ಇಂದಿನಿಂದ ದೇಶದ ಚಾರಿತ್ರಿಕ ಆಪರೇಷನ್‌ ಏರ್‌ಲಿಫ್ಟ್‌ ಶುರು!

By Kannadaprabha NewsFirst Published May 7, 2020, 7:42 AM IST
Highlights

ಗುರುವಾರ ದೇಶದ ಚಾರಿತ್ರಿಕ ಆಪರೇಷನ್‌ ಏರ್‌ಲಿಫ್ಟ್‌ ಶುರು|  ‘ವಂದೇ ಭಾರತ್‌ ಮಿಷನ್‌’ ಮೊದಲ ಹಂತದ ಕಾರಾರ‍ಯಚರಣೆ| ಇಂದು 10 ವಿಮಾನದಲ್ಲಿ 2300 ಮಂದಿ ತಾಯ್ನಾಡಿಗೆ ವಾಪಸ್‌

ನವದೆಹಲಿ(ಮೇ.07): ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಲಕ್ಷಾಂತರ ಭಾರತೀಯರನ್ನು ತವರಿಗೆ ಕರೆತರುವ ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ ಗುರುವಾರದಿಂದ ಆರಂಭವಾಗಲಿದೆ. ‘ವಂದೇ ಭಾರತ್‌ ಮಿಷನ್‌’ ಹೆಸರಿನಲ್ಲಿ ಹಲವು ಹಂತಗಳಲ್ಲಿ ಈ ಕಾರ್ಯಾಚರಣೆ ನಡೆಯಲಿದ್ದು, ಗುರುವಾರದಿಂದ ಒಂದು ವಾರ 64 ವಿಮಾನಗಳು 14800 ಭಾರತೀಯರನ್ನು ತಾಯ್ನಾಡಿಗೆ ಕರೆತರಲಿವೆ.

"

ಮೊದಲ ದಿನವಾದ ಗುರುವಾರ 10 ವಿಮಾನಗಳಲ್ಲಿ 2300 ಮಂದಿ ದೇಶದ ವಿವಿಧ ನಗರಗಳಿಗೆ ಬಂದಿಳಿಯಲಿದ್ದಾರೆ. ಈ ಪೈಕಿ ಕೇರಳದಲ್ಲೇ 4 ವಿಮಾನ ಲ್ಯಾಂಡ್‌ ಆಗಲಿವೆ. ಅಬುಧಾಬಿಯಿಂದ ಕೇರಳದ ಕೊಚ್ಚಿ, ದುಬೈನಿಂದ ಕೇರಳದ ಕೋಳಿಕೋಡ್‌, ಖತಾರ್‌ನ ದೋಹಾದಿಂದ ಕೊಚ್ಚಿ, ಸೌದಿ ಅರೇಬಿಯಾದ ರಿಯಾದ್‌ನಿಂದ ಕೋಳಿಕೋಡ್‌ಗೆ 4 ವಿಮಾನಗಳಲ್ಲಿ ತಲಾ 200 ಮಂದಿ ಆಗಮಿಸಲಿದ್ದಾರೆ.

ಆಪರೇಷನ್ ಏರ್‌ಲಿಫ್ಟ್‌: ಭಾರತದ ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ!

