ರಾತ್ರಿಯೇ ರೈಲು ಸಂಚಾರ ಶುರು: ಭಾವು​ಕ​ರಾಗಿ ರೈಲಿ​ನತ್ತ ಕೈಬೀಸಿ, ಕೈಮು​ಗಿದ ಸಚಿವ ವೈಷ್ಣವ್‌

Published : Jun 05, 2023, 09:03 AM ISTUpdated : Jun 05, 2023, 10:57 AM IST
ರಾತ್ರಿಯೇ ರೈಲು ಸಂಚಾರ ಶುರು:  ಭಾವು​ಕ​ರಾಗಿ ರೈಲಿ​ನತ್ತ ಕೈಬೀಸಿ, ಕೈಮು​ಗಿದ ಸಚಿವ ವೈಷ್ಣವ್‌

ಸಾರಾಂಶ

ಈ ಶತಮಾನದಲ್ಲೇ ಅತ್ಯಂತ ಭೀಕರವಾದ ರೈಲು ಅಪಘಾತ ಸಂಭವಿಸಿದ ಎರಡೇ ದಿನದಲ್ಲಿ ಒಡಿಶಾದ ಬಾಲಸೋರ್‌ ಬಳಿ ರೈಲು ಮಾರ್ಗ ಪುನರ್‌ನಿರ್ಮಾಣ ಮಾಡ​ಲಾ​ಗಿದ್ದು, ಭಾನು​ವಾರ ರಾತ್ರಿಯೇ ಸಂಚಾರ ಆರಂಭ​ವಾ​ಗಿದೆ. ಮೊದಲ ರೈಲು ರಾತ್ರಿ 10.30ರ ಸುಮಾ​ರಿಗೆ ಇಲ್ಲಿ ಸಂಚ​ರಿ​ಸಿತು.

ಬಾಲಸೋರ್‌: ಈ ಶತಮಾನದಲ್ಲೇ ಅತ್ಯಂತ ಭೀಕರವಾದ ರೈಲು ಅಪಘಾತ ಸಂಭವಿಸಿದ ಎರಡೇ ದಿನದಲ್ಲಿ ಒಡಿಶಾದ ಬಾಲಸೋರ್‌ ಬಳಿ ರೈಲು ಮಾರ್ಗ ಪುನರ್‌ನಿರ್ಮಾಣ ಮಾಡ​ಲಾ​ಗಿದ್ದು, ಭಾನು​ವಾರ ರಾತ್ರಿಯೇ ಸಂಚಾರ ಆರಂಭ​ವಾ​ಗಿದೆ. ಮೊದಲ ರೈಲು ರಾತ್ರಿ 10.30ರ ಸುಮಾ​ರಿಗೆ ಇಲ್ಲಿ ಸಂಚ​ರಿ​ಸಿತು.

ಈ ರೈಲು ಸಂಚಾರ ಆರಂಭ ಮಾಡು​ತ್ತಿ​ದ್ದಂತೆಯೇ ದುರ್ಘ​ಟನಾ ಸ್ಥಳದ ಹಳಿಯ ಪಕ್ಕ​ದಲ್ಲೇ ನಿಂತಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwin Vaishnav), ರೈಲ್ವೆ ಅಧಿ​ಕಾ​ರಿ​ಗಳು, ದುರಸ್ತಿ ಸಿಬ್ಬಂದಿ ಹಾಗೂ ಸಾರ್ವ​ಜ​ನಿ​ಕರು ಭಾವು​ಕ​ರಾಗಿ ರೈಲಿ​ನತ್ತ ಕೈಬೀಸಿ ಹರ್ಷ ವ್ಯಕ್ತ​ಪ​ಡಿ​ಸಿ​ದ​ರು. ಇದೇ ವೇಳೆ ಅಶ್ವಿನಿ ವೈಷ್ಣವ್‌ ಅವರು ದೇವ​ರ​ನ್ನು ನೆನೆ​ಯುತ್ತ ಸಾಗು​ತ್ತಿದ್ದ ರೈಲಿಗೆ ಕೈಮು​ಗಿ​ದ​ರು.ಭಾನು​ವಾರ ರಾತ್ರಿ ಸಂಚ​ರಿ​ಸಿದ ರೈಲು ಕಲ್ಲಿ​ದ್ದಲು ಹೊತ್ತ ಗೂಡ್ಸ್‌ (Goods Train) ರೈಲಾ​ಗಿದ್ದು, ವಿಶಾ​ಖ​ಪ​ಟ್ಟ​ಣ​ದಿಂದ ಆಗ​ಮಿ​ಸಿತ್ತು. ಇದು ರೂರ್‌​ಕೆ​ಲಾ ಉಕ್ಕು ಘಟ​ಕ​ದತ್ತ ಪ್ರಯಾಣ ಬೆಳೆ​ಸಿತು. ಇದೇ ಮಾರ್ಗ​ದಲ್ಲಿ ಬೆಂಗ​ಳೂ​ರು-ಹೌರಾ ರೈಲಿಗೆ ಕೋರ​ಮಂಡಲ್‌ ಎಕ್ಸ್‌​ಪ್ರೆ​ಸ್‌ ಡಿಕ್ಕಿ ಹೊಡೆ​ದಿ​ತ್ತು. ಬಹುಶಃ  ಇಂದಿನಿಂದ ಪ್ರಯಾ​ಣಿಕ ರೈಲುಗಳು ಸಂಚಾರ ಆರಂಭಿ​ಸುವ ನಿರೀ​ಕ್ಷೆ​ಯಿ​ದೆ.

