ನವದೆಹಲಿ(ಜೂ.12): ಕೊರೋನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಲಸಿಕೆ ಪರಿಣಾಮಕಾರಿಯಾಗಿ ಬಳಕೆ ಮಾಡಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಲು ಮಹತ್ವದ ಸೂಚನೆ ನೀಡಿದೆ. ಇದರ ನಡುವೆ ಖಾಸಗಿ ಆಸ್ಪತ್ರೆಗಳ ಲಸಿಕೆ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ಹೆಚ್ಚಿನ ಲಸಿಕೆಗಳು ಬಳಕೆಯಾಗದೇ ಉಳಿದುಕೊಂಡಿದೆ.
ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!...
ಮೇ ತಿಂಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ 1.29 ಕೋಟಿ ಲಸಿಕೆ ಪೂರೈಕೆ ಮಾಡಲಾಗಿದೆ. ಆದರೆ ಇದರಲ್ಲಿ ಬಳಕೆಯಾಗಿರುವುದು ಕೇವಲ 22 ಲಕ್ಷ ಮಾತ್ರ. ಜೂನ್ 4 ರ ವೇಳೆಗೆ ಒಟ್ಟು 7.4 ಕೋಟಿ ಲಸಿಕೆ ಲಭ್ಯವಿತ್ತು. ಇದರಲ್ಲಿ 1.85 ಕೋಟಿ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಿದರೆ, ಇನ್ನುಳಿದ ಲಸಿಕೆಯನ್ನು ರಾಜ್ಯಗಳಿಗೆ ಹಂಚಲಾಗಿದೆ.
ಖಾಸಗಿ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಬೆಲೆ ಪ್ರಮುಖ ಕಾರಣವಾಗಿದೆ. ಸರ್ಕಾರಿ ಕೇಂದ್ರಗಳಲ್ಲ ಉಚಿತವಾಗಿ ನೀಡುತ್ತಿದ್ದಾರೆ. ಜೊತೆಗೆ ಜನರಿಗೆ ತಮ್ಮ ತಮ್ಮ ಹತ್ತಿರದ ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ಹೀಗಾಗಿ ಖಾಸಗಿ ಆಸ್ಪತ್ರೆವರೆಗೆ ತೆರಳಬೇಕಾದ ಅವಶ್ಯಕತೆಯೂ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಜನಸಂದಣಿ ಕೂಡ ಹೆಚ್ಚಿದೆ. ಹೀಗಾಗಿ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಯಸುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್!...
ಖಾಸಗಿ ಆಸ್ಪತ್ರೆಗಳಿಗೆ ನೀಡಿದ ಲಸಿಕೆಗಳ ಪೈಕಿ ಕೇವಲ 17 ಶೇಕಡಾ ಮಾತ್ರ ಬಳಕೆಯಾಗಿದೆ. ಇದೀಗ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೂ ಆಸಕ್ತಿ ತೋರುತ್ತಿಲ್ಲ. ಕಾರಣ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳು ಲಸಿಕೆ ಹಾಕಿಸಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ. ಇಷ್ಟೇ ಅಲ್ಲ ಲಸಿಕೆ ಬೆಲೆಯನ್ನು ನಿಗಧಿ ಪಡಿಸಿದೆ. ಲಸಿಕೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೇವಲ 150 ರೂಪಾಯಿ ಸರ್ವೀಸ್ ಚಾರ್ಜ್ ಹೊರತು ಪಡಿಸಿ ಇನ್ಯಾವ ಲಾಭವೂ ಇಲ್ಲ. ಹೀಗಾಗಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಮುತುವರ್ಜಿ ವಹಿಸುತ್ತಿಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.