ಒಡಿಶಾದ ತ್ರಿವಳಿ ರೈಲು ದುರಂತದ ಬಳಿಕ ಕೋಲ್ಕತ್ತಾದಿಂದ ದಕ್ಷಿಣ ಭಾರತದ ನಗರಗಳಿಗೆ ಬರುವ ವಿಮಾನಗಳ ಟಿಕೆಟ್ ದರದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.
ಕೋಲ್ಕತ್ತಾ: ಒಡಿಶಾದ ತ್ರಿವಳಿ ರೈಲು ದುರಂತದ ಬಳಿಕ ಕೋಲ್ಕತ್ತಾದಿಂದ ದಕ್ಷಿಣ ಭಾರತದ ನಗರಗಳಿಗೆ ಬರುವ ವಿಮಾನಗಳ ಟಿಕೆಟ್ ದರದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಕೋಲ್ಕತ್ತಾದಿಂದ ಚೆನ್ನೈ, ಭುವನೇಶ್ವರ, ಬೆಂಗಳೂರು, ಹೈದರಾಬಾದ್ ನಗರಗಳಿಗೆ ಪ್ರಯಾಣಿಸುವ ವಿಮಾನಗಳ ಟಿಕೆಟ್ ದರ ಎಂದಿನ ದರಕ್ಕಿಂತ ದುಪ್ಪಟ್ಟಾಗಿದೆ. ಘಟನೆ ನಡೆದ ಬಳಿಕ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಜನರೆಲ್ಲರು ತಮ್ಮ ಪ್ರಯಾಣಕ್ಕಾಗಿ ವಿಮಾನಗಳನ್ನು ಅವಲಂಬಿಸಿದ್ದೇ ಟಿಕೆಟ್ ದರ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ. ರೈಲು ಅಪಘಾತದ ಮೊದಲು ಕೋಲ್ಕತಾದಿಂದ ಭುವನೇಶ್ವರಕ್ಕೆ .6,000 ದಿಂದ .7,000 ಇದ್ದ ಟಿಕೆಟ್ ದರ ಅಪಘಾತದ ಬಳಿಕ .12 ರಿಂದ .15 ಸಾವಿರಕ್ಕೇರಿಕೆಯಾಗಿದೆ. ಅದೇ ರೀತಿ ವಿಶಾಖಪಟ್ಟಣಂಗೆ .5 ರಿಂದ .6 ಸಾವಿರ ಇದ್ದ ಟಿಕೆಟ್ ದರ ಇದೀಗ .16 ರಿಂದ .18 ಸಾವಿರಕ್ಕೆ, ಹೈದರಾಬಾದ್‌ಗೆ .18 ಸಾವಿರಕ್ಕೇರಿಕೆಯಾಗಿದೆ.
ಅಪಘಾತ ಸಂಭವಿಸಿರುವ ರೈಲು ಮಾರ್ಗವಾಗಿ ಈ ನಗರಗಳಿಗೆ ಪ್ರಯಾಣಿಸಲು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಈ ಮಾರ್ಗ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಜನರೆಲ್ಲ ವಿಮಾನದ ಮೊರೆ ಹೋಗಿದ್ದಾರೆ. ಹೀಗಾಗಿ ಟಿಕೆಟ್ ಸಿಗುವುದೂ ಕೂಡ ಕಷ್ಟವಾಗಿದ್ದು ಪ್ರಯಾಣಿಕರು ವಿಮಾನ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು.
