
ಶಾಲೆಯಲ್ಲಿ ಪುಟ್ಟ ಮಕ್ಕಳು ನಿದ್ದೆಗೆ ಜಾರುವುದು ಸಾಮಾನ್ಯ. ಕೆಲವು ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ಮಕ್ಕಳಿಗೆ ಮಧ್ಯಾಹ್ನ ಕೆಲ ನಿಮಿಷ ಮಲಗುವುದಕ್ಕೆ ಅವಕಾಶ ನೀಡುವುದು ನಿಮಗೆ ತಿಳಿದಿರಬಹುದು. ಆದರೆ ಸರ್ಕಾರಿ ಶಾಲೆಯಲ್ಲಿ ಈ ಸೌಲಭ್ಯ ಇಲ್ಲ. ಇಲ್ಲೊಂದು ಕಡೆ ಶಾಲೆಯಲ್ಲಿ ಶಾಲೆ ಬಿಡುವ ಸಮಯದಲ್ಲಿ 2ನೇ ಕ್ಲಾಸ್ ಬಾಲಕಿಯೊಬ್ಬಳು ಶಾಲಾ ಕೊಠಡಿಯೊಳಗೆಯೇ ನಿದ್ದೆಗೆ ಜಾರಿದ್ದಾಳೆ. ಆದರೆ ಶಾಲಾ ಶಿಕ್ಷಕರಿಗೆ ಶಾಲೆಗೆ ಬೀಗ ಹಾಕುವ ವೇಳೆ ಬಾಲಕಿಯೊಬ್ಬಳು ಕೊಠಡಿಯೊಳಗೆ ನಿದ್ದೆಗೆ ಜಾರಿದ್ದನ್ನು ಗಮನಿಸಿಲ್ಲ, ತರಗತಿಯಲ್ಲಿ ಯಾವ ಮಕ್ಕಳೂ ಕೂಡ ಬಾಕಿಯಾಗಿಲ್ಲ ಎಂಬುದನ್ನು ಪರಿಶೀಲನೆ ನಡೆಸದೆಯೇ ಶಾಲಾ ಸಿಬ್ಬಂದಿ ಶಾಲೆಗೆ ಬೀಗ ಹಾಕಿ ಹೋಗಿದ್ದಾರೆ. ಆದರೆ ನಿದ್ದೆಗೆ ಜಾರಿದ ಬಾಲಕಿಗೆ ಸ್ವಲ್ಪ ಹೊತ್ತಿನಲ್ಲೇ ಎಚ್ಚರವಾಗಿದ್ದು, ಕತ್ತಲ ಕೋಣೆಯಲ್ಲಿ ತಾನೊಬ್ಬಳೇ ಬಾಕಿಯಾಗಿರುವುದು ತಿಳಿದು ಭಯಗೊಂಡಿದ್ದಾಳೆ. ಜೊತೆಗೆ ಶಾಲೆಯ ಕಿಟಕಿಯ ಕಬ್ಬಿಣದ ಸರಳುಗಳ ಮೂಲಕ ಆಕೆ ಹೊರಗೆ ಬರುವ ಪ್ರಯತ್ನ ಮಾಡಿದ್ದಾಳೆ. ಆದರೆ ದೇಹವನ್ನು ಹೊರಗೆ ತಳ್ಳುವಲ್ಲಿ ಯಶಸ್ವಿಯಾದ ಈ 2ನೇ ಕ್ಲಾಸ್ ಮಗುವಿಗೆ ತನ್ನ ತಲೆಯನ್ನು ಈ ಕಿಟಕಿಯ ಕಬ್ಬಿಣದ ಸರಳುಗಳಿಂದ ಹೊರಗೆ ತರಲು ಸಾಧ್ಯವಾಗದೇ ಕಷ್ಟಪಟ್ಟಿದ್ದಾಳೆ.