 

ಈ ಬಗ್ಗೆ ಮಾಧ್ಯ​ಮ​ಗಳ ಜತೆ ಮಾತ​ನಾ​ಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣ​ವ್‌, ‘ಕೇ​ವಲ 51 ತಾಸಿ​ನಲ್ಲಿ ಎರಡೂ ಬದಿಯ ಹಳಿ ದುರಸ್ತಿ ಪೂರ್ಣ​ಗೊ​ಳಿ​ಸ​ಲಾ​ಗಿ​ದೆ. ಇನ್ನು ರೈಲು ಸಂಚಾರ ಸಹಜ ಸ್ಥಿತಿಗೆ ಮರ​ಳ​ಲಿದ್ದು, ಈಗಿ​ನಿಂದಲೇ ಎಂದಿನ ಸಂಚಾರ ಆರಂಭ​ವಾ​ಗ​ಲಿ​ದೆ ಎಂದ​ರು. ಹೌರಾದಿಂದ ಚೆನ್ನೈ/ಬೆಂಗಳೂರು ಕಡೆ ಬರುವ ಹಾಗೂ ಹೌರಾ (Howrah) ಕಡೆ ಹೋಗುವ ಎರಡೂ ಮಾರ್ಗಗಳ ಹಳಿ ದುರಸ್ತಿ ಶನಿ​ವಾರ ರಾತ್ರಿ ಆರಂಭ​ವಾ​ಗಿತ್ತು. ಮೊದಲು ಹಳಿ ಜೋಡಿ​ಸಿದ ಕಾರ್ಮಿ​ಕರು, ನಂತರ ಸಿಗ್ನ​ಲಿಂಗ್‌ ಹಾಗೂ ವಿದ್ಯು​ದೀ​ಕರಣ ವ್ಯವಸ್ಥೆ ಸರಿ​ಪ​ಡಿ​ಸಿ​ದ​ರು.

ಕವಚ ವ್ಯವಸ್ಥೆ ದೇಶಾದ್ಯಂತ ತ್ವರಿತವಾಗಿ ಅಳವಡಿಕೆ ಭರವಸೆ

ನವದೆಹಲಿ: ಬಾಲಸೋರ್‌ ದುರಂತದಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆ ರೈಲ್ವೆ ಸುರಕ್ಷತೆಗಾಗಿ ಅಭಿವೃದ್ಧಿಪಡಿಸಿರುವ ‘ಕವಚ’ ವ್ಯವಸ್ಥೆಯನ್ನು ತ್ವರಿತವಾಗಿ ಇಡೀ ದೇಶದಲ್ಲಿ ಅಳವಡಿಸುವುದಾಗಿ ಪ್ರಕಟಿಸಿದೆ. ಇದಕ್ಕೆ ಬೇಕಾದ ಹಣವನ್ನು ಕೂಡ ಮಂಜೂರು ಮಾಡಿರುವುದಾಗಿ ತಿಳಿಸಿದೆ. ಆದರೆ ಇದೇ ವೇಳೆ, ‘ಕವಚ ವ್ಯವಸ್ಥೆ ಇದ್ದರೂ ಬಾಲಸೋರ್‌ ರೈಲು ದುರಂತ ತಪ್ಪಿಸಲು ಸಾಧ್ಯವಿರಲಿಲ್ಲ’ ಎಂದಿದೆ.