ರೈಲುಗಳ ಸಂಚಾರಕ್ಕೆ ಮುಕ್ತ
ಬಾಲಸೋರ್: ತ್ರಿವಳಿ ರೈಲು ಅಪಘಾತಕ್ಕೆ ಸಾಕ್ಷಿಯಾದ ಒಡಿಶಾದ ಬಾಹಾನಗ ನಿಲ್ದಾಣದಲ್ಲಿ ಹಳಿಗಳ ದುರಸ್ತಿ ಕಾರ್ಯ ಭಾನುವಾರ ಸಂಜೆ ಮುಗಿದಿದೆ. ಬೆನ್ನಲ್ಲೇ ಸಿಗ್ನಲಿಂಗ್ ವ್ಯವಸ್ಥೆ ಹಾಗೂ ವಿದ್ಯುದೀಕರಣ ಕೆಲಸ ಆರಂಭವಾಗಿದೆ. ಬುಧವಾರದ ವೇಳೆಗೆ ಈ ಮಾರ್ಗದಲ್ಲಿ ಸಂಚಾರ ಪುನಾರಂಭಗೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲು ಚಾಲಕನಿಗೆ ರೈಲ್ವೆ ಮಂಡಳಿಯ ಕ್ಲೀನ್‌ಚಿಟ್
ನವದೆಹಲಿ: ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕೋರಮಂಡಲ್ ರೈಲಿನ ಚಾಲಕನಿಗೆ ರೈಲ್ವೆ ಮಂಡಳಿ ಕ್ಲೀನ್‌ಚಿಟ್ ನೀಡಿದೆ. ರೈಲಿನ ಲೋಕೋಪೈಲಟ್ (Loco pilot) ಗಂಭೀರವಾಗಿ ಗಾಯಗೊಂಡಿದ್ದಾನೆ. ‘ಗ್ರೀನ್ ಸಿಗ್ನಲ್’ ಸಿಕ್ಕ ಬಳಿಕವಷ್ಟೇ ಮುಂದೆ ಹೋಗಿದ್ದಾಗಿ ಹೇಳಿದ್ದಾನೆ. ಹೀಗಾಗಿ ಆತ ಸಿಗ್ನಲ್ ಉಲ್ಲಂಘಿಸಿಲ್ಲ. ವೇಗದ ಮಿತಿಯನ್ನೂ ಮೀರಿಲ್ಲ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಕವಚ ವ್ಯವಸ್ಥೆ ಇದ್ದಿದ್ದರೂ ದುರಂತ ತಪ್ಪಿಸಲಾಗ್ತಿರಲಿಲ್ಲ
ನವದೆಹಲಿ: ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ ರೈಲ್ವೆ ಅಭಿವೃದ್ಧಿಪಡಿಸಿರುವ ‘ಕವಚ’ (Kavacha) sವ್ಯವಸ್ಥೆ ಹೌರಾ ಮಾರ್ಗದಲ್ಲಿ ಇದ್ದಿದ್ದರೂ ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತ (Coromandel Express Tragedy) ತಪ್ಪಿಸಲು ಆಗುತ್ತಿರಲಿಲ್ಲ ಎಂದು ರೈಲ್ವೆ ಮಂಡಳಿ ತಿಳಿಸಿದೆ. ಕೋಲ್ಕತಾ- ಚೆನ್ನೈ ಕೋರಮಂಡಲ್ ರೈಲು ಹಾಗೂ ಗೂಡ್ಸ್ ರೈಲಿನ ನಡುವೆ ಕೇವಲ 100 ಮೀ. ಅಂತರವಿತ್ತು. ಕವಚ ಕಾರ್ಯನಿರ್ವಹಣೆಗೆ ಎರಡು ರೈಲುಗಳ ನಡುವಣ ಅಂತರ 600 ಮೀ. ಇರಬೇಕು ಎಂದಿದೆ.
ಸಿಬಿಐ ತನಿಖೆ
ಬಾಲಸೋರ್: ‘270ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಒಡಿಶಾ ರೈಲು ದುರಂತಕ್ಕೆ ಸಿಗ್ನಲಿಂಗ್ ದೋಷ ಹಾಗೂ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ದೋಷವೇ ಕಾರಣ. ಇಂಟರ್‌ಲಾಕಿಂಗ್ (Inter locking point) ಪಾಯಿಂಟ್ ಅನ್ನು ಬದಲಿಸಲಾಗಿತ್ತು. ಯಾರು ಹೀಗೆ ಮಾಡಿದ್ದರು ಎಂಬುದು ನಿಗೂಢ. ಹೀಗಾಗಿ ಇದು ದುಷ್ಕೃತ್ಯ ಇರಬಹುದು’ ಎಂದು ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿ ಪ್ರಮುಖರು ಶಂಕಿಸಿದ್ದಾರೆ. ಇದರ ಬೆನ್ನಲ್ಲೇ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರಕ್ಕೆ ರೈಲ್ವೆ ಸಚಿವಾಲಯ ಶಿಫಾರಸು ಮಾಡಿದೆ.
ಭಾನುವಾರ ಬೆಳಗ್ಗೆ ಪ್ರಾಥಮಿಕ ತನಿಖೆಯ ಅಂಕಿ-ಅಂಶಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಮಂಡಳಿಯ ಉನ್ನತ ಅಧಿಕಾರಿ ಜಯಾ ವರ್ಮಾ ಸಿನ್ಹಾ ದುಷ್ಕೃತ್ಯದ ಶಂಕೆ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಸಂಜೆ ವೈಷ್ಣವ್ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಿರ್ಣಯ ಪ್ರಕಟಿಸಿದ್ದಾರೆ.
ಒಡಿಶಾದ ಬಾಲಸೋರ್ ಬಳಿ ಸಾಗುತ್ತಿದ್ದ ಕೋರಮಂಡಲ್ ರೈಲು ಮುಖ್ಯ ಲೈನ್‌ನಲ್ಲಿ ಹೋಗಬೇಕಾಗಿತ್ತು. ಮುಖ್ಯ ಲೈನ್‌ನಲ್ಲಿ ಗ್ರೀನ್ ಸಿಗ್ನಲ್ ಕೂಡ ಇತ್ತು. ಆದರೆ ಏಕಾಏಕಿ ಅದು ಮುಖ್ಯಲೈನ್‌ನಲ್ಲಿ ಹೋಗದೆ ಗೂಡ್‌್ಸ ರೈಲು ನಿಂತಿದ್ದ ಲೂಪ್ ಲೈನ್‌ಗೆ ನುಗ್ಗಿತ್ತು. ಹೀಗೆ ಬೇರೆ ಮಾರ್ಗಕ್ಕೆ ನುಗ್ಗಲು ‘ಕಾಣದ ಕೈಗಳು’ ಹಳಿಗಳ ಇಂಟರ್ ಲಾಕಿಂಗ್ ಬದಲಿಸಿದ್ದೇ ಕಾರಣ ಎಂಬುದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ.
ಸಿಗ್ನಲಿಂಗ್ ಸಮಸ್ಯೆ-ಉನ್ನತ ಅಧಿಕಾರಿ:
ರೈಲ್ವೆ ಮಂಡಳಿಯ ಉನ್ನತ ಅಧಿಕಾರಿ ಜಯಾ ವರ್ಮಾ ಸಿನ್ಹಾ ಮಾತನಾಡಿ, ‘ಪ್ರಾಥಮಿಕ ತನಿಖೆಯ ಪ್ರಕಾರ ಸಿಗ್ನಲಿಂಗ್ ಸಮಸ್ಯೆಯಿಂದ ದುರಂತ ಸಂಭವಿಸಿರುವುದು ತಿಳಿದುಬಂದಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮಾತ್ರ ಹಳಿ ತಪ್ಪಿ ಅಪಘಾತ ಉಂಟುಮಾಡಿದೆ. ಈ ರೈಲು 128 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ಗೂಡ್ಸ್ ರೈಲು ಹಳಿ ತಪ್ಪಿಲ್ಲ. ಅದು ಕಬ್ಬಿಣದ ಅದಿರನ್ನು ಒಯ್ಯುತ್ತಿದ್ದುದರಿಂದ ಗರಿಷ್ಠ ಹಾನಿ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಉಂಟಾಗಿದೆ. ಆದ್ದರಿಂದಲೇ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಹಳಿ ತಪ್ಪಿದ ಕೋರಮಂಡಲ್ ರೈಲಿನ ಬೋಗಿಗಳು ಡೌನ್ ಲೈನ್ ಮೇಲೆ ಬಿದ್ದಿವೆ. ಅವು ಡೌನ್ ಲೈನ್‌ನಲ್ಲಿ 126 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ನ ಕೊನೆಯ ಎರಡು ಬೋಗಿಗೆ ಡಿಕ್ಕಿ ಹೊಡೆದಿವೆ’ ಎಂದು ಮಾಹಿತಿ ನೀಡಿದರು.