
ಕೋಲ್ಕತಾ(ಜೂ.07): ಒಡಿಶಾದದಲ್ಲಿ ನಡೆದ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಅಪಘಾತದ ಭೀಕರತೆ ಇನ್ನೂ ಹಾಗೇ ಇದೆ. ಹಲವು ಮೃತದೇಹಗಳು ಶವಗಾರದಲ್ಲಿ ಅನಾಥವಾಗಿದೆ. ಗಾಯಗೊಂಡವರ ಚಿಕಿತ್ಸೆ ಮುಂದುವರಿದಿದೆ. ಭೀಕರ ಅಪಘಾತದಿಂದ ಹಲವು ರೈಲು ಸಂಚಾರ ರದ್ದಾಗಿತ್ತು. ತ್ವರಿತಗತಿಯಲ್ಲಿ ರೈಲು ಹಳಿಗಳ ದುರಸ್ತಿ ಕಾರ್ಯಮುಗಿಸಿದ ಇಲಾಖೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ತ್ರಿವಳಿ ರೈಲು ಅಪಘಾತದ ಬಳಿಕ ರದ್ದಾಗಿದ್ದ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಇದೀಗ ಮತ್ತೆ ಪ್ರಯಾಣ ಆರಂಭಿಸಿದೆ. ಇಂದು ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಲ್ಲಿ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರುನಿಶಾನೆ ತೋರಲಾಗಿದೆ. ಭೀಕರ ಅಪಘಾತದ ಬಳಿಕ ಮೊದಲ ಬಾರಿಗೆ ಕೊರಮಂಡೆಲ್ ಎಕ್ಸ್‌ಪ್ರೆಸ್ ಚೆನ್ನೈನತ್ತ ಹೊರಟಿದೆ.
ಬಾಲಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ಅಪಘಾತದ ಬಳಿಕ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಿತ್ತು. ಇಂದು(ಜೂ.07) ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಗೊಂಡಿದೆ. ಬಹನಗ ರೈಲು ನಿಲ್ದಾಣದ ಬಳಿ ಎಲ್ಲಾ ರೈಲು ಹಳಿಗಳ ದರುಸ್ತಿ ಮಾಡಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸತತ 51 ಗಂಟೆಗಳ ಕಾಲ ದುರಸ್ತಿ ಕಾರ್ಯ ನಡೆದಿತ್ತು.
ರೈಲು ದುರಂತದಲ್ಲಿ ಪತಿ ಮೃತ, ಸುಳ್ಳು ಹೇಳಿ 17 ಲಕ್ಷ ಪರಿಹಾರ ಪಡೆಯಲು ಯತ್ನಿಸಿದ ಪತ್ನಿ!
ತ್ರಿವಳಿ ರೈಲು ದುರಂತಕ್ಕೆ ಕಾರಣವಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು, ಅಪಘಾತ ಸಂಭವಿಸಿದ ನಂತರ ಮಂಗಳವಾರ(ಜೂ.06) ರಂದು ಬಾಹಾನಗಾ ನಿಲ್ದಾಣದ ಮೂಲಕ ಸಂಚರಿಸಿತ್ತು. ಈ ವೇಳೆ ಕೇವಲ 30 ಕಿ.ಮೀ. ವೇಗದಲ್ಲಿ ರೈಲು ಸಾಗಿತು. ಅಪಘಾತದ ದಿನ ಗಂಟೆಗೆ 128 ಕಿ.ಮೀ. ವೇಗದಲ್ಲಿ ರೈಲು ಸಂಚರಿಸುತ್ತಿತ್ತು. ರೈಲು ಸಂಚಾರ ಪುನಾರಂಭದ ನಂತರ ಬಾಹಾನಗಾ ಮೂಲಕ 70 ರೈಲುಗಳು ಸಾಗಿವೆ.
ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಗಾಯಾಳುಗಳು ಮೃತಪಟ್ಟಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 278ಕ್ಕೆ ಏರಿಕೆಯಾಗಿದೆ. ಇನ್ನು ‘278 ಮೃತರನ್ನು ಹೊರತುಪಡಿಸಿ ಅಪಘಾತದಲ್ಲಿ 1,100 ಜನ ಗಾಯಗೊಂಡಿದ್ದಾರೆ’ ಎಂದು ಖುರ್ದಾ ವೀಭಾಗೀಯ ರೈಲ್ವೆ ವ್ಯವಸ್ಥಾಪಕ ರಿಂಕೇಶ್ ರಾಯ್ ತಿಳಿಸಿದ್ದಾರೆ.
ಒಡಿಶಾ ರೈಲು ದುರಂತ ಹುಟ್ಟಿಸಿದೆ ಅನುಮಾನ: ಪುಟ್ಟ ಗಾಯವೂ ಇಲ್ಲದೇ ಸಾವು ಹೇಗಾಯ್ತು?
ಅಪಘಾತದ ಬಳಿಕ 288 ಜನರು ಮೃತಪಟ್ಟಿದ್ದಾರೆ ಎನ್ನಲಾಗಿತ್ತದರೂ ಕೆಲ ಶವಗಳನ್ನು ಎರಡು ಬಾರಿ ಎಣಿಸಲಾಗಿದೆಯಾದ್ದರಿಂದ ಒಟ್ಟು ಮೃತರ ಸಂಖ್ಯೆ 275 ಎಂದು ಸರ್ಕಾರ ಘೋಷಿಸಿತ್ತು. ಸದ್ಯ 278 ಮೃತದೇಹಗಳ ಪೈಕಿ 177 ದೇಹಗಳನ್ನು ಗುರುತಿಸಲಾಗಿದ್ದು, ಇನ್ನೂ 101 ಶವಗಳನ್ನು ಗುರುತಿಸಬೇಕಾಗಿದೆ. ಸಂಬಂಧಿಕರು ಬಂದು ಗುರುತಿಸದ ಈ ಶವಗಳನ್ನು ಸ್ಥಳೀಯ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಂರಕ್ಷಿಸಿ ಇರಿಸಲಾಗಿದೆ. ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜ್ಯಗಳಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ರೈಲ್ವೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