ಈ ಕುರಿತು ಮಾತನಾಡಿರುವ ರೈಲ್ವೆ ಮಂಡಳಿಯ ಕಾರ್ಯಾಚರಣೆ ಹಾಗೂ ವ್ಯವಹಾರ ಅಭಿವೃದ್ಧಿ ವಿಭಾಗದ ಸದಸ್ಯೆ ಜಯಾ ವರ್ಮಾ ಸಿನ್ಹಾ, ಬಾಲಸೋರ್‌ ಘಟನೆಯ ವಿಷಯದಲ್ಲಿ ಕವಚ ವ್ಯವಸ್ಥೆ ಇದ್ದಿದ್ದರೂ ಅದು ಕೆಲಸ ಮಾಡುವ ಸಾಧ್ಯತೆ ಇರಲಿಲ್ಲ. ಏಕೆಂದರೆ ಇಂಟರ್‌ಲಾಕಿಂಗ್‌ ಸಮಸ್ಯೆ ಕಾರಣ ಬೇರೆ ಮಾರ್ಗಕ್ಕೆ ರೈಲು ಏಕಾಏಕಿ ನುಗ್ಗಿತ್ತು. ಅಪಘಾತ ಆಗುತ್ತದೆ ಎಂದು ರೈಲು ಚಾಲಕನಿಗೆ ತಿಳಿದಾಗ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಗೂಡ್ಸ್‌ ರೈಲಿನ ಅಂತರ ಬಹಳ ಕಡಿಮೆಯಿತ್ತು. ಅಂದರೆ ಗೂಡ್ಸ್‌ ರೈಲು ಹಾಗೂ ಕೋರಮಂಡಲ್‌ ರೈಲಿನ ನಡುವೆ ಅಂತರ ಕೇವಲ 100 ಮೀ. ಇತ್ತು. ಗಂಟೆಗೆ 130 ಕಿ.ಮೀ. ವೇಗದಲ್ಲಿ ಸಾಗುತ್ತಿರುವ ರೈಲಿನ ಕವಚ ವ್ಯವಸ್ಥೆ ಕೆಲಸ ಮಾಡಬೇಕು ಎಂದರೆ ರೈಲನ್ನು ನಿಲ್ಲಿಸಲು 600 ಮೀ. ಅಂತರವಾದರೂ ಬೇಕು. ಮುಖ್ಯ ರೈಲು ಮಾರ್ಗ ಪಕ್ಕದ ದೊಡ್ಡ ಬಂಡೆ ರೈಲಿನ ಮುಂದೆ ಏಕಾಏಕಿ ಉರುಳಿ ಬಿದ್ದರೆ ಕವಚ ಕೆಲಸ ಮಾಡದು’ ಎಂದರು.

ಒಡಿಶಾ ತ್ರಿವಳಿ ರೈಲು ದುರಂತ: ತುಂಬಿ ತುಳುಕುತ್ತಿರುವ ಶವಾಗಾರಗಳು: ಮೃತರ ಗುರುತು ಪತ್ತೆ ಆಗದೆ ಸಂಕಟ  

‘ಕವಚ ವ್ಯವಸ್ಥೆಯನ್ನು ಆದ್ಯತೆಯ ಮೇಲೆ ಶೀಘ್ರದಲ್ಲೇ ಎಲ್ಲಾ ರೈಲ್ವೆ ವಿಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದು ದೇಶದಲ್ಲೇ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವಾದ್ದರಿಂದ ಸಲಕರಣೆಗಳ ಉತ್ಪಾದನೆ ಸೀಮಿತವಾಗಿದೆ. ಆದರೂ ಸಾಧ್ಯವಾದಷ್ಟುಬೇಗ ಎಲ್ಲೆಡೆ ಈ ತಂತ್ರಜ್ಞಾನ ಅಳವಡಿಸಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು