎದುರಾದರೆ ಹೊರವಲಯದ ಕೆಲ ಕಟ್ಟಡಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆಗೆ ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸಿದೆ ಎಂದು ವಿವರಿಸಿದರು.

ಏರ್‌ಪೋರ್ಟ್‌ ಹೆಲ್ಪ್‌ ಡೆಸ್ಕ್‌

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಕ್ವಾರಂಟೈನ್‌ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ಹೆಲ್ಪ್‌ ಡೆಸ್ಕ್‌ ಆಗಿ ಕಾರ್ಯನಿರ್ವಹಿಸಲು ತಂಡ ರಚಿಸಲಾಗಿದೆ. ಮೇ 8ರ ರಾತ್ರಿ 8 ಗಂಟೆಯಿಂದ ಏ.9 ರ ಬೆಳಗ್ಗೆ 8 ಗಂಟೆಯವರೆಗೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಜಂಟಿ ನಿರ್ದೇಶಕ ನರೇಂದ್ರಬಾಬು.ಎನ್‌ (9845248733), ಏ.9ರ ರಾತ್ರಿ 8 ಗಂಟೆಯಿಂದ ಏ.10ರ ಬೆಳಗ್ಗೆ 8 ಗಂಟೆಯವರೆಗೆ ಜಿಲ್ಲಾ ಸರ್ವೇ ದಾಖಲೆಗಳ ಉಪ ನಿರ್ದೇಶಕ ಎಂ.ಸಿ.ಕೇಶವಮೂರ್ತಿ (9480326010) ಅವರನ್ನೊಳಗೊಂಡ ತಂಡ ನಿಲ್ದಾಣದಲ್ಲಿ ಕರ್ತವ್ಯನಿರ್ವಹಿಸಲಿದೆ.

ಇಂದಿನಿಂದ ದೇಶದ ಚಾರಿತ್ರಿಕ ಆಪರೇಷನ್‌ ಏರ್‌ಲಿಫ್ಟ್‌ ಶುರು!

ಬ್ರಿಟನ್‌ನಿಂದ ಬರಲಿದೆ ಮೊದಲ ವಿಮಾನ

ಬೆಂಗಳೂರಿಗೆ ಬ್ರಿಟನ್‌ನಿಂದ ಗುರುವಾರ ಮೊದಲ ವಿಮಾನ ಬರಲಿದೆ. ಈ ವಿಮಾನದಲ್ಲಿ 250 ಮಂದಿ ಆಗಮಿಸುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ವಿವಿಧ ದೇಶಗಳಿಂದ ಸುಮಾರು 11 ಸಾವಿರ ಮಂದಿ ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ಸಾಧ್ಯತೆ ಇದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಸುಮಾರು 3500 ಪ್ರಯಾಣಿಕರು, ಬೆಂಗಳೂರು ವಿಮಾನ ನಿಲ್ದಾಣಕ್ಕೆ 7 ಸಾವಿರಕ್ಕೂ ಅಧಿಕ ಪ್ರಯಾಣಿಕರು ಬರಲಿದ್ದಾರೆ ಎಂಬ ಮಾಹಿತಿ ಇದೆ.

click me!