ಮಲಯಾಳಂ ಚಿತ್ರೋದ್ಯಮ ಸೆಕ್ಸ್‌ ಹಗರಣಕ್ಕೆ 2 ತಲೆದಂಡ!

By Santosh Naik  |  First Published Aug 26, 2024, 8:43 AM IST


ಫಿಲಂ ಅಕಾಡೆಮಿಗೆ ನಿರ್ದೇಶಕ ರಂಜಿತ್‌, ಅಮ್ಮಾಗೆ ನಟ ಸಿದ್ದಿಕಿ ರಾಜೀನಾಮೆ ನೀಡಿದ್ದಾರೆ. ಇಬ್ಬರ ಮೇಲೂ ನಟಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.


ತಿರುವನಂತರಪುರ (ಆ.26): ಮಲಯಾಳ ಚಿತ್ರರಂಗದಲ್ಲಿ ಅವಕಾಶ ಸಿಗಬೇಕಿದ್ದರೆ ನಟಿಯರು ಲೈಂಗಿಕವಾಗಿ ಶೋಷಣೆಗೆ ಒಳಗಾಗಲು ಸಿದ್ಧರಾಗಿರಬೇಕು ಎಂಬ ನ್ಯಾ. ಹೇಮಾ ಸಮಿತಿ ವರದಿ ಬೆನ್ನಲ್ಲೇ, ಇಂಥದ್ದೇ ಲೈಂಗಿಕ ಕಿರುಕುಳ ಆರೋಪದ ಪ್ರಕರಣ ಇಬ್ಬರು ಖ್ಯಾತನಾಮರ ‘ಬಲಿ’ ಪಡೆದಿದೆ. ತಮ್ಮ ಮೇಲೆ ಹೊರಿಸಲಾದ ಆರೋಪಗಳನ್ನು ನಿರಾಕರಿಸಿದ ಹೊರತಾಗಿಯೂ, ‘ಜನರ ಮುಂದೆ ಸತ್ಯ ತೆರೆದಿಡುವ’ ಕಾರಣ ನೀಡಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ರಂಜಿತ್‌, ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಅಸೋಸಿಯೇಷನ್‌ ಆಫ್ ಮಲಯಾಳಂ ಮೂವಿ ಅರ್ಟಿಸ್ಟ್‌ (ಅಮ್ಮಾ) ಸಂಘಟನೆಯ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ಧಿಕಿ ರಾಜೀನಾಮೆ ನೀಡಿದ್ದಾರೆ. ಚಲನಚಿತ್ರವೊಂದರ ಮಾತುಕತೆ ಸಂಬಂಧ ಮನೆಗೆ ತೆರಳಿದ್ದ ವೇಳೆ ರಂಜಿತ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಬಂಗಾಳಿ ನಟಿ ಶ್ರೀಲೇಖಾ ಆರೋಪ ಮಾಡಿದ್ದರು. ಇನ್ನೊಂದೆಡೆ ಮತ್ತೋರ್ವ ಮಲಯಾಳಂ ನಟಿ, ಸಿದ್ಧಿಕಿ ತಮ್ಮ ಮೇಲೆ ಅತ್ಯಾಚಾರವೆಸಗಿದ್ದರು ಎಂಬ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಇಬ್ಬರೂ ರಾಜೀನಾಮೆ ನೀಡಿದ್ದಾರೆ.

ರಂಜಿತ್‌ ಹೇಳಿದ್ದೇನು?: ಈ ಕುರಿತು ಪ್ರತಿಕ್ರಿಯೆ ನೀಡಿರುವ ರಂಜಿತ್‌, ‘ನಾನು ಅಕಾಡೆಮಿ ಅಧ್ಯಕ್ಷ ಹುದ್ದೆ ವಹಿಸಿಕೊಂಡಾಗಿನಿಂದಲೂ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ನಾನು ಹುದ್ದೆಯಲ್ಲಿ ಮುಂದುವರೆದರೆ ಎಡರಂಗ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಪ್ರಕರಣದಲ್ಲಿ ನಾನು ಆರೋಪಿಯಲ್ಲ, ವಾಸ್ತವವಾಗಿ ನಾನೇ ಸಂತ್ರಸ್ತ ಎಂದು’ ಎಂದು ಹೇಳಿದ್ದಾರೆ. ಈ ರಾಜೀನಾಮೆ ಸ್ವೀಕರಿಸುವುದಾಗಿ ಸರ್ಕಾರ ಕೂಡಾ ಹೇಳಿದೆ.

Latest Videos

undefined

ಸಿದ್ದಿಕಿ ಹೇಳಿಕೆ ಏನು?: ಇನ್ನೊಂದೆಡೆ ‘ನನ್ನ ಮೇಲಿನ ಆರೋಪದ ಕಾರಣ ಅಮ್ಮಾ ಸಂಘಟನೆಯ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಸಿದ್ಧಿಕಿ ಹೇಳಿದ್ದಾರೆ.

ನ್ಯಾ। ಹೇಮಾ ವರದಿಯಲ್ಲೇನಿತ್ತು?: ಕೆಲ ವರ್ಷಗಳ ಹಿಂದೆ ಮಲಯಾಳಂ ನಟ ದಿಲೀಪ್‌ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳದ ಆರೋಪದ ಬಳಿಕ ಕೇರಳ ಸರ್ಕಾರ, ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ನ್ಯಾ.ಹೇಮಾ ಸಮಿತಿ ರಚಿಸಿತ್ತು. ಇತ್ತೀಚೆಗೆ ಸಮಿತಿಯ ವರದಿ ಬಿಡುಗಡೆಯಾಗಿದ್ದು ಅದರಲ್ಲಿ, ‘ಮಲಯಾಳಂ ಚಿತ್ರರಂಗವನ್ನು 10-15 ಖ್ಯಾತನಾಮರು ನಿಯಂತ್ರಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಅವಕಾಶ ಬೇಕಿದ್ದರೆ ಮಹಿಳೆಯರು ಲೈಂಗಿಕವಾಗಿ ಶೋಷಣೆಗೆ ಒಳಗಾಗಲು ಸಿದ್ದರಾಗಿರಬೇಕು’ ಎಂಬುದೂ ಸೇರಿದಂತೆ ಹಲವು ಸ್ಫೋಟಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿತ್ತು. ಆದರೆ ಯಾರ ಹೆಸರನ್ನೂ ಬಹಿರಂಗ ಮಾಡಿರಲಿಲ್ಲ. ಅದರ ಬೆನ್ನಲ್ಲೆ ಇಬ್ಬರು ನಟಿಯರು ನಟ, ನಿರ್ದೇಶಕರ ವಿರುದ್ಧ ತಮ್ಮ ಮೇಲೆ ಎಸಗಿದ್ದ ದೌರ್ಜನ್ಯಗಳ ಕುರಿತು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


 

click me!