
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿ ದೇವಸ್ಥಾನದ ( Dharmasthala Temple ) ವಿರುದ್ಧ ಮಸಿ ಬಳಿಯಲು ಒಂದಿಷ್ಟು ಸಂಚುಗಳು ನಡೆಯುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದಹಾಗೆ ಸೌಜನ್ಯ ಅತ್ಯಾ*ಚಾರ ಕೇಸ್ ಸಂಬಂಧಪಟ್ಟಂತೆ ಅಲ್ಲಿನ ಧರ್ಮಾಧಿಕಾರಿಗಳ ಹೆಸರಿಗ ಮಸಿ ಬಳೆಯಲು ಕೆಲವರು ಪಣ ತೊಟ್ಟು ನಿಂತಿದ್ದಾರೆ ಎಂಬ ಆರೋಪ ಇದೆ. ಈ ರೀತಿ ಪದೇ ಪದೇ ಆರೋಪ ಬರಲು ಕಾರಣ ಏನು? ಈ ಆರೋಪದಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಅತ್ತ ಸುಜಾತಾ ಭಟ್ ಎನ್ನುವವರು ನಮ್ಮ ತಾತನ ಆಸ್ತಿಯಾಗಿರೋ ದೇವಸ್ಥಾನ ಜೈನರ ( ವೀರೇಂದ್ರ ಹೆಗ್ಗಡೆ ) ಕುಟುಂಬಕ್ಕೆ ಸೇರಿತು ಎನ್ನುವ ಬೇಸರದಲ್ಲಿ ಅನನ್ಯಾ ಭಟ್ ಎನ್ನುವ ನನ್ನ ಮಗಳ ಕೊಲೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಮತ್ತೆ ಅವರು ನನಗೆ ಮಗಳೇ ಇಲ್ಲ ಎಂದು ಕೂಡ ಹೇಳಿದ್ದಾರೆ. ಒಂದು ಕಡೆ ಧರ್ಮಸ್ಥಳದಲ್ಲಿ ಅತ್ಯಾ*ಚಾರ ಮಾಡಿ ಸಾವಿರಾರು ಹೆಣಗಳನ್ನು ಹೂಳಲಾಗಿದೆ ಎಂದು ಹೇಳಲಾಗಿದ್ದು, ಅಲ್ಲಿ ಈಗ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅಲ್ಲಿ ಬಾವಿ ಆಳದಷ್ಟು ಅಗೆದರೂ ಕೂಡ ಬುರುಡೆ, ಅಸ್ತಿಪಂಜರಗಳು ಸಿಗುತ್ತಿಲ್ಲ.
ಒಂದು ಸತ್ಯ ವಿಚಾರ ಇದೆ. ಧರ್ಮಸ್ಥಳದ ಮಂಜುನಾಥೇಶ್ವರನ ಪುನಃ ಪ್ರತಿಷ್ಠೆ ಮಾಡಿದ ಏಕೈಕ ವೈಷ್ಣವ ಯತಿ ಶ್ರೀ ಶ್ರೀ ಶ್ರೀ ವಾದಿರಾಜರು. ಭಾವೀ ಸಮೀರರೆಂದೇ ಇತಿಹಾಸದಲ್ಲಿ ಉಲ್ಲೇಖ ಇದೆ. ಎಲ್ಲಿ ವಾದಿರಾಜರು ನಡೆದಾಡುವರೋ ಅವರ ಜತೆಗೇ ಭೂತರಾಜರು( ಭಾವೀ ರುದ್ರದೇವರು) ಇರುತ್ತಾರೆ. ಆದರೆ ವಾದಿರಾಜ ಪರಂಪರೆಯ 33ನೇ ಗುರುಗಳಾದ ವಿಶ್ವೋತ್ತಮ ತೀರ್ಥರು ಧರ್ಮಸ್ಥಳಕ್ಕೆ ವಿಮುಖರಾದರೋ ( ಅನೇಕ ಕಾರಣಗಳಿವೆ .ಅವರಿಗೆ ಅಗೌರವಗಳಾಗಿವೆ.ಅವರು ನೊಂದುಕೊಂಡಿದ್ದರು. ನನ್ನಲ್ಲೇ ಒಮ್ಮೆ ಹೇಳಿದ್ದರು ) ಅಂದಿನಿಂದ ಇದು ಗುರು ಶಾಪವೇವಾಗಿದೆ. ವಿಶ್ವೋತ್ತಮ ತೀರ್ಥರು ವಾದಿರಾಜರ ಪುನರಾವತಾರ ಎಂದೇ ಪ್ರಖ್ಯಾತಿ.
