
ಒಡಿಶಾ(ಜು.07) ಬಾಲಾಸೋರ್ ರೈಲು ದುರಂತದ ನೋವು ಇನ್ನು ಮಾಸಿಲ್ಲ. ಬರೋಬ್ಬರಿ 290 ಮಂದಿ ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಡಿವರ ಕುಟುಂಬದ ನೋವು, ಸಂಕಷ್ಟ ಹೇಳತೀರದು. ಇತ್ತ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣ ಹೊರಗಿನ ಕೈವಾಡ ಇಲ್ಲ ಅನ್ನೋದು ಖಚಿತಗೊಂಡಿದೆ. ಹೀಗಾಗಿ ರೈಲ್ವೇ ಅಧಿಕಾರಿಗಳು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ದುರಂತ ನಡೆದಿರುವ ಕುರಿತು ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಈ ಕುರಿತು ತನಿಖೆ ತೀವ್ರಗೊಳಿಸಿರುವ ಸಿಬಿಐ, ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದೆ. ಹಿರಿಯ ಸೆಕ್ಷನ್ ಎಂಜಿನೀಯರ್ ಅರುಣ್ ಕುಮಾರ್ ಮೊಹಾಂತ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮಿರ್ ಖಾನ್ ಹಾಗೂ ಟೆಕ್ನಿಶಿಯನ್ ಪಾಪು ಕುಮಾರ್ ಅವರ ಬಂಧನವಾಗಿದೆ.
ಸಿಆರ್‌ಪಿಸಿ ಸೆಕ್ಷನ್ 304 ಹಾಗೂ ಸೆಕ್ಷನ್ 201ರ ಅಡಿಯಲ್ಲಿ ಮೂವರು ಅಧಿಕಾರಿಗಳ ಬಂಧನವಾಗಿದೆ. ರೈಲ್ವೇ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ರೈಲು ದುರಂತ ಸಂಭವಿಸಿದೆ ಅನ್ನೋದು ತನಿಖೆಯಿಂದ ಬಹಿರಂಗವಾಗಿದೆ. ಈ ದುರಂತಕ್ಕೆ ನೇರ ಕಾರಣವಾಗಿರುವ ಮೂವರು ಅಧಿಕಾರಿಗಳನ್ನು ಬಂಧಿಸಿರುವ ಸಿಬಿಐ ಇದೀಗ ವಿಚಾರಣೆ ನಡೆಸುತ್ತಿದೆ. ರೈಲು ದುರಂತದ ಬೆನ್ನಲ್ಲೇ ರೈಲ್ವೇ ಸಚಿವಾಲಯದ ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಸಿಬಿಐ ತನಿಖೆಗೂ ಆದೇಶ ನೀಡಿತ್ತು.
ಬಹುಮಾನ ಮೊತ್ತವಾಗಿ ಸಿಕ್ಕ ಹಣದ ಪಾಲನ್ನು ಕೋರಮಂಡಲ್ ದುರಂತದ ಸಂತ್ರಸ್ಥರಿಗೆ ನೀಡಿದ ಬ್ಲ್ಯೂ ಟೈಗರ್ಸ್!
ಸಿಗ್ನಲ್ ಜೂನಿಯರ್ ಎಂಜಿನಿಯರ್ ಸೇರಿದಂತೆ ಹಲವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಹೆಚ್ಚಿನ ತನಿಖೆಗಾಗಿ ಕೆಲವರ ಮನೆಯನ್ನು ಸೀಲ್ ಮಾಡಲಾಗಿತ್ತು. ಸಿಬಿಐ 5 ಅಧಿಕಾರಿಗಳ ತಂಡ ಎಂಜಿನಿಯರ್ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮನೆಯಲ್ಲಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದರು. ಅಲ್ಲದೆ ಎಂಜಿನಿಯರ್ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮಾಡಿದ್ದರು.
ಒಡಿಶಾ ರೈಲು ದುರಂತ ಕುರಿತು ತನಿಖೆ ನಡೆಸಿದ ರೈಲು ಸುರಕ್ಷತಾ ಆಯುಕ್ತರು ಇತ್ತಿಚೆಗೆ ವರದಿ ಸಲ್ಲಿಕೆ ಮಾಡಿದ್ದರು. ಈ ವರದಿಯಲ್ಲಿ ಜೂ.2ರ ಈ ದುರ್ಘಟನೆಗೆ ಎರಡು ಇಲಾಖೆಯ ಸಿಬ್ಬಂದಿಯ ಎಡವಟ್ಟೇ ಕಾರಣ ಎಂದಿದೆ ಎಂದು ಮೂಲಗಳು ಹೇಳಿವೆ. ರೈಲ್ವೆಯ ಸಿಗ್ನಲಿಂಗ್ ಹಾಗೂ ಕಾರ್ಯನಿರ್ವಹಣೆ (ಸಂಚಾರ) ವಿಭಾಗದ ಸಿಬ್ಬಂದಿಯೇ ಈ ದುರಂತಕ್ಕೆ ಹೊಣೆಗಾರರು ಎಂದು ಆಯುಕ್ತರು ಬೊಟ್ಟು ಮಾಡಿದ್ದಾರೆ. ಹೊರಗಿನವರ ಕೈವಾಡದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದರೂ, ಅಂತಹ ಸಾಧ್ಯತೆ ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ
ಮಾರ್ಗದಲ್ಲಿ ಕೆಲವೊಂದು ದುರಸ್ತಿ ಕಾರ್ಯವನ್ನು ನಡೆಸುವ ಸಲುವಾಗಿ ನಿಯಮ ಪ್ರಕಾರವಾಗಿ ಸಿಗ್ನಲ್ ನಿರ್ವಾಹಕರು ಸಂಪರ್ಕ ಕಡಿತಗೊಳಿಸುವ ಸಂಬಂಧ ಮನವಿಯನ್ನು ಸಲ್ಲಿಕೆ ಮಾಡಿದ್ದರು. ಕಾಮಗಾರಿ ಮುಗಿದ ಬಳಿಕ ಮರುಸಂಪರ್ಕಕ್ಕೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ ಕಾಮಗಾರಿ ಮುಗಿದ ಬಳಿಕ ರೈಲು ಸಂಚಾರ ಆರಂಭಿಸುವ ಮೊದಲು ಸಿಗ್ನಲಿಂಗ್ ವ್ಯವಸ್ಥೆಯ ಪರೀಕ್ಷಾ ಶಿಷ್ಟಾಚಾರವನ್ನು ಪಾಲಿಸಲಾಗಿರಲಿಲ್ಲ. ಮರುಸಂಪರ್ಕಕ್ಕೆ ಅನುಮತಿ ನೀಡಿದ ಬಳಿಕವೂ ಸಿಗ್ನಲಿಂಗ್ ಸಿಬ್ಬಂದಿ ಕಾಮಗಾರಿಯನ್ನು ಮುಂದುವರಿಸಿದ್ದರು. ಇದಾದ ಬಳಿಕ ಕೋಲ್ಕತಾದ ಶಾಲಿಮಾರ್‌ನಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಸಾಗಲು ಹಸಿರು ನಿಶಾನೆ ದೊರೆತಿತ್ತು. ಆದರೆ ಹಳಿಯನ್ನು ಬದಲಿಸಬೇಕಾಗಿದ್ದ ಉಪಕರಣ ಆ ರೈಲನ್ನು ಲೂಪ್ ಲೈನ್‌ನತ್ತ ತಿರುಗಿಸಿತ್ತು ಎಂದು ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