ಕಳೆದ ಮೇನಲ್ಲಿ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದ್ದ ಆರ್‌ಬಿಐ, ಬಳಿಕ ಅವುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ ಸೆ.30ರ ಗಡುವಿಗೆ ಇನ್ನು 3 ದಿನ ಮಾತ್ರ ಬಾಕಿ ಉಳಿದಿದೆ.
ನವದೆಹಲಿ: ಕಳೆದ ಮೇನಲ್ಲಿ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದ್ದ ಆರ್‌ಬಿಐ, ಬಳಿಕ ಅವುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ ಸೆ.30ರ ಗಡುವಿಗೆ ಇನ್ನು 3 ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಗಡುವು ಮುಗಿದ ಬಳಿಕವೂ ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಎದ್ದಿದೆ. ಆದರೆ ಈ ಬಗ್ಗೆ ಅ.1ರಂದು ಆರ್‌ಬಿಐ ತನ್ನ ಯಾವುದೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಗಡುವು ವಿಸ್ತರಿಸದೆ ನೋಟು ಅಮಾನ್ಯ ಮಾಡಬಹುದು ಎನ್ನಲಾಗುತ್ತಿದೆ.
ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರು. ಮೌಲ್ಯದ ನೋಟುಗಳ ಪೈಕಿ ಶೇ.93ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ಹೀಗಾಗಿ ನೋಟು ಹಿಂದಿರುಗಿಸಲು ನೀಡಿರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೆ.30ರವರೆಗೆ ಜನರು ತಮ್ಮಲ್ಲಿರುವ 2,000 ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ನೀಡಿ ಇತರ ನೋಟುಗಳಿಂದ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.