ನಿಸ್ವಾರ್ಥ,ಫಲಾಪೇಕ್ಷೆ ಬಯಸದ ಕರುಣಾಳು ಮೂರ್ತಿ ಯಾವಾಗ ನೊಂದುಕೊಂಡರೋ ಅಂದಿನಿಂದ ಧರ್ಮಸ್ಥಳದಲ್ಲಿ ಒಂದಲ್ಲ ಒಂದು ರೀತಿಯ ಅಪವಾದಗಳು ಬರತೊಡಗಿದವು. ಈಗಿನ ಸೋದೆಯ ಯತಿಗಳನ್ನು ಕರೆಸಿ ದೇವರಿಗೆ ಅರ್ಚನೆ ಮಾಡಿಸಿ,ಭೂತರಾಜರಿಗೆ ಫಲ ಸಮರ್ಪಣೆ ಮಾಡುವಲ್ಲಿಯವರೆಗೆ ಈ ತಕರಾರು ನಿಲ್ಲೋದು ಕಷ್ಟ. ಯತಿಗಳಿಗೆ ಬೇರೇನೂ ಬೇಡ. ಅವರಿಗೆ ಶರಣಾದರೆ ಸಾಕು. ಅನುಗ್ರಹ ನೀಡಿಯೇ ನೀಡುತ್ತಾರೆ.ಇದು ಕೇವಲ ಅಗೌರವ, ಪ್ರತಿಷ್ಟೆಗಳಿಂದ ಮಾತ್ರ ವಿಮುಖರಾದದ್ದೇ ವಿನಃ ಬೇರಾವ ಬೇಡಿಕೆಗಳಿಂದಾದದ್ದಲ್ಲ. ನಮಗೆ ಆ ಪರಂಪರೆ, ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ, ಬರುವ ಭಕ್ತಾದಿಗಳಿಗೆ ಕ್ಷೇಮ ಆದರೆ ಇನ್ನೇನೂ ಬೇಕಿಲ್ಲ. ದೇಶಕ್ಕೆ ಧರ್ಮಸ್ಥಳದ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾಗದು. ಅದೇ ರೀತಿ ಸೋದೆ ಮಠದ ವಾದಿರಾಜ ಯತಿಗಳಿಗೆ, ಮಠಕ್ಕೆ ಗೌರವ ಸ್ಮರಣೆಯನ್ನೂ ಅಲ್ಲಿನ ಆಡಳಿತ ಧರ್ಮಾಧಿಕಾರಿಗಳು ಕೊಡಬೇಕು. ಇಷ್ಟೇ ವಿಚಾರ ಇರೋದು.
ಅಂದಹಾಗೆ ಉತ್ತರ ಕನ್ನಡ ಜಿಲ್ಲೆಯ ಸೋಂದಾದಲ್ಲಿ ವಾದಿರಾಜ ಮಠ ಇದೆ. ಶ್ರೀ ವಾದಿರಾಜ ತೀರ್ಥರು ಈ ಮಠವನ್ನು ಕಟ್ಟಿದ್ದಾರೆ.
