
ಓಡಿಶಾ: ಶಾಲೆಗೆ ಮಕ್ಕಳನ್ನು ಕಳುಹಿಸುವಾಗ ಪೋಷಕರು ತಮ್ಮ ಮಗು ಅಲ್ಲಿ ಸುರಕ್ಷಿತವಾಗಿದೆ ಮತ್ತು ಯಾವುದೇ ತೊಂದರೆಯಾಗುವುದಿಲ್ಲ ಎಂಬ ನಂಬಿಕೆಯಲ್ಲಿರುತ್ತಾರೆ. ಒಂದು ವೇಳೆ ಸಮಸ್ಯೆ ಎದುರಾದರೂ ಶಿಕ್ಷಕರು ಸಹಾಯ ಮಾಡುತ್ತಾರೆ ಎಂಬ ಭರವಸೆ ಇರುತ್ತದೆ. ಆದರೆ ಶಿಕ್ಷಕರೇ ಮೃಗಗಳಾದರೆ ಏನಾಗಬಹುದು?. ಇಂತಹದ್ದೇ ಒಂದು ಪ್ರಕರಣ ಓಡಿಶಾದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಶಿಕ್ಷಕರು ಮತ್ತು ಪ್ಯೂನ್ ಅತ್ಯಾ*ಚಾರ ಎಸಗುತ್ತಿದ್ದರು.
ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಯೊಂದರಲ್ಲಿ ಈ ಬಾಲಕಿಯ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಅತ್ಯಾ*ಚಾರ ನಡೆದಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ನಾಲ್ವರು ಶಿಕ್ಷಕರು ಮತ್ತು ಒಬ್ಬ ಪ್ಯೂನ್ ಅನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಮಹಿಳಾ ಶಿಕ್ಷಕಿಯೂ ಸೇರಿದ್ದು, ಈ ಮೃಗಗಳನ್ನು ರಕ್ಷಿಸಲು ಆಕೆ ಸತತವಾಗಿ ಪ್ರಯತ್ನಿಸುತ್ತಿದ್ದಳು ಎಂಬ ಆರೋಪವಿದೆ.
ಕಳೆದ ತಿಂಗಳು ಸಂತ್ರಸ್ತ ಬಾಲಕಿ ತನ್ನ ನೋವನ್ನು ತಾಯಿಯ ಮುಂದೆ ತೋಡಿಕೊಂಡಾಗ ಈ ವಿಚಾರ ಹೊರಬಂದಿದೆ. ಇದರ ಬೆನ್ನಲ್ಲೇ ಕುಟುಂಬದವರು ಫೆಬ್ರವರಿ 18 ರಂದು ಬಾಲ ಕಲ್ಯಾಣ ಸಮಿತಿಗೆ (CWC) ದೂರು ನೀಡಿದ್ದಾರೆ. ದೂರು ಬಂದ ಮರುದಿನವೇ ಸಮಿತಿಯ ಸದಸ್ಯರು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿದ ಅವರು ತನಿಖೆಯನ್ನು ತೀವ್ರಗೊಳಿಸಿದರು.
ಪೊಲೀಸರು ಕೈಗೊಂಡ ಕ್ರಮವೇನು?
ಪೊಲೀಸರು ಪೋಕ್ಸೋ - POCSO ಮತ್ತು BNS ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. SP ಸಿದ್ಧಾರ್ಥ್ ಕಟಾರಿಯಾ ಮಾತನಾಡಿ, "ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಶಾಲೆಗೆ ಸಂಬಂಧಿಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ಇಂದು (ಭಾನುವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದಿದ್ದಾರೆ. "ಇದೊಂದು ಗಂಭೀರ ಪ್ರಕರಣವಾದ್ದರಿಂದ ತನಿಖೆಯ ಉಸ್ತುವಾರಿ ವಹಿಸಲು ಕೇಂದ್ರ ಕಚೇರಿಯಿಂದ ಮಹಿಳಾ ಕ್ರೈಂ ವಿಭಾಗದ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಶಿಕ್ಷಕರು ದೀರ್ಘಕಾಲದವರೆಗೆ ಬಾಲಕಿಯ ಮೇಲೆ ಪದೇ ಪದೇ ಅತ್ಯಾ*ಚಾರ ಎಸಗುತ್ತಿದ್ದರು ಎಂಬ ಆರೋಪವಿದೆ. ಒಬ್ಬ ಮಹಿಳಾ ಶಿಕ್ಷಕಿ ಸೇರಿದಂತೆ ಇತರ ಕೆಲವು ಶಿಕ್ಷಕರು ಆರೋಪಿಗಳಿಗೆ ಸಹಾಯ ಮಾಡಿದ್ದಲ್ಲದೆ, ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಅಪಾಯ ಕಾದಿದೆ ಎಂದು ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿದ್ದರು.
ಶಾಲೆಯ ಮೇಲಿರುವ ಆರೋಪಗಳೇನು?
ಶಾಲಾ ಆಡಳಿತ ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಕುಟುಂಬದವರು ಸಿಡಬ್ಲ್ಯೂಸಿಗೆ ದೂರು ನೀಡಿದಾಗ ಮಾತ್ರ ನಮಗೆ ಈ ವಿಷಯ ತಿಳಿಯಿತು ಎಂದು ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ. ಸವಿಸ್ತಾರ ತನಿಖೆಯ ನಂತರವೇ ಸತ್ಯ ಹೊರಬರಲಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