ಬಾಲಕಿ ಇರುವುದನ್ನು ಗಮನಿಸದೇ ಬೀಗ ಹಾಕಿಹೋದ ಶಿಕ್ಷಕರು:
ಅಲ್ಲದೇ ರಾತ್ರಿಯಿಡೀ ಬಾಲಕಿ ಕಾಡುಪ್ರಾಣಿಗಳ ಭಯದ ಜೊತೆ ಈ ಕತ್ತಲ ಕೋಣೆಯ ಕಿಟಕಿಯಲ್ಲಿ ತಲೆ ಸಿಲುಕಿಸಿಕೊಂಡೇ ಕಾಲ ಕಳೆದಿದ್ದಾಳೆ. ಇತ್ತ ಈಕೆಯ ಪೋಷಕರು ದಿನಗೂಲಿ ನೌಕರರಾಗಿದ್ದು, ಮಗಳು ಶಾಲೆಯಿಂದ ಬಾರದೇ ಇರುವುದನ್ನು ನೋಡಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕಿ ಮಾತ್ರ ಅವರಿಗೆ ಸಿಗಲಿಲ್ಲ, ಅವರು ಶಾಲೆಯ ಆವರಣಕ್ಕೆ ಮಗಳನ್ನು ಹುಡುಕಿಕೊಂಡು ಬಂದಿಲ್ಲ, ಹೀಗಾಗಿ ಮರುದಿನ ಬೆಳಗ್ಗೆ ಶಾಲೆ ಬಾಗಿಲು ತೆರೆದ ನಂತರವಷ್ಟೇ ಶಾಲಾ ಬಾಲಕಿ ಕಿಟಕಿಯಲ್ಲಿ ಸಿಲುಕಿದ ತನ್ನ ತಲೆಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾ ಸುಸ್ತಾಗಿ ಕಿಟಕಿಯಲ್ಲೇ ಕುಳಿತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರು ಕಿಟಕಿಯ ಸರಳನ್ನು ಅಗಲಿಸುವ ಮೂಲಕ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಅಂಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಕಿಟಕಿಯ ಮೂಲಕ ಹೊರಗೆ ಬರಲು ಯತ್ನಿಸಿ ಸರಳುಗಳ ಮಧ್ಯೆ ಸಿಲುಕಿದ ಬಾಲಕಿ ತಲೆ
ಗುರುವಾರ ಅಂದರೆ ಆಗಸ್ಟ್ 21ರಂದು ಶಾಲಾ ಸಮಯ ಮುಗಿದಾಗ, ಶಿಕ್ಷಕರು ತರಗತಿ ಕೊಠಡಿಗಳಿಗೆ ಬೀಗ ಹಾಕಿ ಆವರಣದಿಂದ ಹೊರಟುಹೋದರು. ಈ ವೇಳೆ ಎರಡನೇ ತರಗತಿಯ ವಿದ್ಯಾರ್ಥಿನಿ ಜ್ಯೋತ್ಸ್ನಾ ದೇಹುರಿ ಕೊಠಡಿ ಒಳಗೆ ಮತ್ತು ಗಾಢ ನಿದ್ದೆಗೆ ಜಾರಿದ್ದಾಳೆ. ಬಾಲಕಿಯೊಬ್ಬಳು ಕೊಠಡಿಯಲ್ಲಿ ಇದ್ದಾಳೆಂಬ ಸಣ್ಣ ಸುಳಿವು ಅವರಲ್ಲಿ ಇರಲಿಲ್ಲ, ಜ್ಯೋತ್ಸ್ನಾ ಎಚ್ಚರವಾದಾಗ, ನಿರ್ಜನ ಶಾಲೆಯಲ್ಲಿ ತಾನು ಒಬ್ಬಂಟಿಯಾಗಿರುವುದನ್ನು ತಿಳಿದು ಭಯಗೊಂಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ತರಗತಿಯ ಕಿಟಕಿಯ ಕಬ್ಬಿಣದ ಸರಳುಗಳ ಮಧ್ಯೆ ನುಸುಳಿ ಹೋಗಲು ಯತ್ನಿಸಿದ್ದಾಳೆ. ಸರಳುಗಳ ಮಧ್ಯೆ ದೇಹ ಜಾರಿದರು ತಲೆ ಸಿಲುಕಿಕೊಂಡಿತ್ತು. ಹೀಗಾಗಿ ಬಾಲಕಿ ರಾತ್ರಿ ಇಡೀ ಹಾಗೆಯೇ ಕಳೆದಿದ್ದಾಳೆ.