ಅಂದಹಾಗೆ ಪ್ರಕಾಶ್ ಅಮ್ಮಣ್ಣಾಯ ಪೋಸ್ಟ್‌ಗೆ ಜಗದೀಶ್ ಐತಾಳ್ ಎನ್ನುವವರು, “ಒಂದು ಸತ್ಯ ವಿಚಾರ ಇದೆ. ಉಡುಪಿಯ ಅನಂತೇಶ್ವರ ದೇವಸ್ಥಾನದ ವಿಚಾರದಲ್ಲಿ ಕೂಡ ಹೀಗೆ ಆಗಿದೆ ಗುರುಗಳೇ. ಅದು ಇಂದಿಗೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಶೈವ ದೇವಸ್ಥಾನ. ಹಿಂದೆ ಅಲ್ಲಿದ್ದ ನಂದಿಯನ್ನು ಬೇರೊಂದು ದೇವಸ್ಥಾನಕ್ಕೆ ಸಾಗಿಸಿದ್ದಾರೆ. ತೀರಾ ಇತ್ತೀಚೆಗೆ ಅಷ್ಟಮಠದ ಸ್ವಾಮಿಗಳೊಬ್ಬರಿಗೆ ಅದು ಪರಶುರಾಮ ಅಂತ ಯಾವಾಗ ಕನಸು ಬಿತ್ತೋ ಅಲ್ಲಿನ ಪೂಜಾ ಪದ್ಧತಿಗಳೆಲ್ಲ ಬದಲಾಗಿಬಿಟ್ಟಿದ್ದಾವೆ. ಅಲ್ಲಿನ ಮಾಧ್ವರು ಯಾವಾಗ ಉಡುಪಿಯ ಮಹಾದೇವ ಶಿವನಿಂದ ವಿಮುಖರಾದರೋ ಅಂದಿನಿಂದ ಇದು ಅಷ್ಟಮಠಗಳ ಉನ್ನತಿಗೆ ಶಾಪವಾಗಿದೆ. ನಿಸ್ವಾರ್ಥ, ಫಲಾಪೇಕ್ಷೆ ಬಯಸದ ಕರುಣಾಳುಗಳಾದ ಶೈವರು ಯಾವಾಗ ನೊಂದುಕೊಂಡರೋ ಅಂದಿನಿಂದ ಕ್ಷೇತ್ರಕ್ಕೆ ಒಂದಲ್ಲ ಒಂದು ರೀತಿಯ ಅಪವಾದಗಳು ಬರತೊಡಗಿದೆ. ಎಲ್ಲಿಯವರೆಗೆ ಅಪಚಾರ ಎಸಗಿದವರನ್ನು ಕರೆಸಿ ದೇವರ ಮುಂದೆ ಕ್ಷಮಾಪಣೆ ಹೇಳಿಸದ ತನಕ ಈ ಕಳಂಕಗಳು ನಿಲ್ಲೋದು ಕಷ್ಟ. ಶಿವನಿಗೆ ಬೇರೇನೂ ಬೇಡ, ಅವನಿಗೆ ಶರಣಾದರೆ ಸಾಕು. ಅನುಗ್ರಹ ನೀಡೀಯೇ ನೀಡುತ್ತಾನೆ. ಅದು ಕೇವಲ ಶಿವನನ್ನು ವಿಷ್ಣು ಎಂದು ಪೂಜಿಸಿದ ಫಲವಾಗಿ ಶೈವರಿಗೆ ಬೇಸರವಾಗಿದ್ದಷ್ಟೇ ವಿನಃ ಬೇರಾವ ಬೇಡಿಕೆಗಳೂ ಇಲ್ಲ. ನಮಗೆ ನಮ್ಮ ಪರಂಪರೆ, ದೇವಸ್ಥಾನದ ಪಾವಿತ್ರ್ಯತೆ, ಭಕ್ತಾದಿಗಳ ಭಾವನೆಗೆ ಬೆಲೆ ಕೊಟ್ಟರೆ ಸಾಕು, ಇನ್ನೇನೂ ಬೇಕಿಲ್ಲ. ದೇಶ ಧರ್ಮಕ್ಕೆ ಮಾಧ್ವ ಮತದ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾಗದು. ಅದೇ ರೀತಿ ಶೈವ ಪರಂಪರೆಗೂ ಮಾಧ್ವರು ಗೌರವ ಸ್ಮರಣೆಯನ್ನು ಕೊಡಬೇಕು. ಇಷ್ಟೇ ವಿಚಾರ ಇರೋದು. ಧರ್ಮಸ್ಥಳ ದಲ್ಲಿಯೂ ಹೀಗೆ ಆಗಿರಬಹುದು” ಎಂದು ಉತ್ತರ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