ಇದೇ ವೇಳೆ, ಲಂಡನ್‌ ಹಾಗೂ ಸಿಂಗಾಪುರದಿಂದ ಎರಡು ವಿಮಾನಗಳಲ್ಲಿ ತಲಾ 250 ಮಂದಿ ಮುಂಬೈಗೆ ಬರಲಿದ್ದಾರೆ. ಮಲೇಷ್ಯಾದ ಕೌಲಾಲಂಪುರದಿಂದ 250 ಮಂದಿ ದೆಹಲಿಗೆ, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಿಂದ 300 ಮಂದಿ ಮುಂಬೈ ಹಾಗೂ ಹೈದರಾಬಾದ್‌ಗೆ ಆಗಮಿಸಲಿದ್ದಾರೆ. ಫಿಲಿಪ್ಪೀನ್ಸ್‌ನ ಮನಿಲಾದಿಂದ ಅಹಮದಾಬಾದ್‌ಗೆ 250 ಮಂದಿ, ಬಾಂಗ್ಲಾದೇಶದ ಢಾಕಾದಿಂದ ಜಮ್ಮು-ಕಾಶ್ಮೀರದ ಶ್ರೀನಗರಕ್ಕೆ 200 ಜನರು ಸೇರಿ ಒಟ್ಟಾರೆ 2300 ಭಾರತೀಯರ ಆಗಮನವಾಗಲಿದೆ.

1990ರ ದಶಕದಲ್ಲಿ ಕೊಲ್ಲಿ ಯುದ್ಧ ನಡೆದಾಗ 1.70 ಲಕ್ಷ ಭಾರತೀಯರನ್ನು ಕುವೈತ್‌ನಿಂದ ಭಾರತಕ್ಕೆ ಕರೆತರಲಾಗಿತ್ತು. ಅದು ಇತಿಹಾಸದಲ್ಲಿ ಭಾರತ ಕೈಗೆತ್ತಿಕೊಂಡ ಅತ್ಯಂತ ಬೃಹತ್‌ ಪ್ರಮಾಣದ ರಕ್ಷಣಾ ಕಾರ್ಯಾಚರಣೆ. ಲಾಕ್‌ಡೌನ್‌ನಿಂದಾಗಿ ವಿವಿಧ ದೇಶಗಳಲ್ಲಿ 2 ಲಕ್ಷದಿಂದ 4 ಲಕ್ಷದಷ್ಟುಜನರು ಸಿಲುಕಿದ್ದಾರೆ. ಅವರನ್ನು ವಿಮಾನ ಹಾಗೂ ಹಡಗಿನ ಮೂಲಕ ಕರೆತರಲು ಸರ್ಕಾರ ಯೋಜನೆ ಸಿದ್ಧಪಡಿಸಿದೆ. ಹೀಗಾಗಿ ಇದು ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ ಆಗಲಿದೆ ಎಂದು ಹೇಳಲಾಗಿದೆ.

ವಿಮಾನ ಹತ್ತುವ ಮುನ್ನ ಪರೀಕ್ಷೆ

ತವರಿಗೆ ಆಗಮಿಸುವ ಭಾರತೀಯರಿಗೆ ಅವರಿರುವ ದೇಶಗಳಲ್ಲೇ ಪರೀಕ್ಷೆ ನಡೆಸಲಾಗುತ್ತದೆ. ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೆ ಮಾತ್ರ ದೇಶಕ್ಕೆ ಕರೆತರಲಾಗುತ್ತದೆ.

ತವರಿಗೆ ಬರಲು 58000 ಕನ್ನಡಿಗರು ರೆಡಿ, ಕ್ವಾರಂಟೈನ್‌ ಮಾಡುವುದೇ ಸವಾಲು!

ಪ್ರತಿ ವ್ಯಕ್ತಿಗೂ ಸುರಕ್ಷಾ ಕಿಟ್‌

ವಿಮಾನ ಹತ್ತುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಸುರಕ್ಷಾ ಕಿಟ್‌ ನೀಡಲಾಗುತ್ತದೆ. ಅದರಲ್ಲಿ ಮೂರು ಪದರದ ಎರಡು ಮಾಸ್ಕ್‌, ಎರಡು ಜತೆ ಗ್ಲೋವ್‌್ಸ, ಸ್ಯಾನಿಟೈಸರ್‌ ಇರುತ್ತದೆ. ತವರಿನಲ್ಲಿ ಇಳಿದ ಕೂಡಲೇ ಸ್ವಂತ ವೆಚ್ಚದಲ್ಲಿ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗುತ್ತೇವೆ ಎಂಬ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ.

click me!