ಇತ್ತ ಚಿಂತೆಗೀಡಾದ ಜ್ಯೋತ್ಸ್ನಾಳ ಪೋಷಕರು ರಾತ್ರಿಯಿಡೀ ಅವಳನ್ನು ಹುಡುಕಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಶುಕ್ರವಾರ (ಆಗಸ್ಟ್ 22, 2025) ಬೆಳಗ್ಗೆ ಶಾಲೆ ಮತ್ತೆ ತೆರೆದಾಗ, ಕಿಟಕಿಯ ಕಂಬಿಯ ಮೂಲಕ ಪುಟ್ಟ ಹುಡುಗಿ ನೇತಾಡುತ್ತಿರುವುದನ್ನು ಕಂಡು ಅವರು ಗಾಬರಿಗೊಂಡಿದ್ದಾರೆ. ಕೂಡಲೇ ಜ್ಯೋತ್ಸ್ನಾಳ ರಕ್ಷಣೆಗೆ ಧಾವಿಸಿದ ಗ್ರಾಮಸ್ಥರು ಕಬ್ಬಿಣದ ಸರಳುಗಳನ್ನು ಬಗ್ಗಿಸಿ ಅವಳನ್ನು ಬಿಡುಗಡೆ ಮಾಡಿದರು. ನಂತರ ಅವಳನ್ನು ಕಿಯೋಂಜಾರ್ ಜಿಲ್ಲಾಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವಳನ್ನು ಪರೀಕ್ಷಿಸಿ ಪೋಷಕರಿಗೆ ಹಸ್ತಾಂತರಿಸಿದರು.
ಶಿಕ್ಷಕರು ಮತ್ತು ಸಿಬ್ಬಂದಿಯ ಕಡೆಯಿಂದ ಇದೊಂದು ಸಂಪೂರ್ಣ ನಿರ್ಲಕ್ಷ್ಯದ ಘಟನೆ ಅವರು ಯಾವುದೇ ಮಗುವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಿತ್ತು. ನನ್ನ ಪುಟ್ಟ ಮಗಳು ರಾತ್ರಿಯನ್ನು ಹೇಗೆ ಕಳೆದಳು ಎಂಬುದನ್ನು ಊಹಿಸಿಯೇ ಭಯವಾಗುತ್ತಿದೆ ಎಂದು ಜ್ಯೋತ್ಸ್ನಾ ಅವರ ತಾಯಿ ಜುನು ದೇಹುರಿ ಹೇಳಿದ್ದಾರೆ.
ಬಾಲಕಿ ತರಗತಿಯೊಳಗೆ ನಿದ್ರಿಸಿದ್ದಳು, ಕೊಠಡಿಯಲ್ಲಿ ಮಕ್ಕಳು ಇದ್ದಾರೋ ಇಲ್ಲವೋ ಎಂದು ಸರಿಯಾದ ತಪಾಸಣೆ ಮಾಡದೇ ಲಾಕ್ ಮಾಡಲಾಗಿತ್ತು. ಈ ಘಟನೆ ದುರದೃಷ್ಟಕರ ಎಂದು ಶಾಲೆಯ ಶಿಕ್ಷಕಿ ಸಂಜಿತಾ ದಾಶ್ ಹೇಳಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರಾದ ಗೌರಹರಿ ಮೊಹಂತ ಅವರನ್ನು ನಿರ್ಲಕ್ಷ್ಯದ ಆರೋಪದಡಿ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಮಾಸ್ಕ್‌ಮ್ಯಾನ್ ಬಂಧನ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಮಾಸ್ಕ್ ಮ್ಯಾನ್ ಚಿನ್ನಯ್ಯನ ಅಣ್ಣನೂ ಎಸ್‌ಐಟಿ ವಶಕ್ಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