ಪ್ರಧಾನಿ ನರೇಂದ್ರ ಮೋದಿಯವರ ವಿಮಾನವು ಉಕ್ರೇನ್‌ನಿಂದ ಭಾರತಕ್ಕೆ ಮರಳುವಾಗ ಪಾಕಿಸ್ತಾನದ ವಾಯುಪ್ರದೇಶದಲ್ಲಿ 46 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಸಾಮಾನ್ಯವಾಗಿ ಪೂರ್ವಮಾಹಿತಿ ನೀಡುವ ಸಂಪ್ರದಾಯವಿದ್ದರೂ ಈ ಬಾರಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.
ಇಸ್ಲಾಮಾಬಾದ್ (ಆ.26): ಇತ್ತೀಚಿನ ಉಕ್ರೇನ್ ಪ್ರವಾಸದ ವೇಳೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ 46 ನಿಮಿಷಗಳ ಕಾಲ ಆ ದೇಶದ ಆಗಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ಹಾರಾಟ ನಡೆಸಿರುವುದು ಬೆಳಕಿಗೆ ಬಂದಿದೆ. ವಾಣಿಜ್ಯ ವಿಮಾನಗಳು ಹಾರಾಟ ನಡೆಸುವುದಕ್ಕೆ ಅನುಮತಿ ನೀಡಿರುವ ದೇಶದ ಮೇಲೆ ಪ್ರಧಾನಿ ಅಥವಾ ಗಣ್ಯಾತಿಗಣ್ಯರ ವಿಮಾನ ಹಾರಾಟ ನಡೆಸುವುದಕ್ಕೆ ಯಾವುದೇ ಮಾಹಿತಿ ನೀಡುವ ಅಥವಾ ಅನುಮತಿ ಕೇಳುವ ಅಗತ್ಯವಿಲ್ಲ. ಆದರೂ, ಸಾಮಾನ್ಯವಾಗಿ ಪೂರ್ವಮಾಹಿತಿ ನೀಡುವ ಸಂಪ್ರದಾಯವಿದೆ. ಆದರೆ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳುವಾಗ ಪ್ರಧಾನಿ ಮೋದಿಯವರನ್ನು ಹೊತ್ತ ವಿಮಾನ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಆ ದೇಶದ ಆಗಸದಲ್ಲಿ ಹಾರಿ ಭಾರತಕ್ಕೆ ಬಂದಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆಯಾದ ‘ಡಾನ್’ ವರದಿ ಮಾಡಿದೆ.
ಚಿತ್ರಾಲ್‌ನಲ್ಲಿ ಪಾಕ್‌ನ ವಾಯುಸೀಮೆಯನ್ನು ಪ್ರವೇಶಿಸಿದ ಮೋದಿ ವಿಮಾನ, ಇಸ್ಲಾಮಾಬಾದ್ ಮತ್ತು ಲಾಹೋರ್ ಮೇಲೆ ಹಾರಾಟ ನಡೆಸಿ, ಅಮೃತಸರದಲ್ಲಿ ಭಾರತವನ್ನು ಪ್ರವೇಶಿಸಿದೆ. ‘ಪ್ರಧಾನಿಯವರ ವಿಮಾನ ಪಾಕ್‌ನ ಆಗಸದ ಮೇಲೆ ಹಾರಾಡಲು ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಮೊದಲೇ ಮಾಹಿತಿ ನೀಡಿದ್ದರೆ ಅವರ ವಿಮಾನಕ್ಕೆ ವಿಶೇಷ ಕೋಡ್ ನೀಡಿ ಅಡೆತಡೆಯಿಲ್ಲದೆ ವಿಮಾನ ಹಾರಲು ಅನುವು ಮಾಡಿಕೊಡಲಾಗುತ್ತದೆ’ ಎಂದು ಪಾಕಿಸ್ತಾನದ ಸರ್ಕಾರಿ ಮೂಲಗಳು ಹೇಳಿವೆ. ಪಾಕಿಸ್ತಾನದ ಮೇಲೆ ಭಾರತದ ವಾಣಿಜ್ಯ ವಿಮಾನಗಳಿಗೆ ಹಾಗೂ ಭಾರತದ ಮೇಲೆ ಪಾಕಿಸ್ತಾನದ ವಾಣಿಜ್ಯ ವಿಮಾನಗಳಿಗೆ ಹಾರಾಟ ನಡೆಸಲು ಸಂಪೂರ್ಣ ಅನುಮತಿಯಿದೆ. ಆದರೆ ಯುದ್ಧವಿಮಾನ ಹಾರಾಟಕ್ಕೆ ಮಾತ್ರ ನಿರ್ಬಂಧ ಇದೆ.